ಕಲ್ಲುಗಣಿ ನಿಷೇಧಕ್ಕೆ ಗ್ರಾಮಸ್ಥರ ಒತ್ತಾಯ
ಮಡಹಳ್ಳಿ ಬಳಿಯ ಗುಮ್ಮಕಲ್ಲು ಗುಡ್ಡ ಬಂಡೆ ಕುಸಿತ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದ ಗಮನ ಸೆಳೆದಿದೆ. ಗ್ರಾಮದಲ್ಲಿ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸಬೇಕು ಎಂದು ನಿವಾಸಿಗಳ ಒತ್ತಾಯ ಮಾಡಿದ್ದಾರೆ. ಗಣಿಗಾರಿಕೆಯ ಶಬ್ದದಿಂದ ರಾತ್ರಿ ವೇಳೆ ಸರಿಯಾಗಿ ನಿದ್ದೆ ಬರುತ್ತಿಲ್ಲ. ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಗಣಿಗಾರಿಕೆ ನಿಲ್ಲಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗೋಮಾಳದ ಭೂಮಿಯಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಪ್ರಭಾವಿ ರಾಜಕಾರಣಿಗಳು ಗಣಿ ದುಸ್ಸಾಹಸದ ಹಿಂದಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಇಬ್ಬರು ಮೃತಪಟ್ಟಿರುವ ಶಂಕೆ
ದುರಂತ ನಡೆದ ವೇಳೆ ಗಣಿಯಲ್ಲಿ ಉಳಿದಿದ್ದ ಪಶ್ಚಿಮ ಬಂಗಾಳ ಮೂಲದ ಇಬ್ಬರು ಕಾರ್ಮಿಕರು ಬಂಡೆಗಳು ಉರುಳಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಗಣಿಯಲ್ಲಿ ಒಟ್ಟು ಐವರು ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪೈಕಿ ಮೂವರನ್ನು ರಕ್ಷಿಸಲಾಗಿದ್ದು ಉಳಿದಿಬ್ಬರ ಶೋಧ ಕಾರ್ಯ ಶುಕ್ರವಾರ ಸಂಜೆಯವರೆಗೂ ನಡೆಯಿತು.
ಗುಡ್ಡದ ಅಕ್ಕಪಕ್ಕದಲ್ಲಿ ವಾಸವಾಗಿರುವ ಜನರು ಹೇಳುವ ಪ್ರಕಾರ ಗಣಿ ಪ್ರದೇಶದಲ್ಲಿ, ಗುಡ್ಡದ ಕೆಳಗೆ ಜಾಸ್ತಿ ಜನ ಕೆಲಸ ಮಾಡುತ್ತಿದ್ದರಂತೆ. ಘಟನೆಯ ಬಗ್ಗೆ ಮಾಧ್ಯಮದವರಿಗೆ ವಿವರಗಳನ್ನು ನೀಡಿದ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ, ಪರವಾನಗಿ ಇಲ್ಲದೆ ಗಣಿಗಾರಿಕೆ ನಡೆಯುತ್ತಿತ್ತು ಎಂದು ಹೇಳಿದ್ದರು. ಬಂಡೆಗಳ ಕೆಳಗೆ ಸಿಕ್ಕಹಾಕಿಕೊಂಡಿರಬಹುದಾದ ಕಾರ್ಮಿಕರನ್ನು ರಕ್ಷಿಸಲು ಸ್ಥಳೀಯರು ಧಾವಿಸಿದಿದ್ದರು.
ರಕ್ಷಣಾ ಕಾರ್ಯಾಚರಣೆ ಚುರುಕು
ಮಡಹಳ್ಳಿ ಬಳಿ ಗುಮ್ಮಕಲ್ಲುಗುಡ್ಡದಲ್ಲಿ ಬಂಡೆ ಕುಸಿದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್ಡಿಆರ್ಎಫ್ನ 25, ಅಗ್ನಿಶಾಮಕದಳದ 50 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಗುಡ್ಡದ ಅಡಿಯಲ್ಲಿ ಸಿಲುಕಿದ್ದ ಓರ್ವ ವ್ಯಕ್ತಿಯ ಗುರುತು ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಿಟಾಚಿ ಮೇಲೆ ಬಿದ್ದಿರುವ ಬೃಹತ್ ಬಂಡೆಗಲ್ಲು ಬಿದ್ದಿದ್ದು, ಅದರೊಳಗೆ ವ್ಯಕ್ತಿಯೊಬ್ಬ ಇದ್ದ ಎಂದು ಹೇಳಲಾಗುತ್ತಿದೆ. ಮೃತ ಕಾರ್ಮಿಕನನ್ನು ಸರ್ಫರಾಜ್ ಎಂದು ಗುರುತಿಸಲಾಗಿದೆ.
ಗಣಿಪದರ ಸಡಿಲಗೊಂಡು ಕಲ್ಲು ಕುಸಿದಿದೆ: ನಾಗಭೂಷಣ್
ಮಡಹಳ್ಳಿ ಬಳಿ ಗುಮ್ಮಕಲ್ಲು ಗುಡ್ಡದಲ್ಲಿ ಬಂಡೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಿ ಇಲಾಖೆಯ ಉಪ ನಿರ್ದೇಶಕ ನಾಗಭೂಷಣ್ ಪ್ರತಿಕ್ರಿಯಿಸಿದ್ದು, ಸುರಕ್ಷತಾ ಕ್ರಮಕೈಗೊಂಡಿಲ್ಲ ಎಂದು ಹೇಳಲು ಆಗುವುದಿಲ್ಲ ಎಂದಿದ್ದಾರೆ. ಗಣಿ ಪದರ ಸಡಿಲಗೊಂಡ ಒತ್ತಡದಿಂದ ಬಂಡೆಗಳು ಕುಸಿದಿವೆ. ಗಣಿಗಾರಿಕೆಯಿಂದ ತೊಂದರೆ ಆಗಿದೆ ಎಂದು ಯಾವುದೇ ದೂರು ದಾಖಲಾಗಿಲ್ಲ ಎಂದು ಗಣಿ ಇಲಾಖೆಯ ಉಪ ನಿರ್ದೇಶಕ ನಾಗಭೂಷಣ್ ಹೇಳಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಗುಮ್ಮಕಲ್ಲು ಗುಡ್ಡದಲ್ಲಿ ಟಿಪ್ಪರ್ ಮೇಲೆ ಬಂಡೆಗಳ ಕುಸಿತ; ಬಂಗಾಳ ಮೂಲದ ಕಾರ್ಮಿಕರು ಸಾವನ್ನಪ್ಪಿರುವ ಶಂಕೆ