
ಚಾಮರಾಜನಗರ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ವಿದ್ವಾಂಸ ಪ್ರೊ.ಮಲೆಯೂರು ಗುರುಸ್ವಾಮಿ(76) ಅವರು ಮೈಸೂರು ಜೆ.ಎಸ್.ಎಸ್.ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಪ್ರೊ. ಮಲೆಯೂರು ಗುರುಸ್ವಾಮಿ ಅವರಿಗೆ ಅನಾರೊಗ್ಯ ಹಿನ್ನೆಲೆ ಕೆಲ ದಿನಗಳ ಹಿಂದೆ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಆರಂಭದಲ್ಲಿ ಪ್ರೊ. ಮಲೆಯೂರು ಉತ್ತಮವಾಗಿ ಸ್ಪಂದಿಸುತ್ತಿದ್ದರು. ಆದ್ರೆ ಇಂದು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಇಂದು ಬೆಳಗ್ಗೆ 10 ಗಂಟೆಯಿಂದ ಮೈಸೂರಿನ ಜೆಎಸ್‌ಎಸ್ ಮಹಾ ವಿದ್ಯಾಪೀಠದ ಬಳಿ ಪ್ರೊ. ಮಲೆಯೂರು ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 2 ಗಂಟೆಯ ನಂತರ ಚಾಮರಾಜನಗರ ತಾಲೂಕಿನ ಮಲೆಯೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೃತ ಪ್ರೊ. ಮಲೆಯೂರು ಗುರುಸ್ವಾಮಿ ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ರಾಯಚೂರು ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ ಖ್ಯಾತ ನಿರ್ದೇಶಕ ರಾಜಮೌಳಿ
ಶಿವಣ್ಣ ಹಾಗೂ ತಾಯಿ ಮರೆಮ್ಮ ದಂಪತಿಯ ಪುತ್ರನಾಗಿ 1947ರ ಆಗಸ್ಟ್ 1ರಂದು ಚಾಮರಾಜನಗರ ತಾಲೂಕಿನ ಮಲೆಯೂರು ಗ್ರಾಮದಲ್ಲಿ ಜನಿಸಿದ ಪ್ರೊ. ಮಲೆಯೂರು ಗುರುಸ್ವಾಮಿ ಅವರು ಮೈಸೂರಿನ ಹಿನಕಲ್‌ನ ಆಶ್ರಮ ರಸ್ತೆಯ ಮನೆಯಲ್ಲಿ ವಾಸವಾಗಿದ್ದರು. ಇವರು ಜೆಎಸ್‌ಎಸ್ ಸಂಸ್ಥೆಯಲ್ಲಿ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಮಹಾಯಾತ್ರಿಕ, ಅಪ್ರತಿಮ ವೀರ, ಚರಿತ್ರೆಯ ಪುಟಕ್ಕೆ ಒಂದು ಟಿಪ್ಪಣಿ ಕಾದಂಬರಿಗಳು, ಮಾತೆಂಬುದು ಜ್ಯೋತಿರ್ಲಿಂಗ ವಚನ ಸಾಹಿತ್ಯ, ಶ್ರೀ ಕಾರ್ಯಸ್ವಾಮಿ ಮಠದ ಕ್ಷೇತ್ರ ಚರಿತ್ರೆ, ಶರಣ ಕಿರಣ ವ್ಯಕ್ತಿ ಚಿತ್ರ, ಪ್ರಭುಲಿಂಗ ಲೀಲೆ ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ. ಹಾಗೀ ಮೂಡಲ ಸೀಮೆಯ ಕಥೆಗಳು, ಕಾಡಂಚಿನ ಕೋಗಿಲೆಗಳ ಕಲರವ, ಕಪಿಲಾ ನದಿಯ ಎಡಬಲದಿ, ಹೆಜ್ಜಿಗೆ ಅಕ್ಕ, ಛಂದೋನಿಜಗುಣ, ರಾಜಪಥ, ಸೋಮಸಿರಿ, ಶಿವಪ್ರಭೆ, ಶಿವಯೋಗ, ಹೊನ್ನಹೊಳೆ, ಶಿವಸಂಪದ ಸೇರಿದಂತೆ ಅನೇಕ ಕೃತಿಗಳನ್ನು ಸಂಪಾದಿಸಿದ್ದಾರೆ.
ಇವರಿಗೆ ಮಹಾಕವಿ ಷಡಕ್ಷರ ದೇವ ಸ್ಮಾರಕ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರೋಟರಿ ರಾಜ್ಯೋತ್ಸವ ಪ್ರಶಸ್ತಿ, 2010ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಒಲಿದು ಬಂದಿದೆ. 2014ರಲ್ಲಿ ಚಾಮರಾಜನಗರ ಜಿಲ್ಲಾ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಇವರು ಆಯ್ಕೆಯಾಗಿದ್ದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:52 am, Thu, 9 March 23