Kalaburagi Earthquake: ಕಲಬುರಗಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗಲೇ ಭೂಮಿಯಿಂದ ಕೇಳಿ ಬಂದ ಭಾರಿ ಸದ್ದು

ಸಿದ್ದರಾಮಯ್ಯ ಗಡಿಕೇಶ್ವರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಕಳೆದ ಕೆಲ ದಿನಗಳಿಂದ ಕಲಬುರಗಿಯಲ್ಲಿ ಭೂಕಂಪನವಾಗುತ್ತಿದ್ದು ಜನರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.

Kalaburagi Earthquake: ಕಲಬುರಗಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗಲೇ ಭೂಮಿಯಿಂದ ಕೇಳಿ ಬಂದ ಭಾರಿ ಸದ್ದು
ಸಿದ್ದರಾಮಯ್ಯ
Follow us
TV9 Web
| Updated By: guruganesh bhat

Updated on:Oct 12, 2021 | 8:44 PM

ಕಲಬುರಗಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರ್ಯಕ್ರಮೊವೊಂದರಲ್ಲಿ ಭಾಗಿಯಾಗಿರುವಾಗಲೇ ಕಲಬುರಗಿಯ ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಿಂದ ಭಾರಿ ಸದ್ದು ಕೇಳಿಬಂದಿದೆ. ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಗಡಿಕೇಶ್ವರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಆದರೂ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಜನರು ಭಯದಿಂದ ಗ್ರಾಮ ಖಾಲಿ ಮಾಡಿ ಗುಳೆ ಹೋಗಿದ್ದಾರೆ. ನನಗೂ ಭೂಕಂಪದ ಶಬ್ದದ ಅನುಭವವಾಯಿತು. ಸರ್ಕಾರ ಜನರ ಸ್ಥಿತಿಯನ್ನು ಉದಾಸೀನವಾಗಿ ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಕೆಲ ದಿನಗಳಿಂದ ಕಲಬುರಗಿಯಲ್ಲಿ ಭೂಕಂಪನವಾಗುತ್ತಿದ್ದು ಜನರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.

ಜತೆಗೆ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಪೋನಾಯಿಸಿದ ಅವರು, ಗಡಿಕೇಶ್ವರ ಗ್ರಾಮದಲ್ಲಿ ಜನರು ಭಯಭೀತಿಗೊಳಗಾಗಿದ್ದಾರೆ. ಕೂಡಲೇ ಗ್ರಾಮದಲ್ಲಿ ಪುನರವಸತಿ ಕೇಂದ್ರ ಪ್ರಾರಂಭಿಸಿ. ಜನರಿಗೆ ಟೀನ್ ಶೆಡ್, ಬೆಡ್ ಸೀಟ್ ಕೊಡಲು ಹೇಳಿ. ಜಿಲ್ಲಾಧಿಕಾರಿಗೆ ಸೂಚನೆ ನೀಡಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಕಲಬುರಗಿ: ಭೂಕಂಪನ ಹೆಚ್ಚಾದರೆ ಪುನರ್ವಸತಿ ವ್ಯವಸ್ಥೆಗೆ ಸಿದ್ಧತೆ: ಸಂಸದ ಡಾ.ಉಮೇಶ್ ಜಾಧವ್ ಕಲಬುರಗಿ ಜಿಲ್ಲೆಯ ಹಲವೆಡೆ ಪದೇಪದೆ ಭೂಕಂಪನ (Kalaburagi Earthquake) ವಿಚಾರವಾಗಿ 3-4 ವರ್ಷಗಳಲ್ಲೇ ಸೋಮವಾರ ಹೆಚ್ಚಿನ ಪ್ರಮಾಣದಲ್ಲಿ ಭೂಕಂಪನವಾಗಿದೆ. ಅಧಿಕಾರಿಗಳು ಭೂಕಂಪನ ಆದ ಸ್ಥಳದಲ್ಲೇ ಇದ್ದಾರೆ ಭೂಕಂಪನ ಹೆಚ್ಚಾದರೆ ಪುನರ್ವಸತಿ ವ್ಯವಸ್ಥೆಗೆ ಕಲಬುರಗಿ ಜಿಲ್ಲಾಡಳಿತ ತಯಾರಿ ಮಾಡಿಕೊಂಡಿದೆ. ಜನರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಶಾಶ್ವತ ಪರಿಹಾರಕ್ಕೆ ಸಿಎಂ ಜತೆ ಚರ್ಚೆ ಮಾಡಿದ್ದೇವೆ ಎಂದು ಬೆಂಗಳೂರಿನಲ್ಲಿ ಸಂಸದ ಡಾ.ಉಮೇಶ್ ಜಾಧವ್ ತಿಳಿಸಿದರು.

ಕಲಬುರಗಿ ಜಿಲ್ಲೆಯ ಸೇಡಂ ಕ್ಷೇತ್ರದ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಬೆಂಗಳೂರಿನಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಭೂ ಕಂಪನದಿಂದ ಜನರಿಗೆ ಭೀತಿ ಶುರುವಾಗಿದೆ. ನಾನು ಮತ್ತು ಸಂಸದರು ಅಧಿಕಾರಿಗಳ ಜತೆ ಚರ್ಚಿಸಿದ್ದೇವೆ. ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚೆ ಮಾಡಿದ್ದೇವೆ. ಅಕ್ಟೋಬರ್ 16 ರಂದು ಗಡಿಕೇಶ್ವರ ಗ್ರಾಮದಲ್ಲಿ ವಾಸ್ತವ್ಯ ಮಾಡುತ್ತೇವೆ. ದೆಹಲಿಯಿಂದ ಅಧ್ಯಯನ ತಂಡಗಳನ್ನು ಭೂಕಂಪನ ಪ್ರದೇಶಕ್ಕೆ ಕಳಿಸುತ್ತೇವೆ. ಕಂಪನದ ಬಗ್ಗೆ ಭೂವಿಜ್ಞಾನಿಗಳು ಒಂದು ವರದಿ ಕೊಟ್ಟಿದ್ದಾರೆ. ಅಲ್ಲಿ ಸುಣ್ಣದ ಕಲ್ಲಿನ ನಿಕ್ಷೇಪ ಹೆಚ್ಚಾಗಿರುವುದರಿಂದ ಕಂಪನ ಹೆಚ್ಚಾಗಿದೆ. ಮಳೆಗಾಲದ ವೇಳೆ ಈ ರೀತಿ ಸಣ್ಣ ಕಂಪನಗಳು ಆಗುತ್ತವೆ. ದೊಡ್ಡ ಹಾನಿ ಆಗಲ್ಲ ಎಂದು ವರದಿಯಲ್ಲಿ ಉಲ್ಲೇಖವಿದೆ. ಜನರಿಗಾಗಿ ತಾತ್ಕಾಲಿಕ ಶೆಡ್ ಮಾಡಲು ಸಿಎಂಗೆ ಮನವಿ ಮಾಡಲಾಗಿದೆ ಎಂದು ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ತಿಳಿಸಿದರು.

ಕಲಬುರಗಿ ಜಿಲ್ಲೆಯ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಗಡಿಕೇಶ್ವರ, ಹೊಸಳ್ಳಿ ಎಚ್, ತೇಗಲತಿಪ್ಪಿ, ಕೆರೂರು ಸೇರಿದಂತೆ ಹತ್ತಕ್ಕೂ ಹಳ್ಳಿಗಳಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಲಘು ಭೂಕಂಪನಗಳು ಮೇಲಿಂದ ಮೇಲೆ ಆಗುತ್ತಿವೆ. ಹಗಲು ರಾತ್ರಿಯೆನ್ನದೇ ನಿರಂತರವಾಗಿ ಉಂಟಾಗುತ್ತಿರುವ ಭೂ ಕಂಪನದಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಇನ್ನು ಕಳೆದ ರಾತ್ರಿ ಜಿಲ್ಲೆಯ ಕಾಳಗಿ, ಚಿಂಚೋಳಿ, ಸೇಡಂ, ಶಹಬಾದ್ ತಾಲೂಕಿನಲ್ಲಿ ನೂರಕ್ಕೂ ಹೆಚ್ಚು ಹಳ್ಳಿಯಲ್ಲಿ ಲಘು ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಗಡಿಕೇಶ್ವರ ಬಳಿ 4.1 ತೀರ್ವತೆಯ ಭೂಕಂಪನವಾಗಿರೋದು ದಾಖಲಾಗಿದೆ.

ಇಂದು (ಅಕ್ಟೋಬರ್ 12) ಬೆಳಿಗ್ಗೆ ಕೂಡಾ ಹೊಡೆಬೀರನಳ್ಳಿ, ಕೆರೂರು, ಹಲಚೇರಾ, ಗಡಿಕೇಶ್ವರ ಸೇರಿದಂತೆ ಕೆಲ ಗ್ರಾಮಗಳಲ್ಲಿ ಮತ್ತೆ ಎರಡು ಭಾರಿ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 3.1 ರಷ್ಟು ತೀವೃತೆಯ ಭೂಕಂಪನ ಆಗಿದೆ. ಇನ್ನು ಕಳೆದ ಭಾನುವಾರ ಇಪ್ಪತ್ನಾಲ್ಕು ಗಂಟೆಯಲ್ಲಿ ಹದಿನಾರಕ್ಕು ಹೆಚ್ಚು ಬಾರಿ ಲಘು ಭೂಕಂಪನ ಮತ್ತು ಭೂಮಿಯಿಂದ ಸದ್ದು ಬಂದಿದೆ. ಕಳೆದ ಶುಕ್ರವಾರ, ಶನಿವಾರ ಕೂಡಾ ಲಘು ಭೂಕಂಪನಗಳು ಕಾಳಗಿ, ಚಿಂಚೋಳಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಉಂಟಾಗಿವೆ.

ಇದನ್ನೂ ಓದಿ: 

Kalaburagi Earthquake: ಕಲಬುರಗಿ: ಭೂಕಂಪನ ಹೆಚ್ಚಾದರೆ ಪುನರ್ವಸತಿ ವ್ಯವಸ್ಥೆಗೆ ಸಿದ್ಧತೆ: ಸಂಸದ ಡಾ.ಉಮೇಶ್ ಜಾಧವ್

Kalaburagi Earthquake: ಕಲಬುರಗಿ ಜಿಲ್ಲೆಯ ಹಲವೆಡೆ ಭೂಕಂಪನ; ಭಯದಲ್ಲಿ ಗ್ರಾಮಗಳನ್ನೇ ತೊರೆಯುತ್ತಿರುವ ಜನರು

Published On - 8:22 pm, Tue, 12 October 21