
ಚಾಮರಾಜನಗರ, ಜನವರಿ 02: ರಾತ್ರಿ ಬೆಳಗಾಗುವುದರ ಒಳಗೆ ಶ್ರೀಮಂತರಾಗೋ ಹುಚ್ಚು ಕನಸು ಇಟ್ಟುಕೊಂಡು ಲಾಟರಿ ಖರೀದಿಸಿ ಬೀದಿಗೆ ಬಂದ ಅದೆಷ್ಟೋ ಕುಟುಂಬಳಿವೆ. ದಿನಗೂಲಿ ಕಾರ್ಮಿಕರು ಹಾಗೂ ಅಸಂಘಟಿತ ವಲಯದ ಕಾರ್ಮಿಕರು ಇದರಿಂದ ಸಂಕಷ್ಟಕ್ಕೆ ಸಿಲುಕುತ್ತಿರೋದನ್ನು ಮನಗಂಡು ಕರ್ನಾಟಕದಲ್ಲಿ ಲಾಟರಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಿದ್ದರೂ ರಾಜ್ಯದಲ್ಲಿ ಅವುಗಳ ಹಾವಳಿ ಮಾತ್ರ ನಿಂತಿಲ್ಲ. ಕದ್ದು ಮುಚ್ಚಿ ನಡೆಯುವ ವ್ಯವಹಾರಗಳು ಒಂದೆಡೆಯಾದರೆ ನೆರೆ ರಾಜ್ಯದ ಲಾಟರಿಗಳು ಕೂಡ ಗಡಿ ಜಿಲ್ಲೆಗಳಲ್ಲಿ ಜೋರಾಗಿಯೇ ವ್ಯವಹಾರ ನಡೆಸುತ್ತಿವೆ.
ಹೌದು, ಚಾಮರಾಜನಗರದ ಹಲವು ಪ್ರದೇಶಗಳಲ್ಲಿ ನೆರೆ ರಾಜ್ಯ ಕೇರಳದಿಂದ ತರಲಾಗುವ ಅಕ್ರಮ ಲಾಟರಿ ಟಿಕೆಟ್‌ಗಳ ಮಾರಾಟವು ಎಗ್ಗಿಲ್ಲದೆ ನಡೆಯುತ್ತಿದೆ. ಗುಂಡ್ಲುಪೇಟೆ, ಚಾಮರಾಜನಗರ ಮತ್ತು ಕೊಳ್ಳೇಗಾಲ ಸಮೀಪದ ಗ್ರಾಮಗಳಲ್ಲಿ ಇವುಗಳ ಬಹಿರಂಗ ಮಾರಾಟ ನಡೆಯುತ್ತಿರುವ ಬಗ್ಗೆ ವರದಿಯಾಗಿದೆ. ಆರ್ಥಿಕ ಶೋಷಣೆಯಿಂದ ದುರ್ಬಲ ವರ್ಗಗಳನ್ನು ರಕ್ಷಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಲಾಟರಿಯನ್ನು ನಿಷೇಧಿಸಿದ್ದರೂ ಕಠಿಣ ಕಾನೂನು ಜಾರಿಯಲ್ಲಿನ ಕೊರತೆಯಿಂದ ಈ ವ್ಯಾಪಾರ ಗುಪ್ತವಾಗಿ ಮುಂದುವರಿದಿದೆ. ಏಜೆಂಟ್‌ಗಳು ಹಾಗೂ ಮಧ್ಯವರ್ತಿಗಳಿಗೆ ಲಾಭ ಮಾಡಿಕೊಡುತ್ತಿದೆ.
ಇದನ್ನೂ ಓದಿ: ಒಂದು ಕೋಟಿ ಲಾಟರಿ ಗೆದ್ದವನನ್ನ ಡೋಲು ಬಾರಿಸಿ ಹುಡುಕುತ್ತಿದ್ದಾರೆ ಇಲ್ಲಿ
ಕೇರಳ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇತ್ತೀಚೆಗಷ್ಟೇ ಗುಂಡ್ಲುಪೇಟೆ ತಾಲ್ಲೂಕಿನ ತೆರಕನಂಬಿ ಗ್ರಾಮದಲ್ಲಿ 48 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ತೆರಕನಂಬಿ ಗ್ರಾಮದ ನಿವಾಸಿಗಳ ಪ್ರಕಾರ, ಲಾಟರಿ ನಿಷೇಧದ ನಡುವೆಯೂ ಬೇಡಿಕೆ ಇರುವ ಕಾರಣ ವ್ಯವಹಾರ ಎಗ್ಗಿಲ್ಲದೆ ನಡೆಯುತ್ತಲೇ ಇದೆ. ಸಾಮಾನ್ಯವಾಗಿ 50 ರಿಂದ 250 ರೂ. ವರೆಗೆ ಲಾಟರಿ ಟಿಕೆಟ್ ಮಾರಾಟ ಮಾಡಲಾಗುತ್ತಿದ್ದು, ಬಹುಮಾನ ಮೊತ್ತವು 50 ಲಕ್ಷದವರೆಗೆ ಇರುತ್ತದೆ. ದಿನಗೂಲಿ ಕಾರ್ಮಿಕರು, ವಿಶೇಷವಾಗಿ ತೆಂಗಿನಕಾಯಿ ವ್ಯಾಪಾರ ಮತ್ತು ಇತರ ಅನೌಪಚಾರಿಕ ಉದ್ಯೋಗಗಳಲ್ಲಿ ತೊಡಗಿರುವವರೇ ಇವುಗಳ ಮೇಲೆ ಹಣ ಸುರಿಯುತ್ತಿದ್ದಾರೆ ಎನ್ನಲಾಗಿದೆ.
ಕರ್ನಾಟಕ ಪೊಲೀಸರ ಅಂಕಿಅಂಶಗಳ ಪ್ರಕಾರ, 2023ರಲ್ಲಿ ಕರ್ನಾಟಕ ಲಾಟರಿ ನಿಷೇಧ ಕಾಯ್ದೆಯಡಿ 78 ಪ್ರಕರಣಗಳು ದಾಖಲಾಗಿದ್ದು, 2024ರಲ್ಲಿ ಅದು 54ಕ್ಕೆ ಇಳಿಕೆಯಾಗಿತ್ತು. ಆದರೆ ಕಳೆದ ವರ್ಷ ನವೆಂಬರ್ವರೆಗೆ ರಾಜ್ಯದಲ್ಲಿ 64 ಪ್ರಕರಣಗಳು ದಾಖಲಾಗಿವೆ. ಬಂಧಿತರ ವಿರುದ್ಧ ಕರ್ನಾಟಕ ಲಾಟರಿ ಮತ್ತು ಬಹುಮಾನ ಸ್ಪರ್ಧೆಗಳ ನಿಯಂತ್ರಣ ಹಾಗೂ ತೆರಿಗೆ ಕಾಯ್ದೆಯ ಸೆಕ್ಷನ್‌ಗಳು 4(1), 5 ಮತ್ತು 7ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:48 pm, Fri, 2 January 26