Chit fraud: ಮತ್ತದೇ ಚೀಟಿ ಹೆಸರಲ್ಲಿ ಕೋಟ್ಯಾಂತರ ದೋಖಾ! ಅಮಾಯಕ ಮಹಿಳೆಯರಿಗೆ ವಂಚಿಸಿ ಪರಾರಿಯಾದ ಪೂನಂ?
chikkaballapur: ನಿಮ್ಮ ಹೆಸರಿನಲ್ಲಿ ಲೋನ್ ಮಾಡಿಸಿ ಹಣ ನಾನು ಇಟ್ಕೊಂತೀನಿ.. ಅದಕ್ಕೆ 15 %, 20 % ಪ್ರತಿ ತಿಂಗಳು ಬಡ್ಡಿ ಕೊಡ್ತೀನೆಂದು ನಂಬಿಸಿ ನೂರಾರು ಮಹಿಳೆಯರಿಗೆ ಪೂನಂ ಎಂಬ ಮಹಿಳೆ ವಂಚನೆ ಮಾಡಿದ್ದಾಳೆ.
ಸ್ವಸಹಾಯ ಸಂಘಗಳಲ್ಲಿ ಬರುವ ಹಣ ಹಾಗೂ ಚೀಟಿಗಳಲ್ಲಿ ಬರುವ ಹಣಕ್ಕೆ ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ, ನೂರಾರು ಮಹಿಳೆಯರಿಂದ ಕೋಟ್ಯಾಂತರ ರೂಪಾಯಿ ಹಣ ಪಡೆದು ಉತ್ತರ ಪ್ರದೇಶ ಮೂಲದ ಮಹಿಳೆಯೋರ್ವಳು ನಾಪತ್ತೆ ಪ್ರಕರಣ ಕೇಳಿ ಬಂದಿದೆ. ಇದರಿಂದ ಪೈಸೆ ಪೈಸೆ ಕೂಡಿಟ್ಟು ಹಣ ಕಟ್ಟಿದವರು ಸಂಕಷ್ಟಕ್ಕೆ ಸಿಲುಕಿದ್ದು, ನ್ಯಾಯಕ್ಕಾಗಿ ಪರದಾಡುತ್ತಿದ್ದಾರೆ. ಈ ಕುರಿತು ಒಂದು ವರದಿ..
ಕೂಡಿಟ್ಟ ಹಣ ಯಾರದೋ ಪಾಲಾಯ್ತಲ್ಲ.. ನಿನ್ ಮಾತು ಕೇಳಿ ನಾನು ಕಟ್ಟಿದ್ದೆ.. ನನ್ನ ಮಾತು ಕೇಳಿ ನೀನು ಕಟ್ಟಿದೆ. ನಿನ್ನಂದಲೇ ಆಗಿದ್ದು, ಅವಳಿಂದಲೇ ಆಗಿದ್ದು ಎಂದು ಪರಸ್ಪರ ವಾಗ್ವಾದ ಮಾಡಿಕೊಳ್ಳುತ್ತಾ ನ್ಯಾಯಕ್ಕಾಗಿ ಮೊರೆ ಇಡುತ್ತಿರುವುದು ಚಿಕ್ಕಬಳ್ಳಾಪುರದಲ್ಲಿ. ಚಿಕ್ಕಬಳ್ಳಾಪುರ ನಗರದ, ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ವಂಕೆ ಬಡಾವಣೆಯ ನಿವಾಸಿಗಳು ಅದರಲ್ಲೂ ಬಹುತೇಕ ಬಡ ಮಹಿಳೆಯರು ಕಷ್ಟಕ್ಕೆ ಒಂದಿಷ್ಟು ಹಣವಿರಲಿ ಎಂದು ಸ್ವಸಹಾಯ ಸಂಘಗಳನ್ನು ಮಾಡಿಕೊಂಡು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮೂಲಕ ಬ್ಯಾಂಕ್‌ಗಳಲ್ಲಿ ಸಾಲ ಪಡೆದು, ಸ್ವಸಹಾಯ ಸಂಘಗಳಲ್ಲಿ ಟರ್ನ್ಓವರ್ ಮಾಡುತ್ತಿದ್ದರು ಹಾಗೂ ಚೀಟಿ ನಡೆಸುತ್ತಾ, ತಲಾ ಇಷ್ಟಿಷ್ಟು ಎಂದು ಚೀಟಿ ಹಣ ಕಟ್ಟುತ್ತಿದ್ದರು.
ಆದರೆ ಇವರ ನಂಬಿಕೆ, ವಿಶ್ವಾಸ ಗಳಿಸಿದ ಉತ್ತರಪ್ರದೇಶ ಮೂಲದ ಪೂನಂ ಎಂಬ ಮಹಿಳೆ ಹೆಚ್ಚಿನ ಬಡ್ಡಿ ಆಸೆ ತೋರಿಸಿ, ಚೀಟಿಗಳಲ್ಲಿ ಬರುವ ಹಣ ಹಾಗೂ ಸ್ವಸಹಾಯ ಸಂಘಗಳಲ್ಲಿ ಬರುವ ಹಣವನ್ನು ತಾನೋಬ್ಬಳೇ ಪಡೆದಿದ್ದಳು. ಕೊನೆಗೆ ಪಡೆದ ಹಣ ಕೊಡದೇ ಈಗ ಊರು ಬಿಟ್ಟು ಎಸ್ಕೇಪ್ ಆಗಿದ್ದಾಳೆ. ಇದರಿಂದ ಕೂಡಿಟ್ಟ ಹಣ ಓಯ್ತಲ್ಲಾ ಎಂದು ಮಹಿಳೆಯರು ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ.
ಇನ್ನ ಪೂನಂಗೆ ಹಣ ನೀಡುವ ಮಹಿಳೆಯರು ಬಹುತೇಕ ಬಡವರಾಗಿದ್ದು, ಟೈಲರಿಂಗ್, ಹೋಟೆಲ್, ಮನೆಗೆಲಸ, ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದಾರೆ. ಪ್ರತಿ ತಿಂಗಳು ಹೆಚ್ಚಿನ ಬಡ್ಡಿ ಕೊಡ್ತೀನಿ ಎಂದು ನಂಬಿಸಿ ಪೂನಂ ಮಹಿಳೆಯರ ದಾಖಲೆಗಳನ್ನು ಬಳಸಿ, ಮಹಿಳೆಯರ ಹೆಸರಿನಲ್ಲಿ ವಿವಿಧ ಬ್ಯಾಂಕ್ ಹಾಗೂ ಮೈಕ್ರೋ ಫೈನಾನ್ಸ್ಗಳಲ್ಲಿ ಸಾಲ ಕೊಡಿಸಿ ತಾನೇ ಬಳಸಿಕೊಂಡಿದ್ದಾಳೆ.
ಆದರೆ ಈಗ ಬ್ಯಾಂಕ್‌ನವರು ಪಾವತಿ ಮಾಡಲು ಹೇಳುತ್ತಿದ್ದಾರೆ. ಆದರೆ ಮಹಿಳೆಯರ ಬಳಿ ಹಣವಿಲ್ಲ. ಹೀಗೆ ಶೋಭ ಎನ್ನುವ ಮಹಿಳೆಗೆ 8 ಲಕ್ಷ ಚೀಟಿ ಹಣ, 60 ಸಾವಿರ ರೂಪಾಯಿ ಒಡವೆ, ಗೌರಮ್ಮ ಎನ್ನುವವರಿಗೆ 8 ಲಕ್ಷ, ನಾಗಮ್ಮ ಎನ್ನುವವರಿಗೆ 60 ಸಾವಿರ, ಸುಧಾರಾಣಿ ಎನ್ನುವವರಿಗೆ 2 ಲಕ್ಷ, ಲೀಲಾವತಿಯವರಿಗೆ 7 ಲಕ್ಷ, ಆಶಾ ಎನ್ನುವವರಿಗೆ 1.50 ಲಕ್ಷ, ರಿಹಾನಬಾನು ಎನ್ನುವವರಿಗೆ 3 ಲಕ್ಷ, ಅಂಗನವಾಡಿ ಮಂಜಮ್ಮಗೆ 1 ಲಕ್ಷ, ಶ್ಯಾಮಲಾಗೆ 20 ಲಕ್ಷ ಸೇರಿದಂತೆ ಹಲವಾರು ಮಹಿಳೆಯರ ಬಳಿ ಹಣ ಪಡೆದು ಪೂನಂ ಎಸ್ಕೇಪ್ ಆಗಿದ್ದಾಳೆ.
ನಿಮ್ಮ ಹೆಸರಿನಲ್ಲಿ ಲೋನ್ ಮಾಡಿಸಿ ಹಣ ನಾನು ಇಟ್ಕೊಂತೀನಿ.. ಅದಕ್ಕೆ 15 %, 20 % ಪ್ರತಿ ತಿಂಗಳು ಬಡ್ಡಿ ಕೊಡ್ತೀನೆಂದು ನಂಬಿಸಿ ನೂರಾರು ಮಹಿಳೆಯರಿಗೆ ಪೂನಂ ಎಂಬ ಮಹಿಳೆ ವಂಚನೆ ಮಾಡಿದ್ದಾಳೆ. ತಮಗೆ ನ್ಯಾಯ ಕೊಡಿಸುವಂತೆ ಮಹಿಳೆಯರು ಕಳೆದ 15 ದಿನಗಳಿಂದ ಚಿಕ್ಕಬಳ್ಳಾಪುರ ನಗರಠಾಣೆಗೆ ಅಲೆದಾಡಿ ಲಿಖಿತ ದೂರು ನೀಡಿದರೂ ಸಹಾ ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ನೊಂದ ಮಹಿಳೆಯರು ವಂಚನೆ ಮಾಡಿದ ಮಹಿಳೆ ಸೇರಿದಂತೆ ಪೊಲೀಸರಿಗೆ ಶಾಪ ಹಾಕುತ್ತಿದ್ದಾರೆ -ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ