ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಿಟ್ಟಹಳ್ಳಿಯಲ್ಲಿ ಭೂಮಿಯಿಂದ ಸ್ಫೋಟದ ಸದ್ದು ಕೇಳಿ ಬಂದಿದೆ. ಇದರಿಂದ ಮಿಟ್ಟಹಳ್ಳಿ ಗ್ರಾಮದ ನಿವಾಸಿಗಳು ಭಯಭೀತರಾಗಿದ್ದು ಸಂಬಂಧಿಕರ ಮನೆಗಳಿಗೆ ತೆರಳುತ್ತಿದ್ದಾರೆ.
ಸದ್ಯ ಮಿಟ್ಟಹಳ್ಳಿಯಲ್ಲಿ ಭೂಮಿಯಿಂದ ಸ್ಫೋಟದ ಸದ್ದು ಕೇಳಿ ಬಂದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಡಿಸಿ ಮನವಿ ಮೇರೆಗೆ ಸ್ಥಳಕ್ಕೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮಾನಿಟರಿಂಗ್ ಸೆಲ್ (KSNDNMC) ಹಿರಿಯ ವಿಜ್ಞಾನಿಗಳಿಬ್ಬರನ್ನು ಕಳುಹಿಸಿದೆ. ಅಲ್ಲದೆ ವಿಜ್ಞಾನಿಗಳ ತಂಡಕ್ಕೆ ಚಿಕ್ಕಬಳ್ಳಾಪುರ ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ ಸಾಥ್ ನೀಡಿದ್ದಾರೆ. ಮಿಟ್ಟಹಳ್ಳಿಯಲ್ಲಿ ವಿಜ್ಞಾನಿಗಳ ತಂಡ ಪರಿಶೀಲನೆ ಶುರು ಮಾಡಿದೆ.
ಮತ್ತೊಂದೆಡೆ ಗ್ರಾಮಕ್ಕೆ ಚಿಂತಾಮಣಿ ಕ್ಷೇತ್ರದ ಶಾಸಕ ಎಂ.ಕೃಷ್ಣಾರೆಡ್ಡಿ ಭೇಟಿ ನೀಡಿದ್ದು ಭೀತಿಗೊಳಗಾಗಿದ್ದ ಗ್ರಾಮಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಗ್ರಾಮದಲ್ಲಿ ಭೂಕಂಪವಾಗಿಲ್ಲ, ಜನರು ಗಾಬರಿಯಾಗಬೇಕಿಲ್ಲ. ಬತ್ತಿ ಹೋಗಿದ್ದ ಬೋರ್ವೆಲ್ಗಳಲ್ಲಿ ಅಂತರ್ಜಲ ಹೆಚ್ಚಿದೆ. ಬೋರ್ವೆಲ್ಗಳಲ್ಲಿರುವ ಏರ್ ಬ್ಲಾಸ್ಟ್ ಆಗಿ ಶಬ್ದ ಬಂದಿರಬೇಕು ಎಂದು ಮಿಟ್ಟಹಳ್ಳಿಯಲ್ಲಿ ಚಿಂತಾಮಣಿ ಶಾಸಕ ಎಂ.ಕೃಷ್ಣಾರೆಡ್ಡಿ ಹೇಳಿಕೆ ನೀಡಿದ್ದಾರೆ.
ಇನ್ನು ಇದೇ ವೇಳೆ ಟಿವಿ9ಗೆ ಚಿಕ್ಕಬಳ್ಳಾಫುರ ಜಿಲ್ಲಾಧಿಕಾರಿ ಲತಾ ಆರ್ ಹೇಳಿಕೆ ನೀಡಿದ್ದಾರೆ. ಮಿಟ್ಟಹಳ್ಳಿ ಹಾಗೂ ಸುತ್ತಮುತ್ತ ಗ್ರಾಮದಲ್ಲಿ ಭೂಕಂಪ ಆಗಿಲ್ಲ. ಭೂಮಾಪನ ಕೇಂದ್ರದಲ್ಲಿ ಎಲ್ಲಿಯೂ ಭೂಕಂಪನ ಮಾಹಿತಿ ದಾಖಲಾಗಿಲ್ಲ. ಗ್ರಾಮದಲ್ಲಿ ಶಬ್ದ ಬಂದಿದೆ ಇದ್ರಿಂದ ವಿಜ್ಞಾನಿಗಳು ಪರಿಶೀಲನೆ ನಡೆಸಿದ್ದಾರೆ. ಕೆ.ಎಸ್.ಎನ್.ಡಿ.ಎನ್.ಎಂ.ಸಿ. ವಿಜ್ಞಾನಿಗಳು ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರು ಭಯ ಗಾಬರಿ ಪಡಬೇಕಿಲ್ಲ. ಗ್ರಾಮದ ಸುತ್ತಮುತ್ತ 350ಕ್ಕೂ ಹೆಚ್ಚು ಬೋರ್ ವೇಲ್ಗಳಿವೆ. ವಿಫಲ ಕೊಳವೆ ಬಾವಿಗಳಲ್ಲಿ ಜಲ ಮರುಪೂರಣವಾದಾಗ ಶಬ್ದ ಬಂದಿರಬಹುದು. ಏರ್ ಬ್ಲಾಸ್ಟ್ ನಿಂದ ಶಬ್ದ ಬಂದಿರುವ ಬಗ್ಗೆ ಮಾಹಿತಿಯಿದೆ ಎಂದರು.