ಚಾಮರಾಜನಗರ: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ ಹಳ್ಳಕ್ಕೆ ನುಗ್ಗಿದ್ದು, 25 ಪ್ರಯಾಣಿಕರಿಗೆ ಗಾಯ, ಇಬ್ಬರು ಸ್ಥಿತಿ ಗಂಭೀರವಾಗಿರುವಂತಹ ಘಟನೆ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತಾಳುಬೆಟ್ಟದ ಬಳಿ ಅಪಘಾತ ನಡೆದಿದೆ. ಗಾಯಾಳುಗಳು ಕೊಳ್ಳೇಗಾಲ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಡ್ಯ ಜಿಲ್ಲೆ ಮದ್ದೂರು ಡಿಪೋ ಬಸ್ ಇದಾಗಿದೆ. ಮಲೆ ಮಹದೇಶ್ವರಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೆರೆಗೆ ಬಿದ್ದು ಯುವತಿ ಆಕಸ್ಮಿಕ ಸಾವು
ಮಡಿಕೇರಿ: ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಪಾರಾಣೆ ಗ್ರಾ.ಪಂ. ವ್ಯಾಪ್ತಿಯ ಕಿರುಂದಾಡು ಗ್ರಾಮದಲ್ಲಿ ಕೆರೆಗೆ ಬಿದ್ದು ಯುವತಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಪಾರಾಣೆ ಗ್ರಾ.ಪಂ. ಸದಸ್ಯೆ ಪುತ್ರಿ ಚಸ್ಮಿಕಾ(20) ಮೃತ ಯುವತಿ. ಮೂರ್ನಾಡು ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದ ಚಸ್ಮಿಕಾ, ಗದ್ದೆಯಲ್ಲಿ ದನ ಕಟ್ಟಲು ಕೆರೆ ದಂಡೆ ಮೇಲೆ ಹೋಗುತ್ತಿದ್ದಾಗ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾಳೆ. ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನೀರು ತುಂಬಿದ ಕಲ್ಲಿನ ಕ್ವಾರಿಗೆ ಇಳಿದಿದ್ದ ಯುವಕ ನಾಪತ್ತೆ
ಬೆಳಗಾವಿ ತಾಲೂಕಿನ ಅಲತಗಾ ಗ್ರಾಮದಲ್ಲಿ ನೀರು ತುಂಬಿದ ಕಲ್ಲಿನ ಕ್ವಾರಿಗೆ ಇಳಿದಿದ್ದ ಅನಗೋಳ ಗ್ರಾಮದ ಸತೀಶ್ ಹನುಮಣ್ಣವರ್(22) ಎಂಬ ಯುವಕ ನಾಪತ್ತೆಯಾಗಿದ್ದಾನೆ. ನಿನ್ನೆ ಮೂವರು ಸ್ನೇಹಿತರ ಜತೆ ಪಾರ್ಟಿ ಮಾಡಿದ್ದ ಸತೀಶ್, ಈ ವೇಳೆ ಕಲ್ಲುಕ್ವಾರಿಯ ನೀರು ನೋಡಲು ಬಂದಿದ್ದಾಗ ನಾಪತ್ತೆಯಾಗಿದ್ದಾನೆ. ಈ ವೇಳೆ ಆತನ ಸ್ನೇಹಿತರು ಗಾಬರಿಗೊಂಡು ಕುಟುಂಬಸ್ಥರಿಗೆ ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕಾಕತಿ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ತಡರಾತ್ರಿಯವರೆಗೂ ಎಸ್‌ಡಿಆರ್‌ಎಫ್ ತಂಡದಿಂದ ಯುವಕನಿಗಾಗಿ ಶೋಧ ಕಾರ್ಯ ನಡೆಸಲಾಗಿದೆ. ಆದ್ರೆ ಯುವಕ ಪತ್ತೆಯಾಗಿಲ್ಲ. ಹೀಗಾಗಿ ಇಂದು ಕೂಡ ಶೋಧಕಾರ್ಯ ಮುಂದುವರಿಯಲಿದೆ.
ದೀಪಾವಳಿ ನೆಪದಲ್ಲಿ ಜೂಜಾಟ: ಸಿಕ್ಕಸಿಕ್ಕಲ್ಲಿ ದಾಳಿ ನಡೆಸಿ ಹಣ ಜಪ್ತಿ ಮಾಡಿದ ಪೊಲೀಸರು
ಕೊಪ್ಪಳ: ಜಿಲ್ಲೆಯ ಹಲವೆಡೆ ದೀಪಾವಳಿಯಂದು ದೀಪ ಕಾಯುವ ನೆಪದಲ್ಲಿ ಇಸ್ಪೀಟ್ ಆಡುತ್ತಾರೆ. ಕಾನೂನು ಪ್ರಕಾರ ಇಸ್ಪೀಟ್ ಆಡುವುದು ಅಪರಾಧವಾಗಿದೆ. ಹೀಗಾಗಿ ಯಾರು ಕೂಡ ಇಸ್ಪೀಟ್ ಆಡದಂತೆ ಪೊಲೀಸ್ ಇಲಾಖೆಯು ಡಂಗೂರ ಸಾರಿಸಿ, ಸಿಬ್ಬಂದಿಯೂ ಮೈಕ್ ಮೂಲಕ ತಿಳಿ ಹೇಳಿ ಹಾಗೂ ವಾಹನಗಳಲ್ಲಿ ಘೋಷಣೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗಿತ್ತು. ಆದರೆ ಕೆಲವು ಕಡೆಗಳಲ್ಲಿ ಪೊಲೀಸರ ಎಚ್ಚರಿಕೆಯನ್ನು ನಿರ್ಲಕ್ಷ್ಯಿಸಿ ದೀಪಾವಳಿಯಂದು ಇಸ್ಪೀಟ್ ಆಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ದಂಡ ವಸೂಲಿ ಮಾಡಿದ್ದಾರೆ.
ಪೊಲೀಸರ ಸೂಚನೆಯ ನಂತರವೂ ದೀಪಾವಳಿ ನೆಪದಲ್ಲಿ ಕೊಪ್ಪಳದಲ್ಲಿ ಇಸ್ಪೀಟ್ ಹಾವಳಿ ಮಿತಿ ಮೀರಿದ ಹಿನ್ನೆಲೆ ಅಖಾಡಕ್ಕಿಳಿದ ಪೊಲೀಸರು, ಒಂದೇ ದಿನ ಹಲವೆಡೆ ದಾಳಿ ನಡೆಸಿ 30ಕ್ಕೂ ಹೆಚ್ಚು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದರಂತೆ ಒಟ್ಟು 228 ಜನರ ಮೇಲೆ ಪ್ರಕರಣ ದಾಖಲಾದಂತಾಗಿದೆ. ಜೂಜಿಗೆ ಇಟ್ಟ ಒಟ್ಟು 2.56 ಲಕ್ಷ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:39 pm, Wed, 26 October 22