ಮನೆ ಮಂದಿಗೆ ನಕಲಿ ಗನ್, ಮಾರಕಾಸ್ತ್ರ ತೋರಿಸಿ ದರೋಡೆ: ಚಿನ್ನಾಭರಣ ಕದ್ದು 7 ಮುಸುಕುಧಾರಿಗಳ ಗ್ಯಾಂಗ್ ಪರಾರಿ
ಮನೆಗೆ ನುಗ್ಗಿ ಕುಟುಂಬಸ್ಥರಿಗೆ ಮಾರಕಾಸ್ತ್ರ, ಗನ್ ತೋರಿಸಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿ 7 ಮಂದಿ ದುಷ್ಕರ್ಮಿಗಳು ಪರಾರಿಯಾಗಿರುವಂತಹ ಘಟನೆ ಜಿಲ್ಲೆಯ ರಾಜೀವ್ ಗಾಂಧಿ ನಗರದಲ್ಲಿ ತಡರಾತ್ರಿ ನಡೆದಿದೆ.
ಯಾದಗಿರಿ: ಮನೆಗೆ ನುಗ್ಗಿ ಕುಟುಂಬಸ್ಥರಿಗೆ ಮಾರಕಾಸ್ತ್ರ, ಗನ್ ತೋರಿಸಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ (Robbery) ಮಾಡಿ 7 ಮಂದಿ ದುಷ್ಕರ್ಮಿಗಳು ಪರಾರಿಯಾಗಿರುವಂತಹ ಘಟನೆ ಜಿಲ್ಲೆಯ ರಾಜೀವ್ ಗಾಂಧಿ ನಗರದಲ್ಲಿ ತಡರಾತ್ರಿ ನಡೆದಿದೆ. ದೀಪಕ್ ಕುಮಾರ್ ಎಂಬುವರ ಮನೆಯಲ್ಲಿದ್ದ 4 ತೊಲೆ ಚಿನ್ನಾಭರಣ, 3 ತೊಲೆ ಬೆಳ್ಳಿ, 5 ಸಾವಿರ ಹಣ ಕಳುವಾಗಿದೆ. ತಡರಾತ್ರಿಯಲ್ಲಿ ಮನೆಗೆ ನುಗ್ಗಿದ್ದ 7 ಜನ ಮುಸುಕುಧಾರಿಗಳು ಮನೆ ಮಂದಿಗೆ ನಕಲಿ ಗನ್, ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆ ಮಾಡಿದ್ದಾರೆ. ದರೋಡೆಕೋರರ ಬಳಿ ಇದ್ದ ಮಾರಕಾಸ್ತ್ರ ಕಸಿಯಲು ಸಹೋದರರಾದ ಆನಂದ್, ಮನೋಜ್ ಕುಮಾರ್ ಯತ್ನಿಸಿದ್ದಾರೆ. ಈ ವೇಳೆ ದರೋಡೆಕೋರರು ಕುಟುಂಬಸ್ಥರ ಕಣ್ಣಿಗೆ ಖಾರದಪುಡಿ ಎರಚಿದಿದ್ದಾರೆ. ಕಳ್ಳರಿಂದ ತಪ್ಪಿಸಿಕೊಂಡು ಹೊರ ಬಂದ ಮನೋಜ್ ಕುಮಾರ್, ಚೀರಾಡಿ ಕಳ್ಳರ ಬಗ್ಗೆ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಚೀರಾಟ ಕೇಳುತ್ತಿದಂತೆ ಮನೆಯಿಂದ 7 ಮುಸುಕುಧಾರಿಗಳ ತಂಡ ಕಾಲ್ಕಿತ್ತಿದೆ. ಸದ್ಯ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇನ್ನು ದರೋಡೆಕೋರರ ಗ್ಯಾಂಗ್ ಮನೆಗೆ ಎಂಟ್ರಿ ಕೊಟ್ಟರು ದೃಶ್ಯಗಳು ಪಕ್ಕದ ಬಿಲ್ಡಿಂಗ್ನಲ್ಲಿದ್ದ ಸಿಟಿವಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಏಳು ಮಂದಿಯ ಗ್ಯಾಂಗ್ ಪಕ್ಕ ದರೋಡೆಕೋರರಾಗಿದ್ದು, ಮುಖಕ್ಕೆ ಕಪ್ಪು ಬಣ್ಣದ ಮುಸುಕು ಧರಿಸಿಕೊಂಡು ಬಂದು ದರೋಡೆ ಮಾಡಿದ್ದಾರೆ. ದರೋಡೆಯಾಗಿರುವ ಮನೆ ಹೈದ್ರಾಬಾದ್ ಮುಖ್ಯ ರಸ್ತೆಯ ಪಕ್ಕದಲ್ಲಿದ್ದು, ಹೀಗಾಗಿ ತೆಲಂಗಾಣದಿಂದ ಬಂದಿರುವ ಗ್ಯಾಂಗ್ ದರೋಡೆ ಮಾಡಿರುವ ಶಂಕೆಯಿದೆ. ಜೊತೆಗೆ ಮನೆಯ ಮಂದಿಯವರೊಂದಿಗೆ ಹಿಂದಿಯಲ್ಲಿ ಮಾತಾಡುತ್ತಿದ್ದರು ಎನ್ನಲಾಗಿದೆ. ಇದೆ ಕಾರಣಕ್ಕೆ ಯಾದಗಿರಿ ಸಿಪಿಐ ನೇತೃತ್ವದಲ್ಲಿ ನಾಲ್ಕು ತಂಡಗಳನ್ನ ರಚನೆ ಮಾಡಿ ಸುತ್ತಮುತ್ತಲಿನ ಜಿಲ್ಲೆಗೆ ಕಳುಹಿಸಿ ಗ್ಯಾಂಗ್ನ್ನು ಸೆರೆಹಿಡಿಯಲು ಪೊಲೀಸರು ಬಲೆ ಬಿಸಿದ್ದಾರೆ.
ಇದನ್ನೂ ಓದಿ: Karwar: ಪತ್ನಿಯನ್ನ ಕೊಂದು ಬ್ಯಾರೆಲ್ನಲ್ಲಿ ಬಚ್ಚಿಟ್ಟ ಪತಿರಾಯ, ಮನೆ ಖಾಲಿ ಮಾಡುವಾಗ ಭಯಾನಕ ಘಟನೆ ಬಯಲಿಗೆ
ಶಿವರಾಮ್ ಹೆಬ್ಬಾರ ಪುತ್ರನ ಒಡೆತನದ ಸಕ್ಕರೆ ಕಾರ್ಖಾನೆಯಲ್ಲಿ ದುರಂತ
ಹಾವೇರಿ: ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ ಪುತ್ರ ವಿವೇಕ ಹೆಬ್ಬಾರ್ ಒಡೆತನದ ಸಕ್ಕರೆ ಕಾರ್ಖಾನೆಯಲ್ಲಿ ಬೆಲ್ಟ್ಗೆ ಸಿಲುಕಿ 19 ವರ್ಷದ ಯುವ ಕಾರ್ಮಿಕ ದಾರುಣ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕೋಣನಕೇರಿಯಲ್ಲಿರುವ ವಿಐಪಿಎನ್ ಡಿಸ್ಟಲರಿಸ್ ಕಾರ್ಖಾನೆಯಲ್ಲಿ ನಡೆದಿದೆ. ನವೀನ ಬಸಪ್ಪ ಚಲವಾದಿ(19) ಮೃತ ಕಾರ್ಮಿಕ. ಕೆಲಸ ಮಾಡುತ್ತಿದ್ದ ವೇಳೆ ನಿನ್ನೆ ಶನಿವಾರ ಸಂಜೆ ಕಬ್ಬಿನ ಪುಡಿ ತುಂಬುತ್ತಿದ್ದಾಗ ದುರ್ಘಟನೆ ನಡೆದಿದೆ. ಯಾವುದೇ ಸುರಕ್ಷಾ ಕ್ರಮ ಅಳವಡಿಸದ ಹಿನ್ನೆಲೆ ಘಟನೆ ಸಂಭವಿಸಿದೆ. ಕಾರ್ಖಾನೆ ಮಾಲೀಕ ಸೇರಿ ಆರು ಜನರ ವಿರುದ್ಧ ಬಂಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿಜಯಪುರ: ಗುಡಿಸಲಿಗೆ ಆಕಸ್ಮಿಕ ಬೆಂಕಿ, ಮಲಗಿದ್ದಲ್ಲೇ ಸುಟ್ಟು ಕರಕಲಾದ ವೃದ್ಧ ದಂಪತಿ
ಜ್ವರದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಸಾವು
ಬೆಂಗಳೂರು: ಜ್ವರದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಸರ್ಜರಿ ವೇಳೆ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ. ವಿಜೇತ್(25) ಮೃತ ಯುವಕ. ರಾಮಮೂರ್ತಿ ನಗರದ ಕೋಶಿಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಯುವಕನ ಸಾವಿಗೆ ಕಾರಣವೆಂದು ಆರೋಪ ಮಾಡಲಾಗುತ್ತಿದೆ. 2 ದಿನದ ಹಿಂದೆ ಜ್ವರದಿಂದ ಆಸ್ಪತ್ರೆಯಲ್ಲಿ ವಿಜೇತ್ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇಂಜೆಕ್ಷನ್ ಪಡೆದು ಮನೆಗೆ ಬಂದಿದ್ದ ವಿಜೇತ್ಗೆ ಸೆಪ್ಟಿಕ್ ಆಗಿತ್ತು. ಮತ್ತೆ ಆಸ್ಪತ್ರೆಗೆ ಹೋದಾಗ ಸರ್ಜರಿ ಮಾಡಬೇಕೆಂದಿದ್ದ ವೈದ್ಯರು, ಸರ್ಜರಿ ವೇಳೆ ರಕ್ತಸ್ರಾವ ಆಗಿ ಮಗ ಮೃತಪಟ್ಟಿದ್ದಾನೆ. ವೈದ್ಯರ ವಿರುದ್ಧ ಮೃತ ಯುವಕನ ಕುಟುಂಬ ಆರೋಪ ಮಾಡಿದೆ. ಕುಟುಂಬಸ್ಥರ ಆರೋಪ ನಿರಾಕರಿಸಿರುವ ಖಾಸಗಿ ಆಸ್ಪತ್ರೆ ವೈದ್ಯರು, ಹೃದಯಾಘಾತದಿಂದ ಯುವಕ ಮೃತಪಟ್ಟಿದ್ದಾನೆ ಎಂದಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:04 pm, Sun, 26 February 23