ಚಾಮರಾಜನಗರ: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆಗೆ ರೈತರು ಬಿತ್ತನೆ ಮಾಡುವುದು ಸಾಮಾನ್ಯ. ಅದರಂತೆ ಜಿಲ್ಲೆಯ ರೈತರು ಪೂರ್ವ ಮುಂಗಾರು ಮಳೆ(Monsoon Rain)ಗೆ ಜೋಳ, ಸೂರ್ಯಕಾಂತಿ, ಹೆಸರು, ಅಲಸಂದೆ, ಉದ್ದು, ನೆಲಗಡೆಲೆ ಸೇರಿದಂತೆ 41 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದರು. ಆದರೆ, ಈಗ ಮಳೆ ಕೊರತೆ ಎದುರಾಗಿದೆ. ಬೆಳೆ ಒಣಗಿ ಹೋಗುತ್ತಿದ್ದು ರೈತರು ದಿಕ್ಕು ತೋಚದಂತಾಗಿದ್ದಾರೆ. ಇನ್ನು ಪಂಪ್ಸೆಟ್ಗಳಲ್ಲಿನ ನೀರು ಬಳಸಿಕೊಂಡು ಬೆಳೆ ತೆಗೆಯಲು ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಅದು ಸಹ ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ನಿರೀಕ್ಷೆಯಂತೆ ಮಳೆ ಬಿದ್ದಿದ್ದರೆ ಇಷ್ಟೊತ್ತಿಗೆ ಬೆಳೆಗಳು ನಳನಳಿಸಬೇಕಿತ್ತು. ಜಾನುವಾರುಗಳ ಮೇವಿನ ಕೊರತೆಯನ್ನು ನೀಗಿಸಬೇಕಿತ್ತು. ಆದರೆ, ಇದುವರೆಗೂ ಜಿಲ್ಲೆಯ ಬಹುತೇಕ ಕಡೆ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗದೆ 71 ಸಾವಿರಕ್ಕು ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಇನ್ನೂ ಬಿತ್ತನೆ ಕಾರ್ಯ ಆರಂಭಿಸಿಲ್ಲ. ಪೂರ್ವ ಮುಂಗಾರಿಗೆ ಬಿತ್ತನೆ ಮಾಡಿದ್ದ 41 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಒಣಗಿ ಹೋಗುತ್ತಿರುವುದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದ್ದು, ರೈತರು ದಾರಿ ಕಾಣದಂತಾಗಿದ್ದಾರೆ.
ಇದನ್ನೂ ಓದಿ:Belagavi News: ಮುಂಗಾರು ಮಳೆ ವಿಳಂಬ; ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬರಗಾಲದ ಛಾಯೆ
ಜಿಲ್ಲೆಯಲ್ಲಿ ಜೂನ್ ಜುಲೈ ತಿಂಗಳಲ್ಲಿನ ವಾಡಿಕೆ ಮಳೆಯಲ್ಲಿ ಶೇ.22 ರಷ್ಟು ಕೊರತೆಯಾಗಿದೆ. ಈ ತಿಂಗಳ ಅಂತ್ಯ ಅಥವಾ ಜುಲೈ ತಿಂಗಳ ಈ ವಾರದಲ್ಲಿ ಮಳೆಯಾಗುವ ನಿರೀಕ್ಷೆ ಇತ್ತು, ಅದು ಹುಸಿಯಾಗಿದೆ. ರೈತರು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿಕೊಂಡರೆ, ವಿಮೆ ಪರಿಹಾರ ದೊರೆಯಲಿದ್ದು ಬೆಳೆ ವಿಮೆ ಮಾಡಿಸಿಕೊಳ್ಳಲು ರೈತರು ಮುಂದಾಗಬೇಕು ಎಂದು ಜಂಟಿ ನಿರ್ದೇಶಕ ಕೃಷಿ ಇಲಾಖೆ ಅಧಿಕಾರಿ ಮದುಸೂಧನ್ ಮನವಿ ಮಾಡಿದ್ದಾರೆ. ಆದರೆ, ರೈತರು ಮಳೆ ಬಂದರೂ ಒಣಗಿರುವ ಬೆಳೆಗಳಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎನ್ನುತ್ತಾರೆ. ಜಿಲ್ಲಾಡಳಿತ ಕೂಡಲೇ ಬೆಳೆ ಸಮೀಕ್ಷೆ ನಡೆಸಿ ರೈತರ ನೆರವಿಗೆ ಧಾವಿಸಬೇಕು, ಜಾನುವಾರುಗಳಿಗೆ ಮೇವಿನ ಕೊರೆತೆ ನೀಗಿಸಲು ಕ್ರಮವಹಿಸಬೇಕು ಎಂಬುದು ರೈತರ ಆಗ್ರಹವಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:05 am, Thu, 6 July 23