ಇತ್ತೀಚಿನ ವರ್ಷಗಳಲ್ಲಿ ಬರದ ನಾಡು ಚಿಕ್ಕಬಳ್ಳಾಪುರದ ಚಿತ್ರಣವೇ ಬದಲಾಗಿದೆ. ಮಳೆಗಾಲದಂತೂ ಮಲೆನಾಡು ರೀತಿ ಪರಿವರ್ತನೆಯಾಗುತ್ತಿದೆ. ಮಳೆಯಿಂದಾಗಿ ಬೆಳೆಗಳೂ ಕೈಹಿಡಿಯುತ್ತಿದ್ದು, ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಆದರೆ ಅನಾವೃಷ್ಟಿಯ ಅವಕೃಪೆಗೆ ತುತ್ತಾಗುತ್ತಿದ್ದ ನಾಡು ಇದೀಗ ಅತೀವೃಷ್ಟಿಯಿಂದ ಬಳಲುವಂತಾಗಿದೆ. ವರುಣನ ಕೃಪೆ ಹೆಚ್ಚಾಗಿಯೇ ಆಗುತ್ತಿದೆ.
ಈ ಬಾರಿಯೂ ಮಳೆ ವಿಪರೀತವಾಗಿದೆ. ಎರಡು ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಗೆ, ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ದ ಕೆರೆಯೊಂದು ತುಂಬಿ ಕೋಡಿ ಹರಿದಿದೆ. ಇದ್ರಿಂದ ಕೋಡಿ ನೀರು ಅಕ್ಕ-ಪಕ್ಕದ ರೈತ ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟವಾದ್ರೆ… ಇತ್ತ ಬತ್ತಿದ್ದ ಹೋಗಿದ್ದ ಹಳ್ಳಗಳಲ್ಲಿ ನೀರು ಉಕ್ಕಿ ಬಂದು ರಸ್ತೆಗಳು ಜಲಾವೃತವಾಗಿವೆ, ಇದ್ರಿಂದ ಜಲಾವೃತವಾದ ರಸ್ತೆಯಲ್ಲಿ ಟ್ಯ್ರಾಕ್ಟರ್ ಹಾಗೂ ಬೈಕ್ ಗಳು ಬಿದ್ದು ಅವಾಂತರವಾಗಿದೆ. ಅಷ್ಟಕ್ಕೂ ಅದೇಲ್ಲಿ ಅಂತೀರಾ ಈ ವರದಿ ಓದಿ!!
ಮೊಣಕಾಲುದ್ದ ಹರಿಯುವ ನೀರಿನಲ್ಲಿ ಟ್ಯ್ರಾಕ್ಟರ್ ಹಾಗೂ ಬೈಕ್ ಚಾಲನೆ ಮಾಡಲು ಹೋಗಿ, ಹಳ್ಳದ ಪಾಲಾಗಿರುವ ದೃಶ್ಯ ನೋಡ್ತಿರೋದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮೇಳ್ಯಾ ಹಾಗೂ ದಿನ್ನೆಹುಣಸೇನಹಳ್ಳಿ ಗ್ರಾಮದ ಬಳಿ. ಹೌದು! ಕಳೆದ ಎರಡು ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಮೇಳ್ಯಾ ಕೆರೆ ತುಂಬಿ ಕೋಡಿ ರಭಸವಾಗಿ ಹರಿಯುತ್ತಿದೆ.
ಇದ್ರಿಂದ ಕೋಡಿ ನೀರು ಹಳ್ಳದ ಮೂಲಕ ಒಂದು ಕೆರೆಯಿಂದ ಇನ್ನೊಂದು ಕೆರೆಗೆ ಹರಿಯುತ್ತಿದೆ, ಮಧ್ಯೆ ಮೇಳ್ಯಾ ಹಾಗೂ ದಿನ್ನೆಹುಣಸೇನಹಳ್ಳಿ ಗ್ರಾಮದ ಬಳಿ ರಸ್ತೆಯ ಮೇಲೆ ಎರಡು ಅಡಿ ನೀರು ಹರಿಯುವುದರ ಮೂಲಕ ರಸ್ತೆ ಜಲಾವೃತವಾಗಿದೆ. ಆದ್ರೂ ಟ್ಯ್ರಾಕ್ಟರ್ ಚಾಲಕನೊರ್ವ ಹಾಗೂ ಬೈಕ್ ಸವಾರನೊರ್ವ… ಹರಿಯುವ ನೀರಿನಲ್ಲಿ ದುಸ್ಸಾಹಸ ಮಾಡಲು ಹೋಗಿ ವಾಹನಗಳ ಸಮೇತ ಇಬ್ಬರೂ ಹಳ್ಳಕ್ಕೆ ಬಿದ್ದಿದ್ದಾರೆ, ಅದೃಷ್ಟವಶಾತ್ ಇಬ್ಬರೂ ಬಚಾವ್ ಆಗಿದ್ದು, ವಾಹನಗಳು ನೀರಿನಲ್ಲಿ ಮುಳುಗಿವೆ. ನಂತರ ಕ್ರೇನ್ ಮೂಲಕ ಹರಸಾಹಸ ಪಟ್ಟು ವಾಹನಗಳನ್ನು ಮೇಲೆ ಎತ್ತಲಾಯಿತು.
ಮೇಳ್ಯಾ ಕೆರೆಯ ಕೋಡಿ ನೀರು ರಭಸವಾಗಿ ಹರಿಯುತ್ತಿದ್ದು… ಕಾಲುವೆಯ ಅಕ್ಕ ಪಕ್ಕ ಇರುವ ರೈತರ ಅಡಿಕೆ ಬಾಳೆ ಜೋಳದ ತೋಟಗಳಿಗೆ ನೀರು ನುಗ್ಗಿದ್ದು ಅಪಾರ ಪ್ರಮಾಣದ ಬೆಳೆ ನಷ್ಟವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೇಳ್ಯಾ ಕೆರೆಯ ಕೋಡಿ ಕಳೆದ ವರ್ಷವೆ ಒಡೆದಿತ್ತು. ಅದನ್ನು ಸೂಕ್ತ ರೀತಿಯಲ್ಲಿ ರಿಪೇರಿ ಮಾಡದ ಕಾರಣ ಈಗ ಕೆರೆಯ ಬಹುತೇಕ ನೀರು ಕೋಡಿ ಮೂಲಕ ಆಚೆ ಹೋಗಿ ಅವಾಂತರ ಆಗಿದೆ ಅದಕ್ಕೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಕಾರಣ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ರು.
ಒಟ್ನಲ್ಲಿ ಮಳೆ ಬೆಳೆ ನೀರು ಇಲ್ಲದೆ ಕಂಗಲಾಗಿದ್ದ ರೈತರು, ಈಗ ಮಳೆ ಯಾಕಾದ್ರೂ ಬಂತು ಅಂತ ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಸುರಿದ ಧಾರಾಕರ ಮಳೆಗೆ ಕೆರೆ ಕುಂಟೆ ನದಿ ನಾಲೆಗಳಲ್ಲಿ ನೀರು ಉಕ್ಕಿ ಬಂದಿದ್ದು, ರಸ್ತೆಗಳು ಜಮೀನುಗಳಲ್ಲಿ ನೋಡಿದ ಕಡೆಯೆಲ್ಲಾ ನೀರಿನದೆ ಕಾರುಬಾರು ಆಗಿದೆ.
– ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ