ಚಿಕ್ಕಬಳ್ಳಾಪುರ: ಸಂಬಂಧಿಕರ ಮನೆಯಲ್ಲಿ ಚಿನ್ನಾಭರಣ ಕದ್ದು ಸ್ಮಶಾನದಲ್ಲಿ ಬಚ್ಚಿಟ್ಟ ಭೂಪ ಅರೆಸ್ಟ್
ಯಾರನ್ನೂ ನಂಬದಂತಹ ಕಾಲದಲ್ಲಿದ್ದೇವೆ ಎಂಬುದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ಸಂಬಂಧಿಕರ ಮನೆಯಲ್ಲಿಯೇ ಬರೋಬ್ಬರಿ ಮೂರು ಲಕ್ಷ ರೂಪಾಯಿಯ ಚಿನ್ನಾಭರಣ ಕಳ್ಳತನ ಮಾಡಿ, ಅದನ್ನು ಸ್ಮಶಾನದಲ್ಲಿ ಬಚ್ಚಿಟ್ಟ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ. ಕಳ್ಳ ಚಾಫೆ ಕೆಳಗಡೆ ತೂರಿದರೆ, ಪೊಲೀಸರು ರಂಗೋಲಿ ಕೆಳಗೆ ತೂರಿ ಆರೋಪಿಯನ್ನು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ, ಜು.26: ಸಂಬಂಧಿಕರ ಮನೆಯಲ್ಲಿದ್ದ ವೃದ್ದೆಯ ಚಿನ್ನಾಭರಣಗಳ ಮೇಲೆ ಕಣ್ಣು ಹಾಕಿದ ಆಸಾಮಿ, ವೃದ್ದೆಯ ಮನೆಗೆ ನುಗ್ಗಿ 3 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ಕದ್ದ ಘಟನೆ ಚಿಕ್ಕಬಳ್ಳಾಪುರ(Chikkaballapur) ನಗರದ ನಂದಿ ರಸ್ತೆಯ ವಾರ್ಡ್ ನಂ.16ರಲ್ಲಿ ನಡೆದಿದೆ. ನಂತರ ಅದನ್ನು ಸ್ಮಶಾನದಲ್ಲಿ ಬಚ್ಚಿಟ್ಟು ಏನು ಗೊತ್ತಿಲ್ಲದಂತೆ ಮತ್ತೆ ಮನೆಗೆ ಹೋಗಿ ವೃದ್ದೆಯನ್ನು ಮಾತನಾಡಿಸಿಕೊಂಡು ಬಂದಿದ್ದಾನೆ. ಆರೋಪಿ ಚಾಪೆ ಕೆಳಗಡೆ ದೂರಿದರೆ ಪೊಲೀಸರು ರಂಗೋಲಿ ಕೆಳಗೆ ದೂರಿ ಆರೋಪಿಯನ್ನು ಬಂಧಿಸಿ, ಆತನಿಂದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ವೃದ್ದೆ ರಾಧಮ್ಮ ಕುಟುಂಬ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಚೆನ್ನಾಗಿದೆ. ರಾಧಮ್ಮ ಕತ್ತಿನಲ್ಲಿ ಎರಡೆಲೆ ಬಂಗಾರದ ಮಾಂಗಲ್ಯ ಸರ ಇತ್ತು. ರಾಧಮ್ಮನ ಮನೆಗೆ ನುಗ್ಗಿದ ಅದೊಬ್ಬ ಆಸಾಮಿ, ಆಕೆಯ ಬಾಯಿಗೆ ಖರ್ಚಿಫ್ ಇಟ್ಟು, 3 ಲಕ್ಷ ರೂ. ಮೌಲ್ಯದ ಮಾಂಗಲ್ಯದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಇದರಿಂದ ರಾಧಮ್ಮಳ ಮಗ ಅರುಣ್‌ಕುಮಾರ್ ಚಿಕ್ಕಬಳ್ಳಾಪುರ ನಗರಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.
ಇದನ್ನೂ ಓದಿ:ಮಡಿಕೇರಿಯಲ್ಲಿ ವೃದ್ಧೆಯರನ್ನು ಕಟ್ಟಿ ಹಾಕಿ ಮನೆ ದರೋಡೆ! 2.5 ಲಕ್ಷ ರೂ. ನಗದು, 83 ಗ್ರಾಂ ಚಿನ್ನಾಭರಣ ಕದ್ದು ಪರಾರಿ
ಇನ್ನು ದೂರು ದಾಖಲು ಮಾಡಿಕೊಂಡು ತನಿಖೆ ನಡೆಸಿದ ಚಿಕ್ಕಬಳ್ಳಾಪುರ ನಗರಠಾಣೆ ಪೊಲೀಸರು, ಮೊಬೈಲ್ ಹಾಗೂ ಸಿಸಿ ಟಿವಿ ಜಾಡು ಹಿಡಿದು ಶಿಡ್ಲಘಟ್ಟ ನಗರದ ನಿವಾಸಿ ವರುಣ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ಕಳ್ಳತನ ಪ್ರಕರಣ ಬಯಲಾಗಿದೆ. ಇನ್ನು ವರುಣ್ ವೃದ್ದೆ ರಾಧಮ್ಮಳ ಸಂಬಂಧಿಯಾಗಿದ್ದು, 2 ಬಾರಿ ಅವರ ಮನೆಗೆ ಬಂದು ಹೋಗಿದ್ದ. ಆಗ ರಾಧಮ್ಮಳ ಕತ್ತಲ್ಲಿದ್ದ ಸರದ ಮೇಲೆ ಕಣ್ಣು ಹಾಕಿದ್ದ. ಅದರಂತೆ ಸ್ಕೆಚ್ ಹಾಕಿ ಮೊನ್ನೆ ಜುಲೈ.24 ರಂದು ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ನಂತರ ಅದನ್ನು ಸ್ಮಶಾನವೊಂದರಲ್ಲಿ ಬಚ್ಚಿಟ್ಟು, ಮತ್ತೆ ವೃದ್ದೆ ರಾಧಮ್ಮಳ ಮನೆಗೆ ಹೋಗಿ ಕಷ್ಟಸುಖ ವಿಚಾರಿಸಿಕೊಂಡು ಬಂದಿದ್ದಾನೆ.
ಆರೋಪಿ ಚಾಪೆ ಕೆಳಗಡೆ ತೂರಿದರೆ ಪೊಲೀಸರು ರಂಗೋಲಿ ಕೆಳಗೆ ತೂರಿ ಆರೋಪಿಯನ್ನು ಬಂಧಿಸಿ ಆತನಿಂದ ಚಿನ್ನಾಭರಣವನ್ನು ವಶಕ್ಕೆ ಪಡೆದು, ರಾಧಮ್ಮಳಿಗೆ ಒಪ್ಪಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ