ಚಾಮರಾಜನಗರ, ಆ.6: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸಿದ್ದರಾಮಯ್ಯನವರ ಕನಸಿನ ಕೂಸು ಇಂದಿರಾ ಕ್ಯಾಂಟೀನ್ಗೆ ಮರುಜೀವ ಬಂದಿತ್ತು. ಇನ್ನು ಈ ಕುರಿತು ಮಾತನಾಡಿದ್ದ ಸಿಎಂ ‘ಇಂದಿರಾ ಕ್ಯಾಂಟೀನ್ (Indira Canteen) ವಿಚಾರವಾಗಿ ಹೊಸ ಟೆಂಡರ್ ಕರೆಯುತ್ತೇವೆ. ಕ್ವಾಲಿಟಿ ಮತ್ತು ಕ್ವಾಂಟಿಟಿಗೂ ಹೆಚ್ಚಿನ ಒತ್ತು ಕೊಡುತ್ತೇವೆ. ಬೆಂಗಳೂರಿನಲ್ಲಿ 250 ಇಂದಿರಾ ಕ್ಯಾಂಟೀನ್ ಆರಂಭಿಸಲು ಸೂಚನೆ ನೀಡಲಾಗಿದೆ. ಈವರೆಗೆ ಪಾಲಿಕೆ ಶೇ.70, ಸರ್ಕಾರ 30% ಅನುದಾನ ನೀಡುತ್ತಿತ್ತು. ಇನ್ಮುಂದೆ ಸರ್ಕಾರ, ಪಾಲಿಕೆ ತಲಾ 50ರಷ್ಟು ಅನುದಾನ ನೀಡುತ್ತೆ. ಎಲ್ಲೆಲ್ಲಿ ಹೊಸ ಕ್ಯಾಂಟೀನ್ ಪ್ರಾರಂಭಿಸಬೇಕೆಂಬ ಬಗ್ಗೆಯೂ ಚರ್ಚೆ ಮಾಡಿ ಪಟ್ಟಿ ಕೊಡಲು ಸೂಚನೆ ನೀಡಿದ್ದೇನೆ ಎಂದು ಹೇಳಿದ್ದರು. ಆದರೀಗ ಚಾಮರಾಜನಗರ ಇಂದಿರಾ ಕ್ಯಾಂಟೀನ್ನ್ನು ಸಿಬ್ಬಂದಿಗಳು ಬಂದ್ ಮಾಡಲು ಮುಂದಾಗಿದ್ದಾರೆ.
ಕಳೆದ ಎಂಟು ತಿಂಗಳಿನಿಂದ ಇಂದಿರಾ ಕ್ಯಾಂಟೀನ್ ಸಿಬ್ಬಂದಿಗೆ ಸಂಬಳ ನೀಡದ ಹಿನ್ನಲೆ ಬೇಸತ್ತ ಸಿಬ್ಬಂದಿಗಳು ಬಂದ್ ಮಾಡುವ ನಿರ್ಧಾರ ಮಾಡಿದ್ದಾರೆ. ಹೌದು, ಸರ್ಕಾರದಿಂದ ಒಂದು ಮುಕ್ಕಾಲು ಕೋಟಿ ರೂಪಾಯಿ ಬಿಲ್ ಆಗುವುದು ಬಾಕಿಯಿದ್ದು, ಟೆಂಡರ್‌ದಾರ ಸಿಬ್ಬಂದಿಗೆ ಸಂಬಳ ನೀಡುತ್ತಿಲ್ಲ. ಟೆಂಡರ್‌ದಾರರನ್ನು ಸಂಬಳ ಕೇಳಿದರೆ ಫೋನ್ ರಿಸೀವ್ ಮಾಡುವುದಿಲ್ಲ ಎಂದು ಆರೋಪಿಸಿದ್ದಾರೆ.
ಇನ್ನು ಸಂಬಳವಿಲ್ಲದೆ ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ಸಿಬ್ಬಂದಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.
ಈ ಮಧ್ಯೆ ಕಡಿಮೆ ದರದಲ್ಲಿ ಊಟ ತಿಂಡಿ ಸಿಗಲಿದೆ ಎಂದು ಬರುವ ಬಡವರು, ಶ್ರಮಿಕರಿಗೆ ಇದರಿಂದ ತೊಂದರೆ ಆಗಲಿದೆ. ಈ ಕುರಿತು ಜಿಲ್ಲಾಧಿಕಾರಿ ಶಿಲ್ಪಾನಾಗ್ ಮೂರು, ನಾಲ್ಕು ದಿನದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ಕೊಟ್ಟಿದ್ದಾರಂತೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ