ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basvaraj Bommai) ಇಂದು ಕಂದಾಯ ದಾಖಲೆ ರೈತನ ಮನೆ ಬಾಗಿಲಿಗೆ ಯೋಜನೆಗೆ ಚಾಲನೆ ನೀಡಿದರು. ಚಿಕ್ಕಬಳ್ಳಾಪುರ ತಾಲೂಕಿನ ಗುಂಗಿರ್ಲಹಳ್ಳಿಯಲ್ಲಿ ರೈತರಿಗೆ ಉಚಿತವಾಗಿ ದಾಖಲೆ ವಿತರಿಸುವ ಕಂದಾಯ ದಾಖಲೆ ರೈತನ ಮನೆ ಬಾಗಿಲಿಗೆ ಎನ್ನುವ ಯೋಜನೆಗೆ ಚಾಲನೆ ನೀಡಿದರು. ಈ ವೇಳೆ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್, ಆರೋಗ್ಯ ಖಾತೆ ಸಚಿವ ಡಾ.ಕೆ.ಸುಧಾಕರ್ ಉಪಸ್ಥಿತರಿದ್ದರು. ಕಂದಾಯ ದಾಖಲೆ ರೈತನ ಮನೆ ಬಾಗಿಲಿಗೆ ಎನ್ನುವುದು ರೈತರ ಜಮೀನಿನ ದಾಖಲೆಗಳಾದ ಪಹಣಿ, ಅಟ್ಲಾಸ್, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಸೇರಿದಂತೆ ವಿವಿಧ ದಾಖಲೆಗಳನ್ನು ನೀಡುವ ಯೋಜನೆಯಾಗಿದೆ. ಅಲ್ಲದೆ ಈ ಯೋಜನೆಯಡಿ ರೈತರಿಗೆ ದಾಖಲೆಗಳನ್ನು ಉಚಿತವಾಗಿ ನೀಡಲಾಗುತ್ತದೆ.
ಕಾರ್ಯಕ್ರಮದ ಚಾಲನೆಗೆ ಗುಂಗಿರ್ಲಹಳ್ಳಿಗೆ ತೆರಳಿದ ಸಿಎಂ ಬೊಮ್ಮಾಯಿ ಅವರನ್ನು ಗ್ರಾಮಸ್ಥರು ಎತ್ತಿನ ಬಂಡಿಯಲ್ಲಿ ಕರೆದುಕೊಂಡು ಹೋಗಿದ್ದಾರೆ. ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಸಿಎಂ ಬೊಮ್ಮಾಯಿಗೆ ಗ್ರಾಮಸ್ಥರು ಅದ್ದೂರಿ ಸ್ವಾಗತಕೋರಿದ್ದಾರೆ.
55 ಲಕ್ಷ ರೈತರ ಮನೆಗೆ ದಾಖಲೆ ನೀಡಲಾಗುವುದು:
ಗುಂಗಿರ್ಲಹಳ್ಳಿ ಗ್ರಾಮದಲ್ಲಿ ಕಂದಾಯ ದಾಖಲೆ ರೈತನ ಮನೆ ಬಾಗಿಲಿಗೆ ಯೋಜನೆ ಚಾಲನೆಯ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್ ಕಂದಾಯ ದಾಖಲೆ ಪಡೆಯಲು ಕಷ್ಟವಾಗುತ್ತಿದೆ ಎಂದು ಜನ ದೂರು ನೀಡುತ್ತಿದ್ದರು. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸಿ ಯೋಜನೆ ಜಾರಿಗೋಳಿಸಲಾಗಿದೆ. 5 ಕೋಟಿ ದಾಖಲೆಗಳನ್ನು 55 ಲಕ್ಷ ರೈತರ ಮನೆಗೆ ನೀಡಲಾಗುತ್ತಿದೆ. ರೈತರು ಕಡ್ಡಾಯವಾಗಿ ತಮ್ಮ ಜಮೀನಿನ ದಾಖಲೆ ಪರಿಶೀಲನೆ ಮಾಡಿಕೊಳ್ಳಿ ಎಂದು ಚಿಕ್ಕಬಳ್ಳಾಪುರ ತಾಲೂಕಿನ ಗುಂಗಿರ್ಲಹಳ್ಳಿಯಲ್ಲಿ ಆರ್ ಅಶೋಕ್ ಹೇಳಿದ್ದಾರೆ.
ಇದನ್ನೂ ಓದಿ:
ಮನೆಯಲ್ಲಿ ಜಿಂಕೆ ಮಾಂಸ ಇದೆ ಎಂದು ಪರಿಶೀಲನೆಗೆ ಬಂದ ಅಧಿಕಾರಿಗಳನ್ನು ಕೂಡಿಹಾಕಿದ ಗ್ರಾಮಸ್ಥರು