ನಾಲ್ಕು ವರ್ಷಗಳ ಹೋರಾಟಕ್ಕೆ ಜಯ: ಚಾಮರಾಜನಗರ ಆಕ್ಸಿಜನ್ ದುರಂತ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ

ಚಾಮರಾಜನಗರ ಆಕ್ಸಿಜನ್ ದುರಂತದ ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಮೇ 2021ರಲ್ಲಿ ಆಕ್ಸಿಜನ್ ಕೊರತೆಯಿಂದ 36 ಕೋವಿಡ್ ರೋಗಿಗಳು ಮೃತಪಟ್ಟಿದ್ದರು. ಈ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡಲು ನಿರ್ಧರಿಸಲಾಗಿದ್ದು, ಜನವರಿ 26ರಂದು ಗಣರಾಜ್ಯೋತ್ಸವದಂದು ನೇಮಕಾತಿ ಆದೇಶಗಳನ್ನು ವಿತರಿಸಲಾಗುವುದು. ಕಾಂಗ್ರೆಸ್ ನೀಡಿದ್ದ ಭರವಸೆಯನ್ನು ಈಗ ಈಡೇರಿಸಿದ್ದು, ಸಂತ್ರಸ್ತರ ಹಲವು ವರ್ಷಗಳ ಹೋರಾಟಕ್ಕೆ ನ್ಯಾಯ ಸಿಕ್ಕಿದೆ.

ನಾಲ್ಕು ವರ್ಷಗಳ ಹೋರಾಟಕ್ಕೆ ಜಯ: ಚಾಮರಾಜನಗರ ಆಕ್ಸಿಜನ್ ದುರಂತ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ
ಚಾಮರಾಜನಗರ ಆಕ್ಸಿಜನ್ ದುರಂತ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ
Edited By:

Updated on: Jan 10, 2026 | 3:04 PM

ಚಾಮರಾಜನಗರ, ಜನವರಿ 10:  ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತ ಪ್ರಕರಣದ ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಕೊನೆಗೂ ಸಿಹಿ ಸುದ್ದಿ ಲಭಿಸಿದೆ. ಸಂತ್ರಸ್ತ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲು ಸರ್ಕಾರ ಮುಂದಾಗಿದ್ದು, ಗಣರಾಜ್ಯೋವದ ದಿನವೇ ನೇಮಕಾತಿ ಆದೇಶಗಳನ್ನು ನೀಡಲಾಗುವುದು ಎಂದು ಹೇಳಲಾಗಿದೆ.

ಗಣರಾಜ್ಯೋತ್ಸವದಂದೇ ನೇಮಕಾತಿ

2021ರ ಮೇ 3ರಂದು ಆಕ್ಸಿಜನ್ ಕೊರತೆಯಿಂದ ಕೋವಿಡ್ ಸೋಂಕಿತ 36 ರೋಗಿಗಳು ಮೃತಪಟ್ಟಿದ್ದ ಈ ದುರಂತ ಪ್ರಕರಣಕ್ಕೆ ಸಂಬಂಧಿಸಿ, ಸಂತ್ರಸ್ತ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವದ ದಿನವೇ ನೇಮಕಾತಿ ಆದೇಶಗಳನ್ನು ವಿತರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಚಾಮರಾಜನಗರದಲ್ಲಿ ತಿಳಿಸಿದ್ದಾರೆ.

ಸಂತ್ರಸ್ತರಿಗೆ ನೀಡಿದ ಭರವಸೆ ಈಡೇರಿಸಿದ ಕಾಂಗ್ರೆಸ್

ಸತತ ನಾಲ್ಕು ವರ್ಷಗಳ ಕಾಲ ಸುದೀರ್ಘ ಹೋರಾಟ ನಡೆಸಿದ ಸಂತ್ರಸ್ತ ಕುಟುಂಬಗಳಿಗೆ ಇದೀಗ ನ್ಯಾಯ ಸಿಕ್ಕಂತಾಗಿದೆ. ಕೋವಿಡ್ ಮಹಾಮಾರಿ ಕಾಲದಲ್ಲಿ ನಡೆದ ಈ ದುರ್ಘಟನೆಯು ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಆಕ್ಸಿಜನ್ ಸರಬರಾಜು ಕೊರತೆಯಿಂದ 36 ರೋಗಿಗಳು ಪ್ರಾಣ ಕಳೆದುಕೊಂಡಿದ್ದರು. ಅಂದು ವಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್ ಪಕ್ಷವು ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡುವ ಭರವಸೆ ನೀಡಿತ್ತು. ವಿಶೇಷವಾಗಿ, ಸಂತ್ರಸ್ತರ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಲಾಗಿತ್ತು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ವೇಳೆ ಕೂಡ, ಪಕ್ಷ ಅಧಿಕಾರಕ್ಕೆ ಬಂದರೆ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಘೋಷಿಸಿದ್ದರು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ಹಿನ್ನೆಲೆಯಲ್ಲಿ, ನೀಡಿದ್ದ ಭರವಸೆಯನ್ನು ಈಡೇರಿಸುವ ಮೂಲಕ ಸಂತ್ರಸ್ತ ಕುಟುಂಬಗಳಿಗೆ ಆಶಾಕಿರಣ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.