ಚಾಮರಾಜನಗರ ಜಿಲ್ಲೆಯ ಕಲ್ಲು ಕ್ವಾರಿಗಳಿಗೆ ಡಿಸಿ ನೇತೃತ್ವದಲ್ಲಿ ತಜ್ಞರ ತಂಡ ಭೇಟಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 06, 2022 | 1:26 PM

ಜಿಲ್ಲಾಧಿಕಾರಿ ಗುಂಡ್ಲುಪೇಟೆ ವ್ಯಾಪ್ತಿಯ ಹಿರೀಕಾಟಿ, ರಂಗೂಪುರ, ಬೆಳಚಲವಾಡಿ, ಹಸಗೂಲಿ ಕ್ವಾರಿಗಳಿಗೆ ಭೇಟಿ ನೀಡಿದ್ದರು

ಚಾಮರಾಜನಗರ ಜಿಲ್ಲೆಯ ಕಲ್ಲು ಕ್ವಾರಿಗಳಿಗೆ ಡಿಸಿ ನೇತೃತ್ವದಲ್ಲಿ ತಜ್ಞರ ತಂಡ ಭೇಟಿ
ಚಾಮರಾಜನಗರ ಜಿಲ್ಲೆ ಮಡಹಳ್ಳಿ ಬಳಿಯ ಕಲ್ಲುಗಣಿಗೆ ಭಾನುವಾರ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು.
Follow us on

ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ಇರುವ ಕಲ್ಲು ಕ್ವಾರಿಗಳಿಗೆ (Stone Quarries) ಜಿಲ್ಲಾಧಿಕಾರಿ ಚಾರುಲತಾ ಸೋಮಲ್ (DC Charulata Somal) ನೇತೃತ್ವದ ತಂಡ ಭಾನುವಾರ ಭೇಟಿ ನೀಡಿ ಪರಿಶೀಲಿಸಿತು. ಗಣಿ ದುರಂತ ಪ್ರಕರಣದ ನಂತರ ಕ್ವಾರಿಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಬೇಕು ಎಂದು ಸಚಿವ ವಿ.ಸೋಮಣ್ಣ (V Somanna) ಸೂಚಿಸಿದ್ದರು. ಈ ಸೂಚನೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಗುಂಡ್ಲುಪೇಟೆ ವ್ಯಾಪ್ತಿಯ ಹಿರೀಕಾಟಿ, ರಂಗೂಪುರ, ಬೆಳಚಲವಾಡಿ, ಹಸಗೂಲಿ ಕ್ವಾರಿಗಳಿಗೆ ಭೇಟಿ ನೀಡಿದ್ದರು. ಜಿಲ್ಲೆಯಾದ್ಯಂತ ಒಂದು ತಿಂಗಳ ಕಾಲ‌ ಗಣಿಗಾರಿಕೆ ನಿಲ್ಲಿಸುವಂತೆ ಸೂಚಿಸಿದ್ದರು. ಭೇಟಿಯ ವೇಳೆ ಗಣಿಗಾರಿಕೆಯಲ್ಲಿ ನಿಯಮ ಪಾಲನೆ ಕುರಿತು ಹಾಗೂ ನಿಯಮಗಳ ಉಲ್ಲಂಘನೆ ಕುರಿತು ಮಾಹಿತಿ ಪಡೆಯುವಂತೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ 8 ಜನರ ಗಣಿ, ಭೂ ವಿಜ್ಞಾನ ಅಧಿಕಾರಿಗಳ ನೇತೃತ್ವದ ತಂಡದೊಂದಿಗೆ ಗಣಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣೆ (SDRF) ಸಿಬ್ಬಂದಿಯಿಂದ ಚಾಮರಾಜನಗರ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದೆ. ಕತ್ತಲಿನಲ್ಲಿ ಬೃಹತ್ ಗಾತ್ರದ ಬಂಡೆಗಳು ಬಿದ್ದಿರುವ ಹಿನ್ನೆಲೆಯಲ್ಲಿ ರಾತ್ರಿ 11ರ ನಂತರ ಶೋಧ ಕಾರ್ಯ ಸ್ಥಗಿತಗೊಂಡಿತ್ತು. ಇಂದು ಮುಂಜಾನೆಯಿಂದ ಮತ್ತೆ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಬಂಡೆಗಳ ಅಡಿಯಲ್ಲಿ ಈಗಾಗಲೇ ಎರಡು ಹಿಟಾಚಿಗಳು ಸಿಲುಕಿವೆ. ಅವುಗಳಲ್ಲಿ ಸಿಲುಕಿರುವ ಇಬ್ಬರನ್ನು ಹೊರತೆಗೆಯುವ ಕೆಲಸ ಈಗಾಗಲೇ ಆರಂಭವಾಗಿದೆ.

ಅವರಿಬ್ಬರೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಅಜೀಂ‌ಮುಲ್ಲಾ ಎಂಬಾತನ ಮೃತದೇಹವನ್ನೂ ಸಿಬ್ಬಂದಿ ಹೊರತೆಗೆದಿದ್ದಾರೆ. ಹಿಟಾಚಿ ಒಳಭಾಗದಲ್ಲಿ ಸರ್ಫರಾಜ್ ಮತ್ತು ಮಿರಾಜ್ ಎಂಬ ಕಾರ್ಮಿಕರು ಸಿಲುಕಿದ್ದಾರೆ.

ಗುಮ್ಮಕಲ್ಲು ಗುಡ್ಡದಲ್ಲಿ ಟಿಪ್ಪರ್‌ ಮೇಲೆ ಬಂಡೆಗಳ ಕುಸಿತ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಬಳಿಯ ಗುಮ್ಮಕಲ್ಲು ಗುಡ್ಡದಲ್ಲಿ ಬಂಡೆ ಕುಸಿದಿದ್ದು ಟಿಪ್ಪರ್‌ ಮೇಲೆ ಬಂಡೆಗಳು ಬಿದ್ದಿವೆ. ಬಂಡೆಯಡಿ ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಗುಮ್ಮಕಲ್ಲು ಗುಡ್ಡದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. ಇಂದು ಏಕಾಏಕಿ ಬಂಡೆಗಳು ಕುಸಿದು ಟಿಪ್ಪರ್ ಮೇಲೆ ಬಿದ್ದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಚರಣೆ ಶುರು ಮಾಡಿದ್ದು ಅದೃಷ್ಟವಶಾತ್ ಯಾವುದೇ ಸಾವಿನ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

ಗುಂಡ್ಲುಪೇಟೆ ತಾಲೂಕು ಬೊಮ್ಮಲಾಪುರ ಗ್ರಾಮದ ಮಹೇಂದ್ರಪ್ಪ ಎಂಬುವವರ ಜಾಗದಲ್ಲಿ ಹಕೀಂ ಎಂಬುವವರಿಂದ ಗಣಿಗಾರಿಕೆ ನಡೆಯುತ್ತಿದ್ದು ಆ ಜಾಗವನ್ನು ಗುತ್ತಿಗೆಗೆ ಪಡೆದು ಹಕೀಮ್ ಗಣಿಗಾರಿಕೆ ನಡೆಸುತ್ತಿದ್ದರು ಎಂದು ಮಾಹಿತಿ ತಿಳಿದು ಬಂದಿದೆ. ಮಹೇಂದ್ರಪ್ಪರ ಒಂದು ಎಕರೆ ಜಾಗದಲ್ಲಿ ಹಕೀಂ ಗಣಿಗಾರಿಕೆ ನಡೆಸುತ್ತಿದ್ದಾರೆ. ಸದ್ಯ ಇಲ್ಲಿ ಈಗ ಬಂಡೆ ಕುಸಿದಿದ್ದು ಟಿಪ್ಪರ್‌ ಮೇಲೆ ಬಂಡೆಗಳು ಬಿದ್ದಿವೆ.

ಇದನ್ನೂ ಓದಿ: ಗುಂಡ್ಲುಪೇಟೆ ಬಳಿ ಆಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಪ್ರದೇಶದಲ್ಲಿ ಗುಡ್ಡದ ಮೇಲಿನ ಬಂಡೆ ಕುಸಿದು 2 ಕಾರ್ಮಿಕರು ಸಾವನ್ನಪ್ಪಿರುವ ಶಂಕೆ

ಇದನ್ನೂ ಓದಿ: ಕಲ್ಲುಗಣಿಗೆ ಕಡಿವಾಣ ಹಾಕಲು ಮಡಹಳ್ಳಿ ಗ್ರಾಮಸ್ಥರ ಆಗ್ರಹ: ದುರಂತದಲ್ಲಿ ಹಲವರು ಮೃತಪಟ್ಟಿರುವ ಶಂಕೆ