
ಸರ್ಕಾರಿ ಅಧಿಕಾರಿಗಳು ಎಂದರೆ ಸಾಕು, ಹೆಚ್ಚಿನವರು ತಮ್ಮದೇ ಆದ ಹಮ್ಮುಬಿಮ್ಮು ರೂಢಿಸಿಕೊಂಡುಬಿಡುತ್ತಾರೆ.. ಇನ್ನು ಉನ್ನತ ಹುದ್ದೆಯಲ್ಲಿದ್ದರಂತೂ ಕೇಳುವುದೇ ಬೇಡ.. ಮಾತನಾಡಿಸುವುದೂ ಕಷ್ಟ. ಆದರೆ ಸರ್ಕಾರದ ನೂತನ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಇದಕ್ಕೆ ವ್ಯತಿರಿಕ್ತವಾಗಿದ್ದಾರೆ. ತುಂಬಿದ ಕೊಡ ತುಳುಕುವುದಿಲ್ಲ ಎಂಬುದಕ್ಕೆ ಅನ್ವರ್ಥದಂತಿದ್ದಾರೆ. ಇಂದು ರವಿಕುಮಾರ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಸಂದರ್ಭ, ಅವರ ಸರಳತೆಯ ಪರಿಚಯ ಆಗಿದೆ.
ಕುಟುಂಬ ಸದಸ್ಯರ ಜತೆ ಭೇಟಿ
ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಇಂದು ಕುಟುಂಬ ಸದಸ್ಯರ ಜತೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ, ನಾಡದೇವತೆಯ ಆಶೀರ್ವಾದ ಪಡೆದರು. ಈ ವೇಳೆ ಅವರು ನಡೆದುಕೊಂಡ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಶನಿವಾರ ಮಧ್ಯಾಹ್ನವೇ ಕುಟುಂಬ ಸದಸ್ಯರೊಂದಿಗೆ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ಪಿ.ರವಿಕುಮಾರ್ ಸರ್ಕಾರಿ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದ್ದರು. ಭಾನುವಾರ ಬೆಳಗ್ಗೆ ಪತ್ನಿ ಹಾಗೂ ಪುತ್ರನ ಜತೆಗೆ ಚಾಮುಂಡಿಬೆಟ್ಟಕ್ಕೆ ತೆರಳಿ ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ವಿಶೇಷ ಎಂದರೆ, ರವಿಕುಮಾರ್ ತಮ್ಮ ಎಸ್ಕಾರ್ಟ್ ವಾಹನ ಬಿಟ್ಟು ಸಾಮಾನ್ಯ ವ್ಯಕ್ತಿಯಂತೆಯೇ ಕುಟುಂಬ ಸಮೇತ ಬೆಟ್ಟಕ್ಕೆ ಭೇಟಿ ನೀಡಿದ್ದು. ಅಷ್ಟೇ ಅಲ್ಲ ಪಿ.ರವಿಕುಮಾರ್, ಬೆಟ್ಟದಲ್ಲಿನ ವಾಹನ ನಿಲುಗಡೆ ಸ್ಥಳದಲ್ಲೇ ತಮ್ಮ ಕಾರು ನಿಲ್ಲಿಸಿ, ಅಲ್ಲಿಂದ ದೇವಸ್ಥಾನದ ತನಕ ಸಾರ್ವಜನಿಕರ ಜತೆಗೆ ನಡೆದಕೊಂಡೇ ಬಂದರು..!
ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಚಾಮುಂಡಿಬೆಟ್ಟಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಶಿಷ್ಟಾಚಾರದಂತೆ ದೇವಾಲಯದ ಮುಂದೆ ಅವರನ್ನು ಸ್ವಾಗತಿಸಲು ಅಧಿಕಾರಿಗಳು ನೆರೆದಿದ್ದರು. ಅಲ್ಲದೆ, ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಮುಖ್ಯಕಾರ್ಯದರ್ಶಿ ದೇವಾಲಯದ ಬಾಗಿಲ ತನಕ ಸರಕಾರಿ ಕಾರಿನಲ್ಲೇ ಬರುತ್ತಾರೆ ಎಂದುಕೊಂಡಿದ್ದ ಅಧಿಕಾರಿಗಳು, ಮುಖ್ಯಕಾರ್ಯದರ್ಶಿ ಕಾಲ್ನಡಿಗೆಯಲ್ಲೇ ಆಗಮಿಸಿದ್ದನ್ನು ಕಂಡು ಆಶ್ಚರ್ಯಚಕಿತರಾದರು.
ನಾಡ ದೇವತೆ, ತಾಯಿ ಚಾಮುಂಡಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ ಬಳಿಕ ದೇವಾಲಯದಿಂದ ಹೊರಬಂದ ಪಿ.ರವಿಕುಮಾರ್, ಭದ್ರತೆಗೆಂದು ಆಗಮಿಸಿದ ಪೊಲೀಸರನ್ನು ಹಿಂದಕ್ಕೆ ಕಳುಹಿಸಿ ಸಾಮಾನ್ಯರಂತೆ ಪಾರ್ಕಿಂಗ್ ಕಟ್ಟಡದತ್ತ ತೆರಳಿ ಅಲ್ಲಿಂದ ನಿರ್ಗಮಿಸಿದರು. ಬಹುತೇಕ ಅಧಿಕಾರಿಗಳು ತಮ್ಮ ಪ್ರಭಾವ ಬಳಸಿ ದೇವಾಲಯ ಸಮೀಪದವರೆಗೂ ವಾಹನದಲ್ಲಿ ಬರುವುದು ಸಾಮಾನ್ಯವಾಗಿದೆ. ಈ ನಡುವೆ ಮುಖ್ಯ ಕಾರ್ಯದರ್ಶಿಯಂತಹ ಉನ್ನತ ಹುದ್ದೆಯಲ್ಲಿರುವ ಅಧಿಕಾರಿ, ಪಾರ್ಕಿಂಗ್ ಕಟ್ಟಡದಲ್ಲೇ ವಾಹನ ನಿಲುಗಡೆ ಮಾಡಿ ಸಾಮಾನ್ಯರಂತೆ ವರ್ತಿಸಿದ್ದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಎಲ್ಲ ಸಿದ್ಧತೆ ಮಾಡಿಕೊಂಡಿದ್ದೆವು
ಇವತ್ತು ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಚಾಮುಂಡೇಶ್ವರಿ ದರ್ಶನಕ್ಕೆ ಆಗಮಿಸುತ್ತಾರೆ ಎಂಬ ಮಾಹಿತಿಯಿತ್ತು. ಶಿಷ್ಠಾಚಾರದಂತೆ ನಾವು ಎಲ್ಲ ಸಿದ್ದತೆ ಮಾಡಿಕೊಂಡಿದ್ದೆವು. ಸಾಮಾನ್ಯವಾಗಿ ಸಿಎಂ ಹಾಗೂ ಹಿರಿಯ ಅಧಿಕಾರಿಗಳು ಬಂದಾಗ ದೇವಸ್ಥಾನದ ಬಳಿಗೆ ಕಾರು ಬರುತ್ತದೆ. ಅಲ್ಲಿಂದ ಪೂರ್ಣ ಕುಂಭ ಸ್ವಾಗತ ನೀಡಿ ದೇವಸ್ಥಾನದ ಒಳಗೆ ಕರೆದುಕೊಂಡು ಹೋಗಲಾಗುತ್ತದೆ. ಇವತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ತಮ್ಮ ವಾಹನವನ್ನು ಪಾರ್ಕಿಂಗ್‌ನಲ್ಲಿ ನಿಲ್ಲಿಸಿ ಯಾವುದೇ ಭದ್ರತೆಯಿಲ್ಲದೆ ತಮ್ಮ ಕುಟುಂಬದ ಜೊತೆ ಆಗಮಿಸಿ ತಾಯಿಯ ದರ್ಶನ ಪಡೆದರು ಇದು ನಿಜಕ್ಕೂ ನನಗೆ ಅಚ್ಚರಿ ತರಿಸಿತು ಎಂದು ಚಾಮುಂಡಿ ಬೆಟ್ಟ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ್ ದೀಕ್ಷಿತ್ ತಿಳಿಸಿದ್ದಾರೆ.
ನಮಗಂತೂ ತುಂಬ ಖುಷಿಯಾಯಿತು
ತುಂಬಿದ ಕೊಡ ತುಳುಕುವುದಿಲ್ಲ ಎನ್ನುವ ಮಾತು ಕೇಳಿದ್ದೆ. ಇವತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರನ್ನು ನೋಡಿ ಅದು ನಿಜ ಎನಿಸಿತು. ಅವರ ಸರಳತೆ, ಶ್ರದ್ಧೆ, ಭಕ್ತಿ ಮತ್ತು ಕಾನೂನಿನ ಬಗ್ಗೆ ಇರುವ ಗೌರವ ನೋಡಿ ನಿಜಕ್ಕೂ ಖುಷಿಯಾಯಿತು. ಅವರ ಸರಳತೆ ನಿಜಕ್ಕೂ ನನಗೆ ಆದರ್ಶ ಎನ್ನಿಸಿತು.. ನನಗೆ ಮಾತ್ರವಲ್ಲ ದೇವರ ದರ್ಶನ ಪಡೆಯಲು ಬೆಟ್ಟಕ್ಕೆ ಆಗಮಿಸಿದ್ದ ಭಕ್ತರು ಕೂಡ ಪಿ.ರವಿಕುಮಾರ್ ಅವರ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು ಎಂದಿದ್ದಾರೆ ಚಾಮುಂಡಿಬೆಟ್ಟ ಕಾರ್ಯ ನಿರ್ವಾಹಕ ಅಧಿಕಾರಿ ಯತಿರಾಜ್.ಎಸ್.ಎನ್.
ಮೈಸೂರು ಶಕ್ತಿ ದೇವತೆ! ಅಧಿಕಾರ ಸ್ವೀಕಾರಕ್ಕೂ ಮುನ್ನ ಚಾಮುಂಡಿ ಆಶೀರ್ವಾದ ಪಡೆದ ರೋಹಿಣಿ
Published On - 5:45 pm, Mon, 4 January 21