ಚಾಮರಾಜನಗರ, ಜನವರಿ 9: ವಿಧ್ಯಾರ್ಥಿಗಳಿಲ್ಲದೇ ಪಾಳು ಬಿದ್ದಿರುವ ಕಟ್ಟಡ, ಮೂಲಭೂತ ಸೌಕರ್ಯದ ಕೊರತೆ. ಹೀಗೆ ಕೋಮಾ ಸ್ಥಿತಿಯಲ್ಲಿರುವ ಕಟ್ಟಡ ಮತ್ಯಾವುದೂ ಅಲ್ಲ, ಸರ್ಕಾರಿ ಶಾಲೆಯದ್ದು. ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಎರಡು ವರ್ಷಗಳ ಅವಧಿಯಲ್ಲಿ ಬರೋಬ್ಬರಿ 24 ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿದೆ. ಶೂನ್ಯ ದಾಖಲಾತಿ, ಮಕ್ಕಳ ಕೊರತೆ ಹಿನ್ನಲೆ 24 ಶಾಲೆಗಳನ್ನು ಬಂದ್ ಮಾಡಲಾಗಿದೆ. ಮೂಲಭೂತ ಸೌಕರ್ಯ ಕೊರತೆಯ ಕಾರಣ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳ ಕಡೆ ಮುಖ ಮಾಡುತ್ತಿಲ್ಲ. ಇದುವೇ ಶಾಲೆ ಮುಚ್ಚಲು ಕಾರಣವಾಗಿದೆ.
ಬಂದ್ ಆಗಿರುವ 24 ಶಾಲೆಗಳಲ್ಲಿ 4 ಉರ್ದು ಶಾಲೆಗಳು ಕೂಡ ಸೇರಿವೆ. ಅವುಗಳಿಗೆ ಕಾಯಕಲ್ಪ ಕೊಡಲು ತಯಾರಿ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಏತನ್ಮಧ್ಯೆ, ಚಾಮರಾಜನಗರ ತಾಲೂಕಿನ 8, ಗುಂಡ್ಲುಪೇಟೆ ತಾಲೂಕಿನ 8, ಹನೂರು ತಾಲೂಕಿನ 2, ಯಳಂದೂರು ತಾಲೂಕಿನ 1 ಹಾಗೂ 4 ಉರ್ದು ಶಾಲೆಗಳಿಗೆ ಬೀಗ ಬಿದ್ದಿದೆ. ಸದ್ಯ 24 ರ ಪೈಕಿ 4 ಶಾಲೆಗಳನ್ನು ಪುನರ್ ಆರಂಭಿಸಲಾಗಿದೆ.
ಶೂನ್ಯ ದಾಖಲಾತಿ ಹಾಗೂ ದಾಖಲಾತಿ ಕೊರತೆಯಿಂದ ನಾವು ಶಾಲೆಗಳನ್ನ ಬಂದ್ ಮಾಡುತ್ತಿದ್ದೇವೆ ಎಂದು ಚಾಮರಾಜನಗರ ಜಿಲ್ಲಾ ಡಿಡಿಪಿಐ ರಾಮಚಂದ್ರ ರಾಜೇ ಅರಸ್ ಮಾಹಿತಿ ನೀಡಿದ್ದಾರೆ. ಆದರೆ ಅಸಲಿಗೆ ಶೂನ್ಯ ದಾಖಲಾತಿಯಾಗಲು ಮುಖ್ಯ ಕಾರಣ ಶಾಲೆಯ ಅವ್ಯವಸ್ಥೆ. ಸರಿಯಾದ ಮೂಲಭೂತ ಸೌಕರ್ಯ ಇಲ್ಲದ ಕಾರಣ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಪೋಷಕರು ಹೆದರುತ್ತಿದ್ದಾರೆ. ಸಾಲ ಮಾಡಿದರೂ ಪರವಾಗಿಲ್ಲ, ಮಕ್ಕಳ ಭವಿಷ್ಯ ಮುಖ್ಯ ಎಂದು ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ.
ಆಂಗ್ಲ ಮಾದ್ಯಮ ಸರ್ಕಾರಿ ಶಾಲೆಗಳು ಇಲ್ಲದೆ ಇರುವುದೂ ಶೂನ್ಯ ದಾಖಲಾತಿಗೆ ಕಾರಣ ಎಂಬ ಮಾತುಗಳು ಕೇಳಿ ಬಂದಿವೆ. ಅಲ್ಲದೇ ಈ ಕೂಡಲೇ ಶಿಕ್ಷಣ ಸಚಿವರು ಗಡಿ ಜಿಲ್ಲೆಯ ಶಾಲೆಗಳತ್ತ ಗಮನಹರಿಸಿ ಮೂಲಭೂತ ಸೌಕರ್ಯ ಸೇರಿ ಶಿಕ್ಷಣಕ್ಕೆ ಅಗತ್ಯ ಸೌಲಭ್ಯ ಒದಗಿಸಬೇಕಿದೆ ಎಂಬ ಆಗ್ರಹ ವ್ಯಕ್ತವಾಗಿದೆ.
ಇದನ್ನೂ ಓದಿ: ವೀರಪ್ಪನ್ ಓಡಾಡಿದ್ದ ಜಾಗದಲ್ಲಿ ಸಫಾರಿಗೆ ಅರಣ್ಯ ಇಲಾಖೆ ಚಿಂತನೆ: ಶೀಘ್ರದಲ್ಲೇ ಶುರುವಾಗಲಿದೆ ಹೊಗೇನಕಲ್ ಸಫಾರಿ
ನೆಪ ಮಾತ್ರಕ್ಕೆ ಸರ್ಕಾರಿ ಶಾಲೆ ಉಳಿಸಿ ಎಂದು ಬೊಬ್ಬೆ ಹೊಡೆಯುವ ರಾಜ್ಯ ಸರ್ಕಾರ ಈಗ ಸರ್ಕಾರಿ ಶಾಲೆಗಳನ್ನು ಬಂದ್ ಮಾಡುತ್ತಿದೆ. ಈಗಲಾದರೂ ಎಚ್ಚೆತ್ತುಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳದೆ ಹೋದರೆ ಮುಂಬರುವ ದಿನಗಳಲ್ಲಿ ಸರ್ಕಾರಿ ಶಾಲೆಗಳೇ ಇಲ್ಲದಂತಾಗುವುದು ಪಕ್ಕಾ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಗಡಿ ಜಿಲ್ಲೆಯ ಶಾಲೆಗಳಿಗೆ ವಿಶೇಷ ಪ್ಯಾಕೇಜ್ ಕೊಟ್ಟು ಅಭಿವೃದ್ಧಿ ಪಡಿಸಬೇಕಿದೆ ಎಂಬ ಆಗ್ರಹ ಕೂಡ ವ್ಯಕ್ತವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ