ಚಾಮರಾಜನಗರ: ನವ ವಧುವೊಬ್ಬರು ಮದುವೆಗೆ ಬರಬೇಡಿ ಎಂದು ಮನವಿ ಮಾಡಿದ್ದಾರೆ. ಇಂದು ಮತ್ತು ನಾಳೆ ನಡೆಯಲಿರುವ ಮದುವೆಗಾಗಿ ಮದುಮಗಳು ಹೀಗೆ ಮನವಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಟುಂಬಸ್ಥರು ಈಗಾಗಲೇ ಮದುವೆ ಆಮಂತ್ರಣ ಪತ್ರಿಕೆಯನ್ನ ಸಂಬಂಧಿಕರಿಗೆ ಹಂಚಿದ್ದರು. ಆದರೆ ಕೋವಿಡ್ ಕಾರಣದಿಂದ ಇದೀಗ ಮನೆಯಲ್ಲಿಯೇ ಸರಳ ವಿವಾಹ ಮಾಡಿಕೊಳ್ಳಲು ವಧು-ವರ ಸೇರಿದಂತೆ ಎರಡೂ ಕಡೆಯ ಕುಟುಂಬಸ್ಥರೆಲ್ಲಾ ನಿರ್ಧಾರ ತೆಗೆದುಕೊಂಡಿದ್ದಾರೆ.
ಚಾಮರಾಜನಗರ ತಾಲೂಕಿನ ವಿ.ಸಿ. ಹೊಸೂರು ಗ್ರಾಮದ ಸುಶ್ಮಾ ಹಾಗೂ ಚನ್ನಪ್ಪನಪುರದ ಶ್ರೇಯಸ್ ನಡುವೆ ನಿಶ್ಚಯವಾಗಿರುವ ಮದುವೆ ಇದಾಗಿದೆ. ಚಾಮರಾಜನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮದುವೆ ನೆರವೇರಬೇಕಿತ್ತು. ಆದ್ರೆ ಸದ್ಯ ವಧುವಿನ ಸ್ವಗೃಹದಲ್ಲೆ ಸರಳವಾಗಿ ವಿವಾಹವಾಗಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದರಿಂದ ಮದುವೆ ಕಾರ್ಯಕ್ರಮಕ್ಕೆ ಬಾರದೆ, ಇದ್ದಲ್ಲಿಯೇ ಆಶೀರ್ವದಿಸಿ ಎಂದು ವಧು ಮನವಿ ಮಾಡಿಕೊಂಡಿದ್ದಾರೆ.
ವ್ಯಾಕ್ಸಿನ್ ಪಡೆಯದ 120 ಸೋಂಕಿತರು ಬಳ್ಳಾರಿ ಜಿಲ್ಲಾಸ್ಪತ್ರೆಗೆ ದಾಖಲು
ಬಳ್ಳಾರಿ: ಕೊರೊನಾ ಲಸಿಕೆ (Vaccine) ಪಡೆಯದ ಸುಮಾರು 120 ಜನ ಸೋಂಕಿತರು ಬಳ್ಳಾರಿ (Bellary) ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ ಅಂತ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸಾರೆಡ್ಡಿ ಮಾಹಿತಿ ನೀಡಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ 10 ಜನ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 10 ಜನರಲ್ಲಿ 8 ಜನರು ಆಕ್ಸಿಜನ್ (Oxygen) ಮೇಲೆ ಇದ್ದಾರೆ. ಇಬ್ಬರು ವೆಂಟಿಲೇಟರ್ ಮೇಲೆ ಇದ್ದಾರೆ. ವ್ಯಾಕ್ಸಿನೇಷನ್ ಮಾಡಿಸಿಕೊಳ್ಳದ ಇಬ್ಬರು ಕೊವಿಡ್ಗೆ ಬಲಿಯಾಗಿದ್ದಾರೆ ಅಂತ ತಿಳಿಸಿದರು.
ಲಸಿಕೆ ಹಾಕಿಕೊಂಡವರಲ್ಲಿ ಕೊರೊನಾ ಸೋಂಕಿನ ತೀವ್ರತೆ ಹೆಚ್ಚು ಕಾಡುತ್ತಿಲ್ಲ. ಐಸಿಯುವರಿಗೂ ಹೋಗುತ್ತಿಲ್ಲ ಎಂದು ತಿಳಿಸಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸಾರೆಡ್ಡಿ, ಎಲ್ಲರೂ ಲಸಿಕೆ ಪಡೆಯುವಂತೆ ಮನವಿ ಮಾಡಿದರು.
ಲಿಂಕ್ ಕಳುಹಿಸಿ ವೈದ್ಯನಿಗೆ ಲಕ್ಷ ರೂಪಾಯಿ ವಂಚನೆ: ಸೈಬರ್ ಠಾಣೆಯಲ್ಲಿ ದಾಖಲಾಯ್ತು ದೂರು
ಧಾರವಾಡ: ‘ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗಲಿದೆ. ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಸರಿಪಡಿಸಿಕೊಳ್ಳಿ’ ಎಂದು ಅಪರಿಚಿತನೊಬ್ಬ ಧಾರವಾಡದ ವೈದ್ಯರೊಬ್ಬರಿಗೆ ಸಂದೇಶ ಕಳುಹಿಸಿ ಅವರ ಖಾತೆಯಿಂದ 1.25 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಧಾರವಾಡದ ಕೆಲಗೇರಿ ರಸ್ತೆ ಗ್ರೀನ್ ವೀವ್ ಲೇಔಟ್ ನಿವಾಸಿ ಡಾ. ಎಸ್.ವಿ. ಸಮಗಾರ ವಂಚನೆಗೀಡಾದವರು. ಡಾ. ಸಮಗಾರ ಅವರ ಮೊಬೈಲ್‌ಗೆ ಅಪರಿಚಿತರಿಂದ ಗುರುವಾರ ಸಂದೇಶ ಬಂದಿತ್ತು. ‘ಪ್ರಿಯ ಗ್ರಾಹಕರೇ, ಇಂದು ನಿಮ್ಮ ಎಸ್‌ಬಿಐ ಯೋನೊ ಅಕೌಂಟ್ ಬ್ಲಾಕ್ ಆಗಲಿದೆ. ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಪಾನ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಿ’ ಎಂದು ಲಿಂಕ್ ಕಳುಹಿಸಿದ್ದರು.
ನೆಟ್ ಬ್ಯಾಂಕಿಂಗ್ ಬಂದ್ ಆಗಬಹುದು ಎಂದು ಗಾಬರಿಗೊಂಡ ಡಾ. ಸಮಗಾರ ಅವರು ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದರು. ಮೊಬೈಲ್ ಫೋನ್‌ಗೆ ಬಂದ ಒಟಿಪಿ ಹಾಕಿ ಸಬ್‌ಮಿಟ್ ಮಾಡಿದ್ದರು. ಬಳಿಕ ಹಂತ ಹಂತವಾಗಿ ಡಾ. ಸಮಗಾರ ಅವರ ಖಾತೆಯಿಂದ ವಂಚಕರು ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಈ ಕುರಿತು ಹುಬ್ಬಳ್ಳಿ-ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 10:51 am, Sat, 22 January 22