Chamarajanagar: ಗೋದಾಮಿನಲ್ಲಿ ಗೆದ್ದಲು ತಿನ್ನುತ್ತಿರುವ ಕೋಟ್ಯಾಂತರ ರೂ ಮೌಲ್ಯದ ಪುಸ್ತಕಗಳು; ಹಾರಿಕೆ ಉತ್ತರ ನೀಡುತ್ತಿರುವ ಅಧಿಕಾರಿಗಳು

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 04, 2023 | 3:06 PM

ಗ್ರಾಮ‌ಮಟ್ಟದ ಗ್ರಂಥಾಲಯವನ್ನ ಉನ್ನತೀಕರಿಸುತ್ತೇವೆ, ಎಲ್ಲರಿಗೂ ಪುಸ್ತಕಗಳು ಸಿಗುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತೇವೆ ಎಂದು ಕೇಂದ್ರ ಸರ್ಕಾರದ ಬಜೆಟ್​ನಲ್ಲಿ ಹೇಳುತ್ತಿದೆ. ಇತ್ತ ರಾಜ್ಯದಲ್ಲಿ ಗ್ರಂಥಾಲಯದ ಪರಿಸ್ಥಿತಿ ಬೇರೆಯದಾಗಿದ್ದು ಗ್ರಂಥಾಲಯದ ಪ್ರಾಧಿಕಾರದಿಂದ ಬಂದ ಕೋಟ್ಯಾಂತರ ರೂ ಮೌಲ್ಯದ ಪುಸ್ತಕಗಳು ಗೋದಾಮಿನಲ್ಲಿ ಗೆದ್ದಲು ಹಿಡಿಯುತ್ತಿದೆ.

Chamarajanagar: ಗೋದಾಮಿನಲ್ಲಿ ಗೆದ್ದಲು ತಿನ್ನುತ್ತಿರುವ ಕೋಟ್ಯಾಂತರ ರೂ ಮೌಲ್ಯದ ಪುಸ್ತಕಗಳು; ಹಾರಿಕೆ ಉತ್ತರ ನೀಡುತ್ತಿರುವ ಅಧಿಕಾರಿಗಳು
ಕೋಟ್ಯಾಂತರ ರೂಪಾಯಿ ವೆಚ್ಚದ ಪುಸ್ತಕಗಳು ಗೆದ್ದಿಲು ತಿನ್ನತ್ತಿದ್ದು, ಹಾರಿಕೆ ಉತ್ತರ ನೀಡುತ್ತಿರುವ ಅಧಿಕಾರಿಗಳು
Follow us on

ಚಾಮರಾಜನಗರ: ಪುಸ್ತಗಳೆಂದರೆ ಬೆಲೆಕಟ್ಟಲಾಗದ ಆಸ್ತಿ, ಹರಿದ ಬಟ್ಟೆ ಹಾಕಿದರೂ ಪರವಾಗಿಲ್ಲ ಕೈಯಲ್ಲೊಂದು ಪುಸ್ತಕ ಇರಲಿ ಅಂತ ಡಾ. ಬಿ.ಆರ್. ಅಂಬೇಡ್ಕರ್ ಪುಸ್ತಕಗಳ ಮಹತ್ವ ಸಾರಿದ್ದಾರೆ. ಪ್ರತಿಯೊಬ್ಬರಲ್ಲಿ ಪುಸ್ತಕ ಪ್ರೀತಿ ಬೆಳೆಸಬೇಕೆಂಬ ಉದ್ದೇಶದಿಂದ ಸರ್ಕಾರ ಸಹ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ಈ ಜಿಲ್ಲೆಯ ಪುಸ್ತಕಗಳು ಸಮರ್ಪಕವಾಗಿ ಸರಬರಾಜು ಆಗದೆ 4-5 ಕೋಟಿ ರೂ ಮೌಲ್ಯದ ಪುಸ್ತಕ ಗೆದ್ದಿಲು ಹಿಡಿಯುತ್ತಿದೆ‌. ಪಾಳು ಬಿದ್ದ ಕಟ್ಟಡದಲ್ಲಿ ಮೂವರು ನೌಕರರು ಇದ್ದು ಬೆಂಗಳೂರಿನಿಂದ ಬರುವ ಪುಸ್ತಕಗಳಿಗೆ ಸೀಲು ಹಾಕಿ ಇಟ್ಟು ಕೋಟ್ಯಂತರ ಮೌಲ್ಯದ ಪುಸ್ತಕಗಳಿಗೆ ಗೆದ್ದಿಲು ಭಾಗ್ಯ ಕರುಣಿಸುತ್ತಿದ್ದಾರೆ. ಈ ಪುಸ್ತಕಗಳೆಲ್ಲ ಕಾಲ ಕಾಲಕ್ಕೆ ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳಿಗೆ ಸರಬರಾಜು ಆಗಬೇಕು. ಆದರೆ ಚಾಮರಾಜನಗರದಲ್ಲಿ ಆ ಕೆಲಸ ಕಳೆದ ಎಂಟು ವರ್ಷದಿಂದ ಆಗುತ್ತಿಲ್ಲ. ಬಿದ್ದಲ್ಲೇ ಬಿದ್ದಿರುವ ಅಮೂಲ್ಯ ಪುಸ್ತಕಗಳು ನಿಷ್ಪ್ರಯೋಜಕ ಆಗಿದೆ. ಗ್ರಂಥಾಲಯ ಪ್ರಾಧಿಕಾರ ಕೋಟಿ ರೂಪಾಯಿ ಖರ್ಚು ಮಾಡುವುದು ಏಕೆ ಎನ್ನುವ ಪ್ರಶ್ನೆ ಕಾಡುತ್ತಿದೆ.

ಪ್ರತಿಯೊಬ್ಬರಲ್ಲೂ ಪುಸ್ತಕ ಪ್ರೀತಿ ಬೆಳೆಸಬೇಕು ಎಂಬ ಕಾರಣಕ್ಕೆ ಗ್ರಾಮ ಪಂಚಾಯತಿಗೆ ಒಂದು ಗ್ರಂಥಾಲಯ ತೆರೆಯಲಾಗಿದೆ. ಜಿಲ್ಲಾ ಗ್ರಂಥಾಲಯದಿಂದ ಗ್ರಾಪಂಗೆ ಅವು ರವಾನೆ ಆಗಬೇಕು. ಹಳ್ಳಿಗಾಡಿನ ವಿದ್ಯಾವಂತ ಯುವಕರು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಉಪಯುಕ್ತವಾಗುವ ಅನೇಕ ಪುಸ್ತಕಗಳಿವೆ. ಅದೇ ರೀತಿ ಶಿವರಾಮ ಕಾರಂತ, ಕುವೆಂಪು, ಬೇಂದ್ರೆ, ತಾ.ರಾ.ಸು ಹೀಗೆ ನಾಡಿನ ಹೆಸರಾಂತ ಸಾಹಿತಿಗಳ ಪುಸ್ತಕಗಳು ಕಳೆದ ಏಳೆಂಟು ವರ್ಷಗಳಿಂದ ವಿಲೇವಾರಿಯಾಗದೆ ಇಲಿ, ಗೆದ್ದಲಿಗೆ ಆಹಾರವಾಗುತ್ತಿದೆ. ಈ ಬಗ್ಗೆ ಜಿಲ್ಲೆಯ ಗ್ರಂಥಾಲಯ ನಿರ್ದೇಶಕರನ್ನ ಪ್ರಶ್ನೆ ಮಾಡಿದ್ರೆ, ನಾವು ಪುಸ್ತಕಗಳನ್ನ ಕಾಲ ಕಾಲಕ್ಕೆ ವಿಲೇವಾರಿ ಮಾಡುತ್ತೇವೆ.ಈಗಿರುವ ಪುಸ್ತಕಗಳು ಏಪ್ರಿಲ್ ಒಳಗೆ ವಿಲೇವಾರಿ ಮಾಡಬೇಕು ಎಂದು ಉತ್ತರ ಕೊಡುತ್ತಾರೆ. ಅಷ್ಟೆ ಅಲ್ಲದೆ ಇಲ್ಲಿರೋದೆಲ್ಲ ಈ ಸಾಲಿನಲ್ಲಿ ಬಂದ ಪುಸ್ತಕಗಳೆ ಅಂತ ಅಚ್ಚರಿ ಉತ್ತರ ಕೊಡುತ್ತಿದ್ದಾರೆ.

ಇದನ್ನೂ ಓದಿ:ಚಾಮರಾಜನಗರ: ನಕಲಿ ಜಮೀನಿನ ದಾಖಲೆ ಸೃಷ್ಟಿಸಿ ಅಮಾಯಕರಿಗೆ ಮಾರಾಟ ಮಾಡಿದ ಭೂಪರು

ಪುಸ್ತಕಗಳು ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಆದರೆ ಅವುಗಳು ಈಗ ಯಾರಿಗೂ ತಲುಪದೆ ಮೂಲೆ ಸೇರಿರುವುದು ದುರಂತವೇ ಸರಿ. ಹಳೆಯ ಗೋದಾಮಿನಲ್ಲಿ ಬಂಧಿಯಾಗಿರುವ ಅಕ್ಷರಗಳು ಎಲ್ಲೆಡೆ ಪಸರಿಸಲಿ ಎಂಬುದೇ ನಮ್ಮ ಆಶಯ.

ವರದಿ: ದಿಲೀಪ್ ಚೌಡಹಳ್ಳಿ ಟಿವಿ9 ಚಾಮರಾಜನಗರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ