ಚಾಮರಾಜನಗರ, ನವೆಂಬರ್ 20: ಚಿರತೆಯನ್ನು ಗುಂಡಿಕ್ಕಿ ಕೊಂದ ಆರೋಪದ ಮೇಲೆ ಕೊಳ್ಳೇಗಾಲದ (Kollegala) ಚಿಕ್ಕಲ್ಲೂರು ಬಳಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಚಿರತೆಯ (Leopard) ಮೃತದೇಹದ ಅವಶೇಷಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶಂಕಿತ ಆರೋಪಿಗಳಾದ ಶಾಂತರಾಜು ಮತ್ತು ಅರ್ಜುನ್ ಎಂಬುವರಿಂದ ಎರಡು ದೇಶೀ ನಿರ್ಮಿತ ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಪೊಲೀಸ್ ಸಿಬ್ಬಂದಿಯ ತಂಡವು ಆರೋಪಿಗಳನ್ನು ಶನಿವಾರ ಬೆಳಗ್ಗೆಯೇ ಬಂಧಿಸಿದ್ದು, ಸೋಮವಾರ ಆ ಕುರಿತ ಮಾಹಿತಿ ಬಿಡುಗಡೆ ಮಾಡಿದೆ.
ಖಚಿತ ಸುಳಿವಿನ ಮೇರೆಗೆ ಚಿಕ್ಕಲ್ಲೂರು ಬಳಿ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಆರೋಪಿಗಳನ್ನು ಪೊಲೀಸರು ತಪಾಸಣೆಗೆ ಒಳಪಡಿಸಿದ್ದಾರೆ. ಪರಿಶೀಲಿಸಿದಾಗ ಅವರ ಬಳಿ ಎರಡು ದೇಶೀ ನಿರ್ಮಿತ ಪಿಸ್ತೂಲ್‌ಗಳು ಪತ್ತೆಯಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಲ್ಕೈದು ದಿನಗಳ ಹಿಂದೆ ಚಿರತೆಯನ್ನು ಕೊಂದಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದು, ನಟರಾಜ್ ಎಂದು ಗುರುತಿಸಲಾಗಿರುವ ಮೂರನೇ ಆರೋಪಿಯ ಬಗ್ಗೆಯೂ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾವೇರಿಪುರದ ಕಗ್ಗಲಿಪುರ ಅರಣ್ಯ ಪ್ರದೇಶದಲ್ಲಿ ಮೂವರು ಚಿರತೆಯನ್ನು ಕೊಂದಿದ್ದರು ಮತ್ತು ಅದರ ಚರ್ಮವನ್ನು ತೆಗೆಯುತ್ತಿರುವಾಗ ಯಾರೋ ತಮ್ಮ ಕಡೆಗೆ ಬರುವ ಶಬ್ದ ಕೇಳಿ ಚಿರತೆಯ ಶವವನ್ನು ಬಿಟ್ಟು ಸ್ಥಳದಿಂದ ಓಡಿಹೋಗಿದ್ದರು. ಈ ವಿಚಾರವನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ನಂತರ ಇಬ್ಬರು ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಕಗ್ಗಲಿಪುರ ಅರಣ್ಯ ಪ್ರದೇಶದಿಂದ ಪೊಲೀಸರು ಚಿರತೆಯ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿರುವುದಾಗಿ ‘ಪಿಟಿಐ’ ಸುದ್ದಿಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯಲ್ಲಿ ಆರಂಭವಾಗಲಿದೆ ಹೊಸ ಹುಲಿ ಸಫಾರಿ ಜೋನ್
ಬಂಧಿತರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
‘ನಾವು ಇಬ್ಬರನ್ನು ಬಂಧಿಸಿದ್ದೇವೆ ಮತ್ತು ಅವರಿಂದ ಎರಡು ದೇಶೀ ನಿರ್ಮಿತ ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿದ್ದೇವೆ. ಕೃತ್ಯದಲ್ಲಿ ಅವರೊಂದಿಗೆ ಶಾಮೀಲಾಗಿರುವ ಮೂರನೇ ಆರೋಪಿಯನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ