ಕೊವಿಡ್-19 ಪಿಡುಗಿನಿಂದ ತತ್ತರಿಸಿರುವ ಕರ್ನಾಟಕ ರಾಜ್ಯಕ್ಕೆ ನೆರೆಹಾವಳಿ ರೂಪದಲ್ಲಿ ಮತ್ತೊಂದು ಗಂಡಾಂತರ ಎದುರಾಗಿದೆ. ಹಲವಾರು ಜಿಲ್ಲೆಗಳು ಈಗಾಗಲೇ ಪ್ರವಾಹಕ್ಕೆ ಸಿಲುಕಿವೆ ಮತ್ತು ಕೆಲವು ಅಪಾಯದ ಅಂಚಿನಲ್ಲಿವೆ.
ಪ್ರವಾಹ ಭೀತಿ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ಚಾಮರಾಜನಗರವೂ ಒಂದು. ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಅಣಗಳ್ಳಿ, ಹಳೇಹಂಪಾಪುರ, ಮಳ್ಳೂರು, ಯಡಕುರಿಯ ಮೊದಲಾದ ಊರುಗಳಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು ಪ್ರವಾಹದಂಥ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಈ ಪ್ರದೇಶಗಳಿಗೆ ಶನಿವಾರದಂದು ಭೇಟಿ ನೀಡಿ ಪರಿಸ್ಥಿತಿಯನ್ನು ವೀಕ್ಷಿಸಿದರು.
ಗಮನಿಸಬೇಕಾದ ಅಂಶವೆಂದರೆ, ಕಳೆದ ವರ್ಷವೂ ಈ ಗ್ರಾಮಗಳು ಭಾರೀ ಮಳೆಯಿಂದಾಗಿ ಜಲಾವೃತಗೊಂಡಿದ್ದವು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಸುರೇಶ ಕುಮಾರ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.