ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರು ಸುದ್ದಿಗೋಷ್ಠಿ ನಡೆಸಿ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇ.60ರಷ್ಟು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಅಭೂತಪೂರ್ವ ಸಾಧನೆ ಎಂದು ಸಂತೋಷ ವ್ಯಕ್ತಪಡಿಸಿದ ಬೆನ್ನಲ್ಲೇ, ಮಾಜಿ ಸಿಎಂ ಸಿದ್ದರಾಮಯ್ಯನವರು ಪ್ರತಿಕ್ರಿಯೆ ನೀಡಿ, ಸಿಎಂ ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಗರಂ ಆಗಿದ್ದಾರೆ.
ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಗ್ರಾಮ ಪಂಚಾಯತಿ ಚುನಾವಣೆ ಮತ ಎಣಿಕೆ ಇನ್ನೂ ಮುಕ್ತಾಯವಾಗಿಲ್ಲ. ಆದರೂ ಈಗಲೇ ನಾವು ಗೆದ್ದಿದ್ದೇವೆ ಎಂದು ಯಡಿಯೂರಪ್ಪನವರು ಹೇಳುತ್ತಿದ್ದಾರೆ. ಬಿಎಸ್ವೈ ಇನ್ನೂ ಹಗಲುಗನಸು ಕಾಣುತ್ತಿದ್ದಾರೆ. ಅವರೊಬ್ಬ ಸಿಎಂ ಆಗಿ ಜವಾಬ್ದಾರಿಯುತ ಹೇಳಿಕೆ ನೀಡಬೇಕು ಎಂದು ತಿರುಗೇಟು ನೀಡಿದ್ದಾರೆ. ಕೌಂಟಿಂಗ್ ಪೂರ್ತಿ ಮುಗಿಯುವ ಮುನ್ನವೇ ಶೇ.60ರಷ್ಟು ಗೆದ್ದಿದ್ದೇವೆ ಎನ್ನುತ್ತಾರಲ್ಲ.. ನಾನೂ ಕೂಡ ಕಾಂಗ್ರೆಸ್ ಬೆಂಬಲಿತ ಶೇ.65 ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದು ಹೇಳಬಹುದಲ್ಲ ಎಂದಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರೇ ಹೆಚ್ಚು ಗೆಲುವು ಸಾಧಿಸಲಿದ್ದಾರೆ..
ಮುಖ್ಯಮಂತ್ರಿ ಯಡಿಯೂರಪ್ಪನವರ ಖುರ್ಚಿಯೇ ಅಲುಗಾಡುತ್ತಿದೆ. ನಾಳೆ ವಿಧಾನಸಭೆ ಚುನಾವಣೆ ಆದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಗ್ರಾಮ ಪಂಚಾಯತಿ ಚುನಾವಣೆಯಲ್ಲೂ ನಮ್ಮ ಕಾರ್ಯಕರ್ತರೇ ಹೆಚ್ಚು ಗೆಲುವು ಸಾಧಿಸಲಿದ್ದಾರೆ. ಪುರಸಭೆ ಚುನಾವಣೆಯಲ್ಲೂ ನಾವೇ ನಂಬರ್ 1 ಆಗಿದ್ದೇವೆ. ಗೆದ್ದಿರುವ ಎಲ್ಲ ಸದಸ್ಯರಿಗೆ, ಮತದಾರರಿಗೆ ಅಭಿನಂದನೆಗಳು. ಇನ್ನೊಂದು ಎಂದರೆ ಗ್ರಾಮಪಂಚಾಯಿತಿ ಚುನಾವಣೆಗಳು ಪಕ್ಷದ ಚಿಹ್ನೆಯ ಆಧಾರದ ಮೇಲೆ ನಡೆಯೋದಿಲ್ಲ. ಕೆಲವೆಡೆ ಪಕ್ಷಗಳ ಕಾರ್ಯಕರ್ತರು ಸ್ಪರ್ಧಿಸುತ್ತಾರೆ, ಇನ್ನೂ ಕೆಲವು ಕಡೆ ಸ್ವತಂತ್ರವಾಗಿ ನಿಲ್ಲುತ್ತಾರೆ ಎಂದು ಸಿದ್ದರಾಮಯ್ಯನವರು ವಿಶ್ಲೇಷಣೆ ಮಾಡಿದರು.
ಸರ್ಕಾರದ ವಿರುದ್ಧ ಕಿಡಿ
ಕೊವಿಡ್-19 ವಿಚಾರದಲ್ಲಿ ಸರ್ಕಾರ ಅರಾಜಕತೆ, ಬೇಜವಾಬ್ದಾರಿ ತೋರಿಸುತ್ತಿದೆ ಎಂದು ಸಿದ್ದರಮಯ್ಯನವರು ಕಿಡಿಕಾರಿದರು. ಕೊರೊನಾ ನಿಯಂತ್ರಣ ಮಾಡಿದ್ದೇವೆ ಎನ್ನುತ್ತಾರೆ..ಆದರೆ ವಿಮಾನ ನಿಲ್ದಾಣದಿಂದ ಜನರು ಮಿಸ್ ಆಗಿದ್ದಾರೆ ಎಂದು ಹೇಳುತ್ತಾರೆ. ಏರ್ಪೋರ್ಟ್ಗೆ ಬಂದವರನ್ನೇ ತಪಾಸಣೆಗೆ ಒಳಪಡಿಸಲು ಆಗದೆ ಇದ್ದವರು ಕೊವಿಡ್ ಕಂಟ್ರೋಲ್ ಹೇಗೆ ಮಾಡುತ್ತಾರೆ. ವಿಮಾನ ನಿಲ್ದಾಣಕ್ಕೆ ಬಂದವರು ಕದ್ದು ಓಡಿಹೋಗಲು ಸಾಧ್ಯವಾಗುತ್ತಾ? ಈ ಸರ್ಕಾರದ್ದು ಬೇಜವಾಬ್ದಾರಿತನ ಎಂದು ವಾಗ್ದಾಳಿ ನಡೆಸಿದರು.
ಹೊಸ ವರ್ಷಾಚರಣೆಗೆ ಜಾರಿಗೊಳಿಸಿದ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಿ: ಮುಖ್ಯಮಂತ್ರಿ ಯಡಿಯೂರಪ್ಪ ಮನವಿ