ಬಿ.ಎಸ್. ಯಡಿಯೂರಪ್ಪಗೆ ಇಂದು ಡಬಲ್ ಹಿನ್ನಡೆ: ಮುಖ್ಯಮಂತ್ರಿಗೆ ಎದುರಾಗುತ್ತಾ ಭೂ ಕಂಟಕ?
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಕಾನೂನು ಹೋರಾಟದಲ್ಲಿ ಇಂದು ಡಬಲ್ ಹಿನ್ನಡೆ ಎದುರಿಸಿದ್ದಾರೆ. ಸಿಎಂ BSY ವಿರುದ್ಧದ ಡಿನೋಟಿಫಿಕೇಷನ್ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಲ್ಲಿಸಿದ್ದ ರಿಟ್ ಅರ್ಜಿ ವಜಾಗೊಂಡಿದೆ.
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಕಾನೂನು ಹೋರಾಟದಲ್ಲಿ ಇಂದು ಡಬಲ್ ಹಿನ್ನಡೆ ಎದುರಿಸಿದ್ದಾರೆ. ಸಿಎಂ BSY ವಿರುದ್ಧದ ಡಿನೋಟಿಫಿಕೇಷನ್ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಲ್ಲಿಸಿದ್ದ ರಿಟ್ ಅರ್ಜಿ ವಜಾಗೊಂಡಿದೆ.
ಪ್ರಕರಣದ FIR ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಈ ಮೂಲಕ, ಲೋಕಾಯುಕ್ತ ಪೊಲೀಸರ ತನಿಖೆಗೆ ಹೈಕೋರ್ಟ್ ಗ್ರೀನ್‌ಸಿಗ್ನಲ್ ಕೊಟ್ಟಿದೆ. ಜೊತೆಗೆ, BSY ವಿರುದ್ಧ ತನಿಖೆ ಮುಂದುವರಿಸಲು ಹೈಕೋರ್ಟ್ ಸೂಚನೆ ನೀಡಿದೆ.
ಇದಲ್ಲದೆ, ಹೈಕೋರ್ಟ್ ಅರ್ಜಿದಾರ ಯಡಿಯೂರಪ್ಪಗೆ 25 ಸಾವಿರ ರೂಪಾಯಿ ದಂಡ ಸಹ ವಿಧಿಸಿ, ನ್ಯಾ. ಜಾನ್ ಮೈಕೆಲ್ ಕುನ್ಹಾ ಆದೇಶ ಹೊರಡಿಸಿದ್ದಾರೆ.
ಏನಿದು ಪ್ರಕರಣ? ಗಂಗೇನಹಳ್ಳಿಯಲ್ಲಿ 1.11 ಎಕರೆ ಡಿನೋಟಿಫಿಕೇಷನ್ ಆರೋಪದಡಿ H.D. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅರ್ಜಿ ಸಲ್ಲಿಸಲಾಗಿತ್ತು. ಜೊತೆಗೆ, ಯಡಿಯೂರಪ್ಪ ಮುಖ್ಯಮಂತ್ರಿ ಆದ ನಂತರ ಡಿನೋಟಿಫಿಕೇಷನ್ ಮಾಡಲಾಗಿತ್ತು.
ಮತ್ತೊಂದು ಪ್ರಕರಣದಲ್ಲೂ ಬಿಎಸ್‌ವೈಗೆ ಹಿನ್ನಡೆ ಇದಲ್ಲದೆ, ಮತ್ತೊಂದು ಪ್ರಕರಣದಲ್ಲೂ ಸಿಎಂ BSYಗೆ ಹಿನ್ನಡೆ ಆಗಿದೆ. ಮಾಜಿ ಸಚಿವ ಮುರುಗೇಶ್ ನಿರಾಣಿ ಹಾಗೂ ಯಡಿಯೂರಪ್ಪ ವಿರುದ್ಧ ಆಲಂ ಪಾಷಾ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನ ಹೈಕೋರ್ಟ್ ಅಂಗೀಕರಿಸಿದೆ. ಜೊತೆಗೆ, ಖಾಸಗಿ ದೂರು ಮುಂದುವರಿಸಲು ಹೈಕೋರ್ಟ್ ಆದೇಶಿಸಿದೆ.
2014ರಲ್ಲಿ ಮುರುಗೇಶ್ ನಿರಾಣಿ ವಿರುದ್ಧ ಆಲಂ ಪಾಷಾ ಎಂಬುವವರು ಖಾಸಗಿ ದೂರು ದಾಖಲಿಸಿದ್ದರು. ಆಲಂ ಪಾಷಾ ಕಂಪನಿಗೆ ನೀಡಿದ್ದ ಜಮೀನು ವಾಪಸ್ ಪಡೆಯಲು ಅಂದಿನ ಸಿಎಂ ನೇತೃತ್ವದ ಸಮಿತಿ ತೀರ್ಮಾನಿಸಿತ್ತು. ಈ ನಡುವೆ, ನಕಲಿ ದಾಖಲೆ ಸೃಷ್ಟಿಸಿ ಜಮೀನನ್ನು ಹಿಂಪಡೆಯಲಾಗಿತ್ತು ಎಂದು ಆರೋಪಿಸಿ ಆಲಂ ಪಾಷಾ ಖಾಸಗಿ ದೂರು ದಾಖಲಿಸಿದ್ದರು.
ಅಂದ ಹಾಗೆ, ಪೂರ್ವಾನುಮತಿ ಇಲ್ಲದ ಕಾರಣ ದೂರಿನ ವಿಚಾರಣೆಗೆ ಕೋರ್ಟ್ ನಿರಾಕರಿಸಿತ್ತು. ಹಾಗಾಗಿ, ಇದನ್ನು ಪ್ರಶ್ನಿಸಿ ಆಲಂ ಪಾಷಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದೀಗ, ಆಲಂ ಪಾಷಾ ಅರ್ಜಿಯನ್ನು ಹೈಕೋರ್ಟ್ ಅಂಗೀಕರಿಸಿದೆ. ಜೊತೆಗೆ, ಪೂರ್ವಾನುಮತಿ ಅಗತ್ಯವಿಲ್ಲವೆಂದು ನ್ಯಾ.ಜಾನ್ ಮೈಕೆಲ್ ಕುನ್ಹಾ ಅಭಿಪ್ರಾಯ ಪಟ್ಟಿದ್ದಾರೆ. ಇದಲ್ಲದೆ, BSY ಮತ್ತು ನಿರಾಣಿ ವಿರುದ್ಧ ಪ್ರಕರಣ ಮುಂದುವರಿಕೆಗೆ ಆದೇಶ ಸಹ ನೀಡಿದ್ದಾರೆ.