ಚಾಮರಾಜನಗರ: ಮಧ್ಯಾಹ್ನ ಊಟ ಸೇವಿಸಿದ ಬಳಿಕ 7 ಶಾಲಾ ಮಕ್ಕಳು ಅಸ್ವಸ್ಥಗೊಂಡ ಘಟನೆ ಚಾಮರಾಜನಗರ (Chamarajanagar) ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗರಗನಹಳ್ಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ (Morarji Desai Residential School) ನಡೆದಿದೆ. ಒಟ್ಟು 210 ಶಾಲಾ ಮಕ್ಕಳು ಊಟ ಮಾಡಿದ್ದು, ಈ ಪೈಕಿ 7 ಮಕ್ಕಳು ಅಸ್ವಸ್ಥರಾಗಿದ್ದಾರೆ. ಊಟ ಮಾಡಿದ ನಂತರ ಮಕ್ಕಳಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಂದಿನಂತೆಯೇ ಮಧ್ಯಾಹ್ನಕ್ಕೆ ಮೆಂತೆ ಭಾತ್ ಮಾಡಲಾಗಿತ್ತು. ಅದನ್ನು ಸೇವಿಸಿದ ನಂತರ 7 ಮಂದಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡರು. ಉಳಿದೆಲ್ಲ ವಿದ್ಯಾರ್ಥಿಗಳು ಸಹಜವಾಗಿಯೇ ಇದ್ದಾರೆ ಎಂದು ಶಾಲಾ ಮೂಲಗಳು ತಿಳಿಸಿವೆ.
ಅಸ್ವಸ್ಥಗೊಂಡಿರುವ ಮಕ್ಕಳಿಗೆ ವರಿಯಾಲ, ಬೇಗೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದ್ದು, 7 ಮಂದಿ ವಿದ್ಯಾರ್ಥಿಗಳನ್ನೂ ಡಿಸ್ಚಾರ್ಜ್ ಮಾಡಲಾಗಿದೆ. ಮಕ್ಕಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಿತ್ತು. ಪರಿಣಾಮವಾಗಿ ಅವರು ಅಸ್ವಸ್ಥಗೊಂಡಿದ್ದರು ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: Chamarajanagar: ಕಲುಷಿತ ಆಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ ಪ್ರಕರಣ: ವಸತಿ ಶಾಲೆಯ ಪ್ರಿನ್ಸಿಪಾಲ್ ಸಸ್ಪೆಂಡ್
ಕೆಲವು ದಿನಗಳ ಹಿಂದೆ ಚಾಮರಾಜನಗರದ ಯಡವನಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವಿಸಿ 24 ಮಕ್ಕಳು ಅಸ್ವಸ್ಥಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ವಸತಿ ಶಾಲೆಯ ಪ್ರಾಂಶುಪಾಲ ಕುಮಾರಸ್ವಾಮಿ ಎಂಬವರನ್ನು ಅಮಾನತುಗೊಳಿಸಲಾಗಿತ್ತು. ವಸತಿ ನಿಲಯದ ಶುಚಿತ್ವ, ಆಹಾರ ಸಾಮಾಗ್ರಿಗಳ ನಿರ್ವಹಣೆಯಲ್ಲಿ ಕರ್ತವ್ಯ ಲೋಪ ಆರೋಪ ಕೂಡ ಕೇಳಿಬಂದಿತ್ತು. ನಂತರ ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.
ಇತ್ತೀಚೆಗೆ ರಾಜ್ಯದ ಹಲವೆಡೆ ಶಾಲೆಗಳಲ್ಲಿ ಹಾಗೂ ಇತರೆಡೆಗಳಲ್ಲಿ ಕಲುಷಿತ ನೀರು ಸೇವಿಸಿ ವಿದ್ಯಾರ್ಥಿಗಳು, ಜನರು ಅಸ್ವಸ್ಥಗೊಂಡ ವಿದ್ಯಮಾನಗಳು ವರದಿಯಾಗಿದ್ದವು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ