ಚಾಮರಾಜನಗರ: ಅಂತರ್ಜಾತಿ ವಿವಾಹ ಆಗಿದ್ದಕ್ಕೆ ದಂಪತಿಗೆ 6 ಲಕ್ಷ ದಂಡ, ಗ್ರಾಮದಿಂದ ಬಹಿಷ್ಕಾರ ಶಿಕ್ಷೆ; ದೂರು ದಾಖಲು
ಅಂತರ್ಜಾತಿ ವಿವಾಹವಾಗಿದ್ದಕ್ಕೆ ದಂಪತಿಗೆ 6 ಲಕ್ಷ ರೂ. ದಂಡ ವಿಧಿಸಿ ಗ್ರಾಮದಿಂದ ಬಹಿಷ್ಕಾರ ಹಾಕಿರುವ ಘಟನೆ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ: ಅಂತರ್ಜಾತಿ ವಿವಾಹವಾಗಿದ್ದಕ್ಕೆ (Inter Caste Marriage) ದಂಪತಿಗೆ 6 ಲಕ್ಷ ರೂ. ದಂಡ ವಿಧಿಸಿ ಗ್ರಾಮದಿಂದ ಬಹಿಷ್ಕಾರ ಹಾಕಿರುವ ಘಟನೆ ಜಿಲ್ಲೆಯ ಕೊಳ್ಳೆಗಾಲ (Kollegala) ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ನಡೆದಿದೆ. ದಂಪತಿ 5 ವರ್ಷಗಳ ಹಿಂದಯೇ ಮದುವೆಯಾಗಿದ್ದಾರೆ. ಆದರೆ ಇವರದು ಅಂತರ್ಜಾತಿ ವಿವಾಹ ಎಂದು ತಿಳಿದ ನಂತರ ಗ್ರಾಮಸ್ಥರು ಶಿಕ್ಷೆ ವಿಧಿಸಿದ್ದಾರೆ. ಈ ಬಗ್ಗೆ ದಂಪತಿ ಮಾರ್ಚ 1ರಂದು ಕೊಳ್ಳೆಗಾಲ ಡಿವೈಎಸ್ ಕಚೇರಿಗೆ ಬಂದು ದೂರು ನೀಡಿದ್ದಾರೆ.
ಅಂತರ್ಜಾತಿ ವಿವಾಹವಾಗಿದ್ದಕ್ಕೆ ದಂಪತಿಗೆ 6 ಲಕ್ಷ ದಂಡ ಪ್ರಕರಣದ ಹಿನ್ನೆಲೆ
ಕುಣಗಳ್ಳಿ ಗ್ರಾಮದ ಉಪ್ಪಾರ ಶೆಟ್ಟಿ ಸಮುದಾಯಕ್ಕೆ ಸೇರಿದ ಗೋವಿಂದಾರಜುಗೆ ಎಂಬುವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹೂವಿನಕೊಪ್ಪಲು ಗ್ರಾಮದ ಎಸಿ ಸಮುದಾಯಕ್ಕೆ ಸೇರಿದ ಶ್ವೇತಾರ ಪರಿಚಯವಾಗುತ್ತದೆ, ಪರಿಚಯ ಪ್ರೇಮಕ್ಕೆ ತಿರುಗುತ್ತದೆ. ಪ್ರೇಮಿಗಳು ಇವರಿಬ್ಬರ ಪ್ರೇಮಕ್ಕೆ ಮನೆಯವರ ಒಪ್ಪಿಗೆ ಇರುತ್ತದೆ. ನಂತರ 2018ರ ಸೆಪ್ಟೆಂಬರ್ 19ರಂದು ಪ್ರೇಮಿಗಳು ಮಳವಳ್ಳಿ ಸಬ್-ರಿಜಿಸ್ಟರ್ ಆಫಿಸ್ನಲ್ಲಿ ಮನೆಯವರ ಸಮ್ಮುಖದಲ್ಲಿ ವಿವಾಹವಾಗುತ್ತಾರೆ.
ಗೋವಿಂದರಾಜು ಮಳವಳ್ಳಿಯಲ್ಲಿ ಮನೆ ಮಾಡಿಕೊಂಡು ಕೆಲಸ ನಿರ್ವಹಿಸುತ್ತಿದ್ದರು. ಆದಾಗ ಗೋವಿಂದರಾಜು ಹಾಗೂ ಶ್ವೇತಾ ಕುಣಗಳ್ಳಿ ಗ್ರಾಮಕ್ಕೆ ಬಂದು ಹೋಗುತ್ತಿದ್ದು, ಹೀಗೆ ಐದು ವರ್ಷದಿಂದ ಜೀವನ ನಡೆಸುತ್ತಿದ್ದರು. ಆದರೆ ಗೋವಿಂದರಾಜು ಅವರ ಮನೆಯಲ್ಲಿ ಅಂತರ್ಜಾತಿ ವಿವಾಹ ಎಂದು ತಿಳಿದಿದ್ದರೂ ಸಹ ಮನೆಯವರು ಯಾರು ಸಹ ತೊಂದರೆ ನೀಡಲಿಲ್ಲ. ತಿಂಗಳಿಗೆ 2 ರಿಂದ 3 ಬಾರಿ ಗ್ರಾಮಕ್ಕೆ ಬಂದು ಹೋಗುತ್ತಿದ್ದರು.
ಕಳೆದ ತಿಂಗಳು ಹೀಗೆ ಗ್ರಾಮಕ್ಕೆ ಬಂದಾಗ, ಗೋವಿಂದರಾಜು ಅವರ ಅಕ್ಕಪಕ್ಕದ ಮನೆಯವರು ಶ್ವೇತಾಳ ಜಾತಿ ಬಗ್ಗೆ ವಿಚಾರಿಸಿದ್ದಾರೆ. ಆಗ ಶ್ವೇತಾ ದಲಿತ ಜನಾಂಗಕ್ಕೆ ಸೇರಿದವಳು ಎಂದು ತಿಳಿಯುತ್ತದೆ. ನಂತರ ಅಕ್ಕಪಕ್ಕದ ಮನೆಯವರು ಗ್ರಾಮದ ಹಿರಿಯರಿಗೆ ವಿಷಯ ತಿಳಿಸುತ್ತಾರೆ. ಫೆಬ್ರವರಿ 23 ರಂದು ಗ್ರಾಮದ ಹಿರಿಯರು ಪಂಚಾಯಿತಿ ಸೇರುತ್ತಾರೆ. ಈ ವೇಳೆ ವೆಂಕಟೇಶ್ ಶೆಟ್ಟಿ ಮತ್ತು ಸಂಗಮ್ಮ ಗೋವಿಂದರಾಜು ಅವರ ಪಾಲಕರನ್ನು ಕರೆಸಿ 3 ಲಕ್ಷ ದಂಡವನ್ನು ಮಾರ್ಚ್ 1ರ ಒಳಗಾಗಿ ಕಟ್ಟುವಂತೆ ಶಿಕ್ಷೆ ವಿಧಿಸುತ್ತಾರೆ.
ಈ ವಿಷಯ ತಿಳಿದ ದಂಪತಿ ಕೊಳ್ಳೆಗಾಲ ಡಿವೈಎಸ್ಪಿ ಕಚೇರಿಗೆ ತೆರಳಿ 12 ಜನರ ವಿರುದ್ಧ ದೂರು ನೀಡುತ್ತಾರೆ. ಈ ಸುದ್ದಿಯನ್ನು ತಿಳಿದ ಗ್ರಾಮಸ್ಥರು ಗೋವಿಂದರಾಜ್ ಕುಟುಂಬಕ್ಕೆ ವಿಧಿಸಿದ ದಂಡವನ್ನು 6 ಲಕ್ಷಕ್ಕೆ ಹೆಚ್ಚಿಸುತ್ತಾರೆ. ಅಷ್ಟೇ ಅಲ್ಲದೆ ಗ್ರಾಮದಿಂದ ಕುಟಂಬವನ್ನು ಹೊರ ಹಾಕುತ್ತಾರೆ. ಮತ್ತು ಗ್ರಾಮದ ಅಂಗಡಿಗಳಿಂದ ಕುಟುಂಬ ರೇಶನ್, ತರಕಾರಿ, ಹಾಲು ಮತ್ತು ನೀರನ್ನು ಸಹ ತೆಗೆದುಕೊಳ್ಳುವಂತಿಲ್ಲ ಎಂದು ತೀರ್ಪು ನೀಡಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ