ಪ್ರೇಮಗಿರಿ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ನಂದಿ ಗಿರಿಧಾಮದಲ್ಲಿ ಇಂದು ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಪ್ರೇಮಿಗಳು ಕೈ ಕೈ ಹಿಡಿದು ಪ್ರೇಮಿಗಳ ದಿನಾಚರಣೆ (Valentines Day) ಮಾಡುತ್ತಿದ್ರೆ… ಇತ್ತ 20 ವರ್ಷದ ಯುವಕನೊರ್ವ ಅದೇ ನಂದಿ ಗಿರಿಧಾಮದ (Nandi hills) ಟಿಪ್ಪು ಡ್ರಾಪ್ ನಲ್ಲಿ ಬಿದ್ದು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅಂಬರಹಳ್ಳಿ ನಿವಾಸಿಯಾಗಿರುವ 20 ವರ್ಷದ ಅರುಣ್, ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಫಾರ್ಮಾಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದು, ಸ್ನೇಹಿತರ ಜೊತೆ ಪಿ.ಜಿ.ಯಲ್ಲಿ ಉಳಿದುಕೊಂಡಿದ್ದ. ಈಗ ಅರುಣ್, ಟಿಪ್ಪು ಡ್ರಾಪ್ ನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಳೆದ ಶನಿವಾರ ತನ್ನ ಸ್ನೇಹಿತನ ಕೆಎ 11 ಇಎಸ್ 9027 ನಂಬರಿನ ಡ್ಯೂಕ್ ಬೈಕ್ ನಲ್ಲಿ ನಂದಿಬೆಟ್ಟಕ್ಕೆ ಬಂದ ಅರುಣ್… ಪಾರ್ಕಿಂಗ್ ಪ್ಲಾಟ್ ನಲ್ಲಿ ಬೈಕ್ ನಿಲ್ಲಿಸಿ ಪಾರ್ಕಿಂಗ್ ಪ್ಲಾಟ್ ನಲ್ಲಿದ್ದ ಲಾಕ್ ರೂಂ ನಲ್ಲಿ ತನ್ನ ಹೆಲ್ಮೆಟ್ ಇಟ್ಟು ಸೀದಾ ನಂದಿಬೆಟ್ಟದ ಮೇಲ್ಭಾಗಕ್ಕೆ ಹೋಗಿದ್ದಾನೆ. ಆದ್ರೆ ಶನಿವಾರ ಬೆಟ್ಟದ ಮೇಲೆ ಹೋದವನು ವಾಪಸ್ ಬಂದಿಲ್ಲ.
ಶನಿವಾರ, ಭಾನುವಾರ, ಸೋಮವಾರ ಕಾದರೂ ಅರುಣ್ ವಾಪಸ್ ಬಾರದ ಹಿನ್ನೆಲೆ ಅನುಮಾನಗೊಂಡು, ಹೆಲ್ಮೆಟ್ ಲಾಕ್ ರೂಂ ಮಾಲೀಕರು ಪೊಲೀಸರಿಗೆ ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಅರುಣ್ ಮೇಲೆ ಹೋಗಿರೋ ವಿಡಿಯೋ ಸಿಕ್ಕಿದೆ. ಆದ್ರೆ ವಾಪಸ್ ಬಂದಿರೋ ವಿಡಿಯೋ ಸಿಕ್ಕಿಲ್ಲ. ಹೀಗಾಗಿ ಬೆಟ್ಟವೆಲ್ಲಾ ತಡಿಕಾಡಿದಾಗ ಟಿಪ್ಪು ಡ್ರಾಪ್ ಜಾಗದಲ್ಲಿ ಅರುಣ್ ಬ್ಯಾಗ್ ಪತ್ತೆಯಾಗಿದೆ. ನಂತರ ಹುಡುಕಾಡಿದಾಗ ಶವ ಪತ್ತೆಯಾಗಿದೆ.
ಮೃತ ಅರುಣ್ ಬ್ಯಾಗ್ ನಲ್ಲಿ ಪತ್ತೆಯಾಗಿರುವ ಡೆತ್ ನೋಟ್ ನಲ್ಲಿ ನಿಖರ ಕಾರಣ ಬರೆದಿಲ್ಲ. ಆದ್ರೆ ತಾನು ಸಂತೋಷವಾಗಿ ಸಾಯುತ್ತಿದ್ದೇನೆ… ರಾಜಕೀಯ ವ್ಯವಸ್ಥೆ ಸರಿ ಇಲ್ಲ. ನಟ ಉಪೇಂದ್ರ ರ ಪ್ರಜಾಕೀಯ ಪಕ್ಷದ ಸಿದ್ದಾಂತಗಳನ್ನ ಜನ ಬೆಂಬಲಿಸಬೇಕು ಎಂಬ ಅಭಿಲಾಷೆ ಹೊರ ಹಾಕಿದ್ದಾನೆ ಎನ್ನಲಾಗಿದೆ.
ಟಿಪ್ಪು ಡ್ರಾಪ್ ನಿಂದ ಕೆಳಗೆ ಬಿದ್ದಿರೋ ಅರುಣ್ ಮೃತದೇಹ ತರಲು ನಂದಿ ಗಿರಿಧಾಮ ಪೊಲೀಸರು, ಸ್ಥಳಿಯರು ಹಾಗೂ ಮೃತನ ಸಂಬಂಧಿಗಳು ಹೋಗಿದ್ದರು. ನಂದಿಬೆಟ್ಟದ ದುರ್ಗಮ ಹಾದಿಯಲ್ಲಿ ಹರಸಾಹಸ ಪಟ್ಟು ಶವ ಹುಡುಕಾಡಲಾಯಿತು.
ಮೃತದೇಹ ಗಿರಿಧಾಮದ ಬಂಡೆಯ ಮೇಲ್ಭಾಗದಲ್ಲಿ ಸಿಲುಕಿ ಹಾಕಿಕೊಂಡಿತ್ತು. ಜಾಗ್ರತೆಯಿಂದ ಸ್ಥಳೀಯರು ಶವವನ್ನು ಮೇಲೆ ತಂದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನಂದಿ ಗಿರಿಧಾಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ
Published On - 4:31 pm, Tue, 14 February 23