ಚಾಮರಾಜನಗರ, ಜ.26: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊರೋನಾ ವೇಳೆ ಚಾಮರಾಜನಗರ(Chamarajanagar) ದ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತ (Oxygen Tragedy)ದಲ್ಲಿ ಒಂದೇ ರಾತ್ರಿ 32 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಆಗಿನ ಸರ್ಕಾರ ಅಲ್ಪ ಸ್ವಲ್ಪ ಪರಿಹಾರ ಕೊಟ್ಟು ಕೈ ತೊಳೆದುಕೊಂಡಿತು. ನಂತರ ಕಾಂಗ್ರೆಸ್, ಆಕ್ಸಿಜನ್ ದುರಂತದಲ್ಲಿ ಸತ್ತಿದ್ದು 24 ಅಲ್ಲ 32 ಮಂದಿಯೆಂದು ಕೆಪಿಸಿಸಿ ವತಿಯಿಂದ ತಲಾ ಒಂದು ಲಕ್ಷ ಪರಿಹಾರ ಕೊಟ್ಟಿತ್ತು.ಇನ್ನು ರಾಜ್ಯದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಸಂತ್ರಸ್ತರ ಜೊತೆಗೆ ಸಂವಾದ ನಡೆಸಿ ಸರ್ಕಾರಿ ಉದ್ಯೋಗದ ಭರವಸೆ ಕೊಟ್ಟಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಬಳಿಕವೂ ಸಿಎಂ ಸಿದ್ದರಾಮಯ್ಯ, ಡಿಕೆಶಿ ಇಬ್ಬರು ಕೂಡ ಸಂತ್ರಸ್ತ ಕುಟುಂಬಕ್ಕೆ ಉದ್ಯೋಗದ ಭರವಸೆ ಕೊಟ್ಟಿದ್ದರು. ಇದೀಗ ಚಾಮರಾಜನಗರ ಉಸ್ತುವಾರಿ ಸಚಿವ ವೆಂಕಟೇಶ್ ಗಣರಾಜ್ಯೋತ್ಸವ ದಿನದಂದೆ ಗುತ್ತಿಗೆ ಆಧಾರದ ಮೇಲೆಯೇ ಕೆಲಸ ಕೊಡುವ ಘೋಷಣೆ ಮಾಡಿದ್ದಾರೆ. ಜೊತೆಗೆ ಫೆಬ್ರವರಿ 1 ರಿಂದ ಕೆಲಸಕ್ಕೆ ಹಾಜರಾಗುವಂತೆ ಸಂತ್ರಸ್ತ ಕುಟುಂಬದ ಒಬ್ಬ ವ್ಯಕ್ತಿಗೆ ಕೆಲಸ ಕೊಡುವ ಬಗ್ಗೆ ಈಗಾಗ್ಲೇ ಜಿಲ್ಲಾಡಳಿತ ಮಾಹಿತಿ ಸಂಗ್ರಹಿಸಿದೆ.
ಸರ್ಕಾರಿ ಉದ್ಯೋಗದ ಕುರಿತು ಸಂತ್ರಸ್ತ ಕುಟುಂಬದವರು ಮಾತನಾಡಿ ‘ಸದ್ಯ ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ಗುತ್ತಿಗೆ ಆಧಾರದ ಮೇಲೆ ಕೆಲಸ ಕೊಡ್ತಿರುವುದು ನಮಗೆ ಖುಷಿ ಕೊಟ್ಟಿದೆ. ಆದ್ರೆ, ಗುತ್ತಿಗೆ ಅಧಾರದ ನೌಕರಿಯಿಂದ ಅನುಕೂಲವಾಗಲ್ಲ. ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಭರವಸೆಯಂತೆ ಆದಷ್ಟು ಬೇಗ ಪರ್ಮನೆಂಟ್ ಸರ್ಕಾರಿ ನೌಕರಿ ಕೊಡಲಿ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಬಲ ತುಂಬಲೂ ಈಗಲಾದ್ರೂ ಕಾಂಗ್ರೆಸ್ ಸರ್ಕಾರ ಮನಸ್ಸು ಮಾಡಿದೆ. ಗುತ್ತಿಗೆ ಆಧಾರದ ನೌಕರಿ ಸದ್ಯದ ಮಟ್ಟಿಗೆ ಪರಿಹಾರವಾಗಬಹುದು. ಆದ್ರೆ, ನಮ್ಮೆಲ್ಲರ ಸಂಕಷ್ಟ ಪರಿಹರಿಸಬೇಕಾದರೆ ಸರ್ಕಾರಿ ನೌಕರಿ ಬೇಕೆ ಬೇಕೆಂದು ಪಟ್ಟು ಹಿಡಿದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ