ಚಾಮರಾಜನಗರ: ನಕಲಿ ಜಮೀನಿನ ದಾಖಲೆ ಸೃಷ್ಟಿಸಿ ಅಮಾಯಕರಿಗೆ ಮಾರಾಟ ಮಾಡಿದ ಭೂಪರು
ಜಿಲ್ಲೆಯಲ್ಲಿ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಅಮಾಯಕರಿಗೆ ಪಂಗನಾಮ ಹಾಕಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಎನ್. ಬಾಲರಾಜು, ನಗರಸಭೆ ಹಾಲಿ ಸದಸ್ಯ ಶಿವರಾಜ್ ಸೇರಿ ಒಟ್ಟು ಐದು ಜನರ ವಿರುದ್ದ ಎಫ್ಐಆರ್ ದಾಖಲಾಗಿದೆ.
ಚಾಮರಾಜನಗರ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಎನ್. ಬಾಲರಾಜು, ನಗರಸಭೆ ಹಾಲಿ ಸದಸ್ಯ ಶಿವರಾಜ್ ಸೇರಿ ಒಟ್ಟು ಐದು ಜನ ಅಕ್ರಮವಾಗಿ ಭೂಮಿಯನ್ನ ಬೇರೆಯವರ ಖಾತೆಗೆ ಮಾಡಿಕೊಡುವ ಮೂಲಕ ಭೂಮಾಲೀಕರಿಗೆ ಪಂಗನಾಮ ಹಾಕಿದ್ದಾರೆ. ತಮಿಳುನಾಡಿನ ಚೆನ್ನೈನಲ್ಲಿ ವಾಸವಿರುವ ರತ್ನಮ್ಮ ಎನ್ನುವವರಿಗೆ ಸೇರಿದ ಜಮೀನು ಚಾಮರಾಜನಗರ ತಾಲೂಕು ಮಲ್ಲಯ್ಯನಪುರ ಗ್ರಾಮದ ಸರ್ವೇ ನಂ. 106 ಮತ್ತು 107ರಲ್ಲಿದ್ದು, ಅವರಿಗೆ ಗೊತ್ತಾಗದಂತೆ ಬೇರೆಯವರಿಗೆ ಮಾರಾಟವಾಗಿದೆ. ಒಟ್ಟು ಏಳು ಎಕರೆ ಜಮೀನು 80 ಲಕ್ಷ ರೂ ಕೊಟ್ಟು ನಟರಾಜು ಮತ್ತು ಅಬ್ದುಲ್ ರೆಹಮಾನ್ ಎಂಬುವರಿಗೆ ಮಾರಾಟ ಮಾಡಿದ್ದಾರೆಂದು ಸಂತ್ರಸ್ತೆ ರತ್ನಮ್ಮ ಚಾಮರಾಜನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಇನ್ನು ರತ್ನಮ್ಮ ಹೇಳಿಕೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ನನ್ನ ಪತಿ ವೆಂಕಟಾಚಲಂ ಮತ್ತು ಅವರ ಅಣ್ಣ ಪಳನಿಸ್ವಾಮಿ ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಜಮೀನು ಖರೀದಿ ಮಾಡಿದ್ದರು. ಈ ಜಮೀನು ಈಗಲೂ ನಮ್ಮ ಸ್ವಾಧೀನದಲ್ಲೇ ಇದೆ. ವೆಂಕಟಾಚಲಂ 2021ರಲ್ಲಿ ನಿಧನರಾದರು. ನಾವು ತಮಿಳುನಾಡಿನಲ್ಲಿ ವಾಸವಿದ್ದೇವೆ. ಇತ್ತೀಚಿಗೆ ಯಾರೋ ನಮ್ಮ ಜಮೀನು ಪರಿಶೀಲನೆ ಮಾಡುತ್ತಿದ್ದಾರೆ ಎಂದು ಪಕ್ಕದ ಜಮೀನಿನವರು ಹೇಳಿದರು. ಈ ಕುರಿತು ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಪರಿಶೀಲನೆ ನಡೆಸಿದಾಗ ತೆರಕಣಾಂಬಿಯ ವೆಂಕಟಾಚಲಂ ಮತ್ತು ಅವರ ಅಣ್ಣನ ಹೆಸರಿನ ಪಳನಿಸ್ವಾಮಿ ಎಂಬುವವರು ತಾವೇ ಮಾಲೀಕರು ಎಂದು ಜಮೀನು ಮಾರಾಟ ಮಾಡಿದ್ದಾರೆ ಎಂದು ರತ್ನಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ಈ ಅವ್ಯವಹಾರ ಉಪನೊಂದಣಾಧಿಕಾರಿಗೂ ತಿಳಿದಿಲ್ಲ. ಆರ್ಟಿಸಿ ಮತ್ತು ಆಧಾರ್ ಕಾರ್ಡ್ ಕೊಟ್ಟರೆ ನೊಂದಣಿ ಮಾಡಿಕೊಡ್ತಿವಿ. ದಾಖಲಾತಿಗಳು ಅಸಲಿಯೋ ನಕಲಿಯೋ ಎಂಬುದು ತಿಳಿಯಲ್ಲ. ಈಗ ಪೊಲೀಸರು ನಮ್ಮಿಂದ ಮಾಹಿತಿ ಕೇಳಿದ್ದು ಒದಗಿಸುತ್ತೇವೆ ಎನ್ನುತ್ತಾರೆ ಚಾಮರಾಜನಗರ ಸಬ್ ರಿಜಿಸ್ಟ್ರಾರ್. ಒಟ್ಟಾರೆ ಲಕ್ಷಾಂತರ ರೂಪಾಯಿ ಮೌಲ್ಯದ ಜಮೀನು ಕಳೆದುಕೊಂಡಿರುವ ರತ್ಮಮ್ಮ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಕ್ರಮವಾಗಿ ಖಾತೆ ಬದಲಿಸಿ ಜಮೀನು ಮಾರಾಟ ಮಾಡುವ ದಂಧೆ ಜಿಲ್ಲೆಯಲ್ಲಿ ಹರಡಿರುವ ಸಂಶಯವಿದ್ದು ಪೊಲೀಸ್ ಇಲಾಖೆ ಇದಕ್ಕೆ ಬ್ರೇಕ್ ಹಾಕಬೇಕಿದೆ.
ವರದಿ: ದಿಲೀಪ್ ಚೌಡಹಳ್ಳಿ ಟಿವಿ9 ಚಾಮರಾಜನಗರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ