ರಾಜ್ಯದ ಸರ್ಕಾರಿ ಬಸ್ ಗಳಲ್ಲಿ ಶಕ್ತಿಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದೇ ತಡ, ಖಾಸಗಿ ಬಸ್ ಮಾಲಿಕರು ನಷ್ಟ ಅನುಭವಿಸಿದ್ದರು, ಇನ್ನು ಈಗ ಆಷಾಢ ಮಾಸದ ಪರಿಣಾಮ ಮದುವೆ, ಮುಂಜಿ ಸೇರಿದಂತೆ ಯಾವುದೇ ಶುಭಕಾರ್ಯಕ್ರಮಗಳು ನಡೆಯುತ್ತಿಲ್ಲ. ಇದ್ರಿಂದ ಸಾರ್ವಜನಿಕರು ಬಸ್ ಗಳಲ್ಲಿ ಸಂಚರಿಸುತ್ತಿಲ್ಲ. ಖಾಸಗಿ ಬಸ್ ಮಾಲಿಕರು ತಮ್ಮ ಬಸ್ ಗಳಿಗೆ ಪ್ರಯಾಣಿಕರು ಬಾರದೆ ಕಂಗಾಲಾಗಿದ್ದಾರೆ. ಈ ಕುರಿತು ಒಂದು ವರದಿ..
ಹೀಗೆ ಪ್ರಯಾಣಿಕರಿಲ್ಲದೆ ಖಾಲಿ ಬಸ್ ಗಳು ಸಂಚರಿಸುತ್ತಿರೋದು ಚಿಕ್ಕಬಳ್ಳಾಪುರ -ಬೆಂಗಳೂರು ಮಾರ್ಗದಲ್ಲಿ ಕಂಡುಬಂದಿದೆ. ಚಿಕ್ಕಬಳ್ಳಾಪುರ, ದೇವನಹಳ್ಳಿ, ವಿಜಯಪುರ ಸೇರಿದಂತೆ ಬೆಂಗಳೂರಿನ ಖಾಸಗಿ ಬಸ್ ಮಾಲಿಕರಿಗೆ ಚಿಕ್ಕಬಳ್ಳಾಪುರ -ಬೆಂಗಳೂರು ಬಸ್ ಮಾರ್ಗ ಚಿನ್ನದ ಮೊಟ್ಟೆಯಿದ್ದಂಗೆ. ಶಕ್ತಿಯೋಜನೆ ಜಾರಿಯಾದಾಗಿನಿಂದ ಬಸ್ ಗಳಲ್ಲಿ ಓವರ್ ಲೋಡ್ ಬದಲು, ಅಗತ್ಯ ಪ್ಯಾಸೆಂಜರ್ ಗಳಿಗೇನೂ ಕೊರತೆ ಇರಲಿಲ್ಲ. ಆದ್ರೆ ಈಗ ಆಷಾಢ ಮಾಸದ ಪರಿಣಾಮ, ಮದುವೆ ಮುಂಜಿ ಸೆರಿದಂತೆ ಯಾವುದೇ ಶುಭಕಾರ್ಯಗಳು ನಡೆಯುತ್ತಿಲ್ಲ. ಇದ್ರಿಂದ ಸಾರ್ವಜನಿಕರು ಬಸ್ ಗಳಲ್ಲಿ ಸಂಚರಿಸುತ್ತಿಲ್ಲ, ಇದ್ರಿಂದ ಬಸ್ ಮಾಲಿಕರು ನಷ್ಟ ಅನುಭವಿಸುವಂತಾಗಿದೆ ಎನ್ನುತ್ತಾರೆ ಚಿಕ್ಕಬಳ್ಳಾಪುರದ ಖಾಸಗಿ ಬಸ್ ಮಾಲಿಕರಾದ ರಮೇಶ್ ಮತ್ತು ಕಿರಣ್ ಕುಮಾರ್.
ಇದನ್ನೂ ಓದಿ: ಡೆಂಗ್ಯೂ ಪಾಸಿಟಿವ್ ಬಂದವರ ಮೇಲೆ 14 ದಿನ ನಿಗಾ ವಹಿಸಿ: ದಿನೇಶ್ ಗುಂಡೂರಾವ್
ಇನ್ನು ಇದು ಖಾಸಗಿ ಬಸ್ ಮಾಲಿಕರ ಗೋಳಾಟ ಆದ್ರೆ ಮತ್ತೊಂದೆಡೆ ಕೆ.ಎಸ್.ಆರ್.ಟಿ.ಸಿ. ಬಸ್ ಗಳಲ್ಲಿ ಸಹ ಪ್ರಯಾಣಿಕರ ಕೊರತೆಯುಂಟಾಗಿದೆ. ಚಿಕ್ಕಬಳ್ಳಾಪುರ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಹೋಗುವ ಮತ್ತು ಬರುವ ಬಸ್ ಗಳನ್ನ ಗಮನಿಸಿದ್ರೆ, ಸಾಮಾನ್ಯ ದಿನಗಳಿಗಿಂತ ಕಡಿಮೆ ಪ್ರಯಾಣಿಕರು ಸಂಚರಿಸುತ್ತಿರೋದು ಕಂಡುಬಂದಿದೆ ಎನ್ನುತ್ತಾರೆ ನಾಗೇಶ್, ಸಂಚಾರಿ ನಿಯಂತ್ರಕ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಚಿಕ್ಕಬಳ್ಳಾಪುರ
ಒಟ್ನಲ್ಲಿ, ಆಷಾಢ ಮಾಸ ವ್ಯಾಪಾರಸ್ಥರು, ಕಲ್ಯಾಣ ಮಂಟಪಗಳು, ಹೂ ಬೆಳೆಗಾರರು, ಬಸ್ ಮಾಲಿಕರು ಸೇರಿದಂತೆ ಹಲವಾರು ಉದ್ಯಮಗಳಿಗೆ ಪೆಟ್ಟು ನೀಡಿದೆ. ಅದ್ಯಾವಾಗ ಆಷಾಢ ಮಾಸ ಮುಗಿಯುತ್ತೋ ಅಂತ ಕಾಯುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:43 pm, Sat, 27 July 24