
ಚಿಕ್ಕಬಳ್ಳಾಪುರ, (ಆಗಸ್ಟ್ 22): ಚಿಕ್ಕಬಳ್ಳಾಪುರ (Chikkaballapur )ಜಿಲ್ಲಾ ಪಂಚಾಯತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರು ಚಾಲಕನಾಗಿದ್ದ ಬಾಬು (Car Driver Babu Suicide Case) ಜಿಲ್ಲಾಡಳಿತ ಭವನದ ಆವರಣದಲ್ಲಿ ಮರಕ್ಕೆ ನೇಣಿಗೆ ಶರಣಾಗಿದ್ದ. ಆತನ ಕಾರಿನಲ್ಲಿ ಪತ್ತೆಯಾದ ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ಸಂಸದ ಸುಧಾಕರ್. ಹಾಗೂ ಅವರ ಆಪ್ತರಾದ ನಾಗೇಶ್ ಮಂಜುನಾಥ್ ಕಾರಣ ಎಂದು ಉಲ್ಲೇಖಿಸಿದ್ದ. ಸರ್ಕಾರಿ ಕೆಲಸ ಕೊಡಿಸುವುದಾಗಿ 25 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದ. ಈ ಪ್ರಕರಣ ಕಾಂಗ್ರೆಸ್ ಬಿಜೆಪಿ ನಡುವೆ ರಾಜಕೀಯ ಸಮರಕ್ಕೂ ಕಾರಣವಾಗಿತ್ತು. ಆದ್ರೆ, ಇದೀಗ ಆತ್ಮಹತ್ಯೆ ಮಾಡಿಕೊಂಡ ಬಾಬುವೇ ಮೋಸ ಮಾಡಿರುವ ಆರೋಪ ಕೇಳಿಬಂದಿದೆ. ಸರ್ಕಾರಿ ಕೆಲಸ ಕೊಡಿಸುವುದಾಗಿ ತನ್ನ ಬಳಿ 18 ಲಕ್ಷ ರೂ.ಪಡೆದು ವಂಚನೆ ಮಾಡಿದ್ದಾನೆ ಎಂದು ಬಾಬು ಬಾಲ್ಯ ಸ್ನೇಹಿತ ನಟೇಶ್ ಗಂಭೀರ ಆರೋಪ ಮಾಡಿದ್ದಾರೆ.
ಬಾಬು ಡೆತ್ ನೋಟ್ ನಲ್ಲಿ ಸಂಸದ ಸುಧಾಕರ್ ಹೆಸರು ಉಲ್ಲೇಖವಾಗಿದ್ದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ನಡುವೆ ಆರೋಪ ಪ್ರತ್ಯಾರೋಪಗಳು ನಡೆದ್ದವು. ದಲಿತ ಯುವಕನ ಸಾವಿಗೆ ಸಂಸದ ಸುಧಾಕರ್ ಕಾರಣ ಎಂದು ಪರ ವಿರೋಧದ ಪ್ರತಿಭಟನೆಗಳು ನಡೆದವು. ಇದರ ಬೆನ್ನಲ್ಲೇ ಈಗ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ಎದುರಾಗಿದ್ದು ಸರ್ಕಾರಿ ಕೆಲಸ ಕೊಡಿಸುವುದಾಗಿ ಆತ್ಮಹತ್ಯೆ ಮಾಡಿಕೊಂಡ ಬಾಬುನೇ ತನ್ನ ಬಳಿ 18 ಲಕ್ಷ ಪಡೆದು ಹಣ ಪಡೆದು ವಂಚನೆ ಮಾಡಿದ್ದ ಎಂದು ಬಾಬು ಬಾಲ್ಯ ಸ್ನೇಹಿತ ನಟೇಶ್ ಎಂಬಾತ ಆರೋಪ ಮಾಡಿದ್ದಾನೆ. ಈ ಬಗ್ಗೆ ಚಿಕ್ಕಬಳ್ಳಾಪುರ ಡಿವೈಎಸ್‍ಪಿ ಲಿಖಿತ ದೂರು ಸಹ ನೀಡಿದ್ದಾರೆ.
ಇನ್ನೂ ಮೃತ ಬಾಬು ಗೌರಿಬಿದನೂರು ತಾಲೂಕಿನ ಇಡಗೂರು ಗ್ರಾಮದ ಅಜ್ಜಿ ಮನೆಯಲ್ಲಿ ಬೆಳೆದವನು. ಇನ್ನೂ ಅದೇ ಗ್ರಾಮದ ನಟೇಶ್ ಹಾಗೂ ಬಾಬು ಇಬ್ಬರು ಎಸ್ ಎಸ್ ಎಲ್ ಸಿ ವರೆಗೂ ಜೊತೆಯಲ್ಲೇ ವ್ಯಾಸಂಗ ಮಾಡಿದ್ದು, ಬಾಲ್ಯ ಸ್ನೇಹಿತರಾಗಿದ್ದರು. ಹಾಗಾಗಿ ತನಗೆ ಬಾಬು ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಪತ್ರಾಂಕಿತ ವ್ಯವಸ್ಥಾಪಕನಾಗಿ ಕೆಲಸ ಕೊಡಿಸುವುದಾಗಿ ನಂಬಿಸಿ 18 ಲಕ್ಷ ಪಡೆದುಕೊಂಡಿದ್ದಾನೆ. ಅದಕ್ಕೆ ಪೂರಕವಾಗಿ ಗೌರಿಬಿದನೂರಿನ ಹೋಟೆಲ್ ವೊಂದರಲ್ಲಿ ಆತನಿಗೆ ಹಣ ನೀಡಿರುವ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಆತನ ಖಾತೆಗೆ ಪೋನ್ ಪೇ ಮೂಲಕ ವರ್ಗಾವಣೆ ಮಾಡಿರುವ ದಾಖಲೆಗಳಿವೆ ಎಂದಿದ್ದಾರೆ.
ಮತ್ತೊಂದೆಡೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ನಾಗೇಶ ಹಾಗೂ ಮಂಜುನಾಥ್ ಗೆ ನ್ಯಾಯಾಲಯ ಶರತ್ತುಬದ್ದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇನ್ನು ಸುಧಾಕರ್ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ಸದ್ಯ ಬಾಬು ಆತ್ಮಹತ್ಯೆ ಪ್ರಕರಣ ಚಿಕ್ಕಬಳ್ಳಾಪುರ ಜಿಲ್ಲಾ ನಾಗರೀಕ ಹಕ್ಕು ಜಾರಿ ನಿದೇಶನಾಲಯದ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗೆ ದಿನಕ್ಕೊಂದು ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮುಂದೆ ಏನಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.