
ಮೈಸೂರು, ಸೆಪ್ಟೆಂಬರ್ 28: ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯಡಿ ಆಹಾರ ಕಿಟ್‌ಗಳ ವಿತರಣೆಯಲ್ಲಿ ವಿಳಂಬವಾಗಿರುವುದು, ಬರ ಪರಿಸ್ಥಿತಿ ಹಾಗೂ ಉದ್ಯೋಗಾವಕಾಶಗಳ ಕೊರತೆಯಿಂದಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಹಲವು ಆದಿವಾಸಿ ಕುಟುಂಬಗಳು ಉದ್ಯೋಗ ಅರಸಿ ವಲಸೆ ಹೊರಟಿವೆ. ಪರ್ಯಾಯ ಜೀವನೋಪಾಯದ ಮೂಲಗಳನ್ನು ಹುಡುಕಿಕೊಂಡು ಬುಡಕಟ್ಟು ಕಾಲೊನಿಗಳ ಕುಟುಂಬಗಳು ಮಂಗಳೂರು, ಬೆಂಗಳೂರು ಹಾಗೂ ನೆರೆಯ ಕೇರಳಕ್ಕೆ ವಲಸೆ ಹೋಗುತ್ತಿವೆ.
ಎರಡೂ ಜಿಲ್ಲೆಗಳಲ್ಲಿ 21,000ಕ್ಕೂ ಹೆಚ್ಚು ಬುಡಕಟ್ಟು ಕುಟುಂಬಗಳಿದ್ದು, ಕಳೆದ ಎಂಟು ತಿಂಗಳಿಂದ ಆಹಾರ ಕಿಟ್‌ಗಳನ್ನು ವಿತರಿಸಲಾಗಿಲ್ಲ. ರಾಜ್ಯ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಬುಡಕಟ್ಟು ವ್ಯವಹಾರಗಳ ಇಲಾಖೆ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸದಿರುವುದೇ ಆಹಾರ ಕಿಟ್ ವಿತರಣೆಯಲ್ಲಿ ವಿಳಂಬಕ್ಕೆ ಕಾರಣ ಎನ್ನಲಾಗಿದೆ. ಮೈಸೂರು, ಚಾಮರಾಜನಗರ, ಕೊಡಗು ಮತ್ತು ದಕ್ಷಿಣ ಕನ್ನಡ ಸೇರಿದಂತೆ ಒಂಬತ್ತು ಜಿಲ್ಲೆಗಳ ದಟ್ಟ ಅರಣ್ಯ ಹಾಗೂ ಅರಣ್ಯದಂಚಿನ ಗ್ರಾಮಗಳಲ್ಲಿ ವಾಸಿಸುವ ದುರ್ಬಲ ಬುಡಕಟ್ಟು ಸಮುದಾಯಗಳಲ್ಲಿ ಅಪೌಷ್ಟಿಕತೆಯನ್ನು ನಿವಾರಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. 2008ರಿಂದ ಜೇನು ಕುರುಬ, ಕಾಡು ಕುರುಬ, ಯರವ ಹಾಗೂ ಸೋಲಿಗ ಸೇರಿದಂತೆ ವಿವಿಧ ಸಮುದಾಯಗಳಿಗೆ ರಾಜ್ಯ ಸರ್ಕಾರ ಆಹಾರ ಕಿಟ್‌ಗಳನ್ನು ವಿತರಿಸುತ್ತಿದೆ.
ಇದನ್ನೂ ಓದಿ: ಕಬ್ಬು ತುಂಬಿದ್ದ ಲಾರಿ ಅಡ್ಡಗಟ್ಟಿದ ಗಜಪಡೆ, ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ! ವಾಹನ ಸವಾರರು ಕಂಗಾಲು
ಒಂಬತ್ತು ಜಿಲ್ಲೆಗಳ 51,000ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು ಈ ಕಿಟ್ನ ಪ್ರಯೋಜನ ಪಡೆಯುತ್ತಿವೆ. ಪ್ರತಿ ಕಿಟ್ 8 ಕೆಜಿ ಅಕ್ಕಿ, ಬೇಳೆ, ರಾಗಿ, ತುಪ್ಪ, ಎರಡು ಲೀಟರ್ ಅಡುಗೆ ಎಣ್ಣೆ, ಶೇಂಗಾ ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ಒಳಗೊಂಡಿರಲಿದೆ. ಹಲವು ಕುಟುಂಬಗಳು ತಮ್ಮ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಮಾಸಿಕ ಆಹಾರ ಕಿಟ್‌ಗಳನ್ನು ಅವಲಂಬಿಸಿವೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಆಹಾರ ಕಿಟ್‌ಗಳ ವಿತರಣೆಯನ್ನು ಪುನರಾರಂಭಿಸಬೇಕು. ಟೆಂಡರ್ ಪ್ರಕ್ರಿಯೆಯನ್ನು ಕೇಂದ್ರೀಕರಿಸುವ ಬದಲು, ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸ್ಥಳೀಯವಾಗಿ ಟೆಂಡರ್ ನೀಡಿ ಕಿಟ್‌ಗಳನ್ನು ಖರೀದಿಸಲು ಅವಕಾಶ ನೀಡಿದರೆ ಉತ್ತಮ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಚಾಮರಾಜನಗರ ಜಿಲ್ಲಾ ಬುಡಕಟ್ಟು ಕಲ್ಯಾಣಾಧಿಕಾರಿ ಬಿಂದಿಯಾ, ಟೆಂಡರ್ ಹಾಗೂ ಖರೀದಿ ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ ಒಂಬತ್ತು ಜಿಲ್ಲೆಗಳಲ್ಲೂ ಕಳೆದ ಎಂಟು ತಿಂಗಳಿಂದ ಆಹಾರ ಕಿಟ್‌ಗಳ ವಿತರಣೆ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ಟೆಂಡರ್ ಹಾಗೂ ಖರೀದಿ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಗುರುತಿಸಲಾದ ಎಲ್ಲಾ ಆದಿವಾಸಿ ಫಲಾನುಭವಿ ಕುಟುಂಬಗಳಿಗೆ ಅಕ್ಟೋಬರ್ ಮೊದಲ ವಾರದೊಳಗೆ ಆಹಾರ ಕಿಟ್‌ಗಳನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿರೋದಾಗಿ ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:00 pm, Mon, 28 September 26