
ಬೆಂಗಳೂರು: ಬೆಂಗಳೂರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಬಹುದೊಡ್ಡ ಹಗರಣ ಆಗಿದೆ. ಬದುಕಿದ್ದವರ ಹೆಸರೇ ನಾಪತ್ತೆಯಾಗಿದೆ. ಸತ್ತವರ ಹೆಸರು ರಾರಾಜಿಸುತ್ತಿದೆ. ಚಿಲುಮೆ ಸಂಸ್ಥೆ ಮತದಾರರ ಬುಡಕ್ಕೆ ಬಿಸಿನೀರು ಎರಚಿದೆ. 243 ವಾರ್ಡ್ಗಳ ಚುನಾವಣೆ ಮೆಗಾ ಆಪರೇಷನ್ ರೂಪಿಸಿದ್ದ ಚಿಲುಮೆ ಸಂಸ್ಥೆಯ ಹಗರಣದ ಸಂಪೂರ್ಣ ಮಾಹಿತಿ ಇಲ್ಲಿದೆ.
ಬಿಬಿಎಂಪಿ ಚುನಾವಣೆ, ವಿಧಾನಸಭೆ ಚುನಾವಣೆಗೆ ಮತದಾರರ ಮಾಹಿತಿ ಸೇಲ್ ಮಾಡಲು ಚಿಲುಮೆ ಸಂಸ್ಥೆ ಸಜ್ಜಾಗಿತ್ತು. ಕಳೆದ ಲೋಕಸಭಾ ಚುನಾವಣೆ ಹಾಗೂ ಈ ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಚಿಲುಮೆ ಸಂಸ್ಥೆ ಮತದಾರರ ಸಂಪೂರ್ಣ ಮಾಹಿತಿ ಸಂಗ್ರಹಿಸಿತ್ತು. ಬೆಂಗಳೂರಿನ 90 ಲಕ್ಷ ಮತದಾರರ ಪೈಕಿ 60 ಲಕ್ಷ ಮತದಾರರ ಸಂಪೂರ್ಣ ಮಾಹಿತಿಯನ್ನು ಚಿಲುಮೆ ಸಂಸ್ಥೆ ಪಡೆದಿದೆ. ಬೆಂಗಳೂರಿನ28 ಮತಕ್ಷೇತ್ರಗಳ ಬೂತ್ ಹಂತದ ಮತದಾರರ ಸಂಪೂರ್ಣ ವಿವರ ಚಿಲುಮೆ ಹೊಂದಿದೆ. ಮತದಾರರ ಹೆಸರು, ಮೊಬೈಲ್ ನಂಬರ್, ಉದ್ಯೋಗ, ಜಾತಿ, ಕಳೆದ ಬಾರಿ ಯಾರಿಗೆ ವೋಟ್ ಮಾಡಿದ್ರು, ಯಾವ ಬೂತ್ನಲ್ಲಿ ಯಾವ ಜಾತಿಯ ಎಷ್ಟು ಮತದಾರರು ಇದ್ದಾರೆ ಎಂಬ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ.
ಚಿಲುಮೆ ಸಂಸ್ಥೆಯ ಬಂಡವಾಳ ಗೊತ್ತಿದ್ದರು ಬಿಬಿಎಂಪಿ ಸುಮ್ಮನೆ ಇದ್ದಿದ್ಯಾಕೆ?
ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ಮಾಡುವವರೆಗೂ ಬಿಬಿಎಂಪಿ ಸುಮ್ಮನಿದ್ದು ಬಳಿಕ ಕೇಸ್ ದಾಖಲಿಸಿದೆ. ಚಿಲುಮೆ ಸಂಸ್ಥೆಯ ಸಿಬ್ಬಂದಿ ಬಿಎಲ್ ಒ ಎಂದು ಐಡಿ ಕಾರ್ಡ್ ಬಳಕೆ ಮಾಡುತ್ತಿರುವುದು ಹಾಗೂ ಮತದಾರರ ಮಾಹಿತಿ ಸಂಗ್ರಹ ಮಾಡುತ್ತಿರುವ ಬಗ್ಗೆ ಬಿಬಿಎಂಪಿಗೆ ಮೊದಲೇ ಗೊತ್ತಿತ್ತು. ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಸಮನ್ವಯ ಎಂಬ ಸಂಸ್ಥೆ ಈ ಬಗ್ಗೆ ಬಿಬಿಎಂಪಿಗೆ ದೂರು ನೀಡಿತ್ತು. ದೂರಿನ ಆಧಾರದ ಮೇಲೆ ನವೆಂಬರ್4 ನೇ ತಾರೀಖಿನಂದೇ ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿ ಪತ್ರ ರದ್ದು ಮಾಡಲಾಗಿದೆ. ಆದರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ನವೆಂಬರ್15 ರಂದು. ಕಾಡುಗೋಡಿ ಪೊಲೀಸ್ ಠಾಣೆ, ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ನವೆಂಬರ್15 ರಂದು ದೂರು ದಾಖಲಾಗಿದೆ. ಬಿಬಿಎಂಪಿ ನವೆಂಬರ್ 4 ರಂದೇ ಯಾಕೆ ದೂರು ದಾಖಲು ಮಾಡಲಿಲ್ಲ ಎಂಬ ಅನುಮಾನ ವ್ಯಕ್ತವಾಗಿದೆ. ಐಡಿ ಕಾರ್ಡ್ ನೀಡಿದ ಆರ್ಒ ವಿರುದ್ಧ ಅಂದೇ ಯಾಕೆ ಬಿಬಿಎಂಪಿ ಕ್ರಮ ತೆಗೆದುಕೊಳ್ಳಲಿಲ್ಲ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಏಕೆ ಮಾಹಿತಿ ನೀಡಲಿಲ್ಲ ಎಂಬ ಪ್ರಶ್ನೆ ಎದ್ದಿದೆ.
ಇದನ್ನೂ ಓದಿ: ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ: ಬೆಂಗಳೂರಿನಲ್ಲಿರುವ ಚಿಲುಮೆ ಕಚೇರಿ ಮೇಲೆ ಪೊಲೀಸ್ ದಾಳಿ
ಚಿಲುಮೆ ಸಂಸ್ಥೆಗೆ ಆಧಾರ್ ಲಿಂಕ್ ಮಾಡುವ ಹೊಣೆ ನೀಡಿದ್ಯಾಕೆ?
ಮತದಾರರ ಮಾಹಿತಿ, ಆಧಾರ್ ಲಿಂಕ್ ಮಾಡುವ ಹೊಣೆಯನ್ನು ಬಿಬಿಎಂಪಿ ಖಾಸಗಿ ಸಂಸ್ಥೆಯಾಗಿರುವ ಚಿಲುಮೆ ಸಂಸ್ಥೆಗೆ ನೀಡಿದೆ. ಸರ್ಕಾರಿ ನೌಕರರು, ಅಥವಾ ಸರ್ಕಾರದ ಇಲಾಖೆಯಿಂದ ಆಧಾರ್ ಲಿಂಕ್ ಮಾಡಿಸದೆ ದೇಶದ ಗೌಪ್ಯ ಮಾಹಿತಿ ಸಂಗ್ರಹಣೆಗೆ ಖಾಸಗಿ ಸಂಸ್ಥೆಗೆ ನೀಡಿದ್ಯಾಕೆ ಎಂಬ ಅನುಮಾನ ವ್ಯಕ್ತವಾಗಿದೆ. ಬ್ಯಾಂಕ್ ಅಕೌಂಟ್, ಮೊಬೈಲ್ ಸಿಮ್ ಕಾರ್ಡ್ ಸೇರಿದಂತೆ ಎಲ್ಲದಕ್ಕೂ ಆಧಾರ್ ಬಳಕೆ ಮಾಡಲಾಗಿದೆ. ಇಂತಹ ಗೌಪ್ಯತೆವುಳ್ಳ ಮಾಹಿತಿ ಸಂಗ್ರಹಣೆ ಚಿಲುಮೆ ಸಂಸ್ಥೆಗೆ ನೀಡಿದ್ಯಾಕೆ ಎಂಬ ಕೂಗು ಕೇಳಿ ಬರುತ್ತಿದೆ.
R.R.ನಗರ ಕ್ಷೇತ್ರದಲ್ಲಿ ಒಟ್ಟು 33,009 ಮತದಾರರ ಹೆಸರು ಡಿಲೀಟ್
ಇನ್ನು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಒಟ್ಟು 33,009 ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ. ಆರ್.ಆರ್.ನಗರ ಕ್ಷೇತ್ರದಲ್ಲಿರುವ ಸ್ಲಂ ನಿವಾಸಿಗಳು, ಮುಸ್ಲಿಮರು, ದಲಿತರ ಕಾಲೋನಿಯ ಮತದಾರರ ಹೆಸರು ಡಿಲೀಟ್ ಆಗಿರುವ ಬಗ್ಗೆ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಆರೋಪ ಮಾಡಿದ್ದಾರೆ.
ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಹೆಸರು ಡಿಲೀಟ್
ಅಲ್ಲದೆ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿಯೂ ಸಾವಿರಾರು ಮತದಾರರ ಹೆಸರು ಡಿಲಿಟ್ ಮಾಡಲಾಗಿದೆ. ಹೆಬ್ಬಾಳದ ವಾರ್ಡ್ ನಂ 33 ವ್ಯಾಪ್ತಿಯಲ್ಲಿರುವ ಮತದಾರರ ಹೆಸರು ಡಿಲಿಟ್ ಮಾಡಲಾಗಿದ್ದು ಅದರಲ್ಲಿ ಹೆಚ್ಚಾಗಿ ಮುಸ್ಲಿಂ ಮತದಾರರೇ ಇದ್ದಾರೆ. ಬೂತ್ ನಂಬರ್ 232 ಒಂದರಲ್ಲಿಯೇ 65 ಮತದಾರರು ಡಿಲಿಟ್ ಆಗಿದ್ದಾರೆ.
Published On - 10:29 am, Sat, 19 November 22