Gundlu River: ಅದು ಮೂರು ದಶಕಗಳಿಂದ ನೀರಿಲ್ಲದೆ ಬರಿದಾಗಿದ್ದ ನದಿ. ನೀರಿಲ್ಲದ ಕಾರಣ ಅಂತರ್ಜಲ ಕುಸಿದು, ಸುತ್ತಲಿನ ರೈತರೂ ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಈ ಬಾರಿ ಸುರಿದ ಮಳೆಗೆ ನದಿಗೆ ಮತ್ತೆ ಜೀವಕಳೆ ಬಂದಿದೆ. ಬತ್ತಿ ಹೋಗಿದ್ದ ನದಿ ನಿರಂತರವಾಗಿ ಹರಿದು ಕೆರೆ ಕಟ್ಟೆಗಳು ತುಂಬಿವೆ. ಅದೆಲ್ಲಿ ಅಂತಿರಾ ಈ ಸ್ಟೋರಿ ನೋಡಿ. ಗುಂಡ್ಲುಪೇಟೆ … ಚಾಮರಾಜನಗರ (Chamarajanagara) ಜಿಲ್ಲೆ ಅತಿ ಕಡಿಮೆ ಮಳೆ ಬೀಳುವ ಪ್ರದೇಶವಾಗಿತ್ತು. ಯಥೇಚ್ಛಾವಾಗಿ ವನ್ಯಸಂಪತ್ತಿದ್ದರೂ, ಮಳೆ ನೆರಳು ಪ್ರದೇಶವಾಗಿದ್ದರಿಂದ ಮಳೆ ಕಡಿಮೆ ಬೀಳುತಿತ್ತು. ಇದ್ರಿಂದ ಗುಂಡ್ಲುಪೇಟೆ ಕಳೆದೆರಡು ದಶಕಗಳಿಂದ ಮತ್ತಷ್ಟು ಮಳೆ ಕಡಿಮೆಯಾಗಿ ಬರ ಆವರಿಸಿಕೊಂಡಿತ್ತು. ಆದ್ರೀಗಾ ನಿರಂತರ ಸುರಿದ ಮಳೆಗೆ ಗುಂಡ್ಲುಪೇಟೆ ತಾಲೂಕಿನಲ್ಲಿ ಬತ್ತಿಹೋಗಿದ್ದ ಗುಂಡ್ಲು ನದಿಗೆ ಮತ್ತೆ ಜೀವ ಕಳೆ ಬಂದಿದೆ. ಗೋಪಾಲಸ್ವಾಮಿ ಬೆಟ್ಟದಲ್ಲಿ ಉಗಮವಾಗಿ, ತಾಲೂಕಿನ ಕಲ್ಲುಕಟ್ಟೆ ಡ್ಯಾಂ, ಗುಂಡ್ಲುಪೇಟೆ (Gundlu Pet) ಪಟ್ಟಣದ ಸಮೀಪದ ವಿಜಯಪುರ ಅಮಾನಿಕೆರೆ ಕೋಡಿ ಬಿದ್ದು ಭಾರಿ ಪ್ರಮಾಣದ ನೀರು ಗುಂಡ್ಲು ಪಾತ್ರದಲ್ಲಿ ಯಥೇಚ್ಛಾವಾಗಿ ಹರಿಯುತ್ತಿದೆ. ಸದ್ಯ ಮೂರು ದಶಕಗಳ ಬಳಿಕೆ ಹರಿಯುತ್ತಿರುವ ನೀರು ನೋಡಲು ಪ್ರವಾಸಿಗರು ದಾಂಗುಡಿ ಇಡುತ್ತಿದ್ದಾರೆ. ನಮ್ಮೂರಿನಲ್ಲಿ ನದಿಯೊಂದು ಹರಿಯುತ್ತಿತ್ತು ಎಂಬುದೇ ಪುಳಕ ನೀಡುತ್ತಿತ್ತು. ಕುಡಿಯುವ ನೀರಿಗೂ ತತ್ವಾರವಾಗಿ ನದಿಯಿಂದ ತರುವ ಜತೆಗೆ ಕೆರೆಗಳಿಗೂ ತುಂಬಿಸುವಂತಾಗಿದ್ದ ಬಗ್ಗೆ ಬೇಸರವಾಗುತ್ತಿತ್ತು. ಈಗ ಗುಂಡ್ಲು ನದಿಗೆ ಜೀವಕಳೆ ಬಂದಿರುವುದು ಸಂತಸ ತಂದಿದೆ ಎನ್ನುತ್ತಾರೆ ಸ್ಥಳೀಯರು. (ವರದಿ: ದಿಲೀಪ್ ಚೌಡಹಳ್ಳಿ, ಟಿವಿ 9, ಚಾಮರಾಜನಗರ)
ವರುಣನ ಕೃಪೆಯಿಂದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಬೀಳುತ್ತಿರುವುದು ಹಾಗೂ ಕೆಲವು ತಿಂಗಳಿನಿಂದ ಕೆರೆಗಳಿಗೆ ನೀರು ತುಂಬಿಸುತ್ತಿರುವುದರಿಂದ ಗುಂಡ್ಲು ಪಾತ್ರದಲ್ಲಿ ನೀರು ಹರಿಯುತ್ತಿದೆ. ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಗಮನ ಹರಿಸಬೇಕಿದೆ. ಸದ್ಯ ಗುಂಡ್ಲು ಉಳಿಸಿ ಅಭಿಯಾನ ಕೂಡ ನಡೆದಿತ್ತು. ಇದೀಗಾ ಉತ್ತಮ ಮಳೆಯಿಂದ ಕೆರೆ ಕಟ್ಟೆಗಳು ತುಂಬಿ ಗುಂಡ್ಲು ಕೂಡ ಹರಿಯಲು ಆರಂಭಿಸಿದೆ. ಇದನ್ನ ಜನರು ಕೂಡ ಉಳಿಸಲು ಪ್ರಯತ್ನ ಪಡಬೇಕಿದೆ ಎನ್ನುತ್ತಾರೆ ಗುಂಡ್ಲುಪೇಟೆ ಶಾಸಕ ನಿರಂಜನಕುಮಾರ್.
ಮೂರು ದಶಕದಿಂದ ಬರದ ನಾಡಾಗಿದ್ದ ಗುಂಡ್ಲುಪೇಟೆ ಇದೀಗಾ ಮಲೆನಾಡಿನಂತಾಗುತ್ತಿರೋದು ರೈತರರಲ್ಲಿ ಸಂತಸ ಮೂಡಿಸಿದೆ. ಸದ್ಯ ಗುಂಡ್ಲು ನದಿ ಹರಿಯಲು ಆರಂಭವಾಗಿ ಕೆರೆ ಕಟ್ಟೆ ತುಂಬಿ ಕಬಿನಿಗೆ ಸೇರುತ್ತಿರೋದು ರೈತರಲ್ಲಿ ಖುಷಿ ಮೂಡಿಸಿದೆ.