Kalaburagi Earthquake: ಕಲಬುರಗಿ: ಭೂಕಂಪನ ಹೆಚ್ಚಾದರೆ ಪುನರ್ವಸತಿ ವ್ಯವಸ್ಥೆಗೆ ಸಿದ್ಧತೆ: ಸಂಸದ ಡಾ.ಉಮೇಶ್ ಜಾಧವ್
ಮಳೆಗಾಲದ ವೇಳೆ ಈ ರೀತಿ ಸಣ್ಣ ಕಂಪನಗಳು ಆಗುತ್ತವೆ. ದೊಡ್ಡ ಹಾನಿ ಆಗಲ್ಲ ಎಂದು ವರದಿಯಲ್ಲಿ ಉಲ್ಲೇಖವಿದೆ. ಜನರಿಗಾಗಿ ತಾತ್ಕಾಲಿಕ ಶೆಡ್ ಮಾಡಲು ಸಿಎಂಗೆ ಮನವಿ ಮಾಡಲಾಗಿದೆ ಎಂದು ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ತಿಳಿಸಿದರು.
ಬೆಂಗಳೂರು: ಕಲಬುರಗಿ ಜಿಲ್ಲೆಯ ಹಲವೆಡೆ ಪದೇಪದೆ ಭೂಕಂಪನ (Kalaburagi Earthquake) ವಿಚಾರವಾಗಿ 3-4 ವರ್ಷಗಳಲ್ಲೇ ಸೋಮವಾರ ಹೆಚ್ಚಿನ ಪ್ರಮಾಣದಲ್ಲಿ ಭೂಕಂಪನವಾಗಿದೆ. ಅಧಿಕಾರಿಗಳು ಭೂಕಂಪನ ಆದ ಸ್ಥಳದಲ್ಲೇ ಇದ್ದಾರೆ ಭೂಕಂಪನ ಹೆಚ್ಚಾದರೆ ಪುನರ್ವಸತಿ ವ್ಯವಸ್ಥೆಗೆ ಕಲಬುರಗಿ ಜಿಲ್ಲಾಡಳಿತ ತಯಾರಿ ಮಾಡಿಕೊಂಡಿದೆ. ಜನರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಶಾಶ್ವತ ಪರಿಹಾರಕ್ಕೆ ಸಿಎಂ ಜತೆ ಚರ್ಚೆ ಮಾಡಿದ್ದೇವೆ ಎಂದು ಬೆಂಗಳೂರಿನಲ್ಲಿ ಸಂಸದ ಡಾ.ಉಮೇಶ್ ಜಾಧವ್ ತಿಳಿಸಿದರು.
ಕಲಬುರಗಿ ಜಿಲ್ಲೆಯ ಸೇಡಂ ಕ್ಷೇತ್ರದ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಬೆಂಗಳೂರಿನಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಭೂ ಕಂಪನದಿಂದ ಜನರಿಗೆ ಭೀತಿ ಶುರುವಾಗಿದೆ. ನಾನು ಮತ್ತು ಸಂಸದರು ಅಧಿಕಾರಿಗಳ ಜತೆ ಚರ್ಚಿಸಿದ್ದೇವೆ. ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚೆ ಮಾಡಿದ್ದೇವೆ. ಅಕ್ಟೋಬರ್ 16 ರಂದು ಗಡಿಕೇಶ್ವರ ಗ್ರಾಮದಲ್ಲಿ ವಾಸ್ತವ್ಯ ಮಾಡುತ್ತೇವೆ. ದೆಹಲಿಯಿಂದ ಅಧ್ಯಯನ ತಂಡಗಳನ್ನು ಭೂಕಂಪನ ಪ್ರದೇಶಕ್ಕೆ ಕಳಿಸುತ್ತೇವೆ. ಕಂಪನದ ಬಗ್ಗೆ ಭೂವಿಜ್ಞಾನಿಗಳು ಒಂದು ವರದಿ ಕೊಟ್ಟಿದ್ದಾರೆ. ಅಲ್ಲಿ ಸುಣ್ಣದ ಕಲ್ಲಿನ ನಿಕ್ಷೇಪ ಹೆಚ್ಚಾಗಿರುವುದರಿಂದ ಕಂಪನ ಹೆಚ್ಚಾಗಿದೆ. ಮಳೆಗಾಲದ ವೇಳೆ ಈ ರೀತಿ ಸಣ್ಣ ಕಂಪನಗಳು ಆಗುತ್ತವೆ. ದೊಡ್ಡ ಹಾನಿ ಆಗಲ್ಲ ಎಂದು ವರದಿಯಲ್ಲಿ ಉಲ್ಲೇಖವಿದೆ. ಜನರಿಗಾಗಿ ತಾತ್ಕಾಲಿಕ ಶೆಡ್ ಮಾಡಲು ಸಿಎಂಗೆ ಮನವಿ ಮಾಡಲಾಗಿದೆ ಎಂದು ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ತಿಳಿಸಿದರು.
ಕಲಬುರಗಿ ಜಿಲ್ಲೆಯ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಗಡಿಕೇಶ್ವರ, ಹೊಸಳ್ಳಿ ಎಚ್, ತೇಗಲತಿಪ್ಪಿ, ಕೆರೂರು ಸೇರಿದಂತೆ ಹತ್ತಕ್ಕೂ ಹಳ್ಳಿಗಳಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಲಘು ಭೂಕಂಪನಗಳು ಮೇಲಿಂದ ಮೇಲೆ ಆಗುತ್ತಿವೆ. ಹಗಲು ರಾತ್ರಿಯೆನ್ನದೇ ನಿರಂತರವಾಗಿ ಉಂಟಾಗುತ್ತಿರುವ ಭೂ ಕಂಪನದಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಇನ್ನು ಕಳೆದ ರಾತ್ರಿ ಜಿಲ್ಲೆಯ ಕಾಳಗಿ, ಚಿಂಚೋಳಿ, ಸೇಡಂ, ಶಹಬಾದ್ ತಾಲೂಕಿನಲ್ಲಿ ನೂರಕ್ಕೂ ಹೆಚ್ಚು ಹಳ್ಳಿಯಲ್ಲಿ ಲಘು ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಗಡಿಕೇಶ್ವರ ಬಳಿ 4.1 ತೀರ್ವತೆಯ ಭೂಕಂಪನವಾಗಿರೋದು ದಾಖಲಾಗಿದೆ.
ಇಂದು (ಅಕ್ಟೋಬರ್ 12) ಬೆಳಿಗ್ಗೆ ಕೂಡಾ ಹೊಡೆಬೀರನಳ್ಳಿ, ಕೆರೂರು, ಹಲಚೇರಾ, ಗಡಿಕೇಶ್ವರ ಸೇರಿದಂತೆ ಕೆಲ ಗ್ರಾಮಗಳಲ್ಲಿ ಮತ್ತೆ ಎರಡು ಭಾರಿ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 3.1 ರಷ್ಟು ತೀವೃತೆಯ ಭೂಕಂಪನ ಆಗಿದೆ. ಇನ್ನು ಕಳೆದ ಭಾನುವಾರ ಇಪ್ಪತ್ನಾಲ್ಕು ಗಂಟೆಯಲ್ಲಿ ಹದಿನಾರಕ್ಕು ಹೆಚ್ಚು ಬಾರಿ ಲಘು ಭೂಕಂಪನ ಮತ್ತು ಭೂಮಿಯಿಂದ ಸದ್ದು ಬಂದಿದೆ. ಕಳೆದ ಶುಕ್ರವಾರ, ಶನಿವಾರ ಕೂಡಾ ಲಘು ಭೂಕಂಪನಗಳು ಕಾಳಗಿ, ಚಿಂಚೋಳಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಉಂಟಾಗಿವೆ.
ಗ್ರಾಮಗಳನ್ನು ತೊರೆಯುತ್ತಿರುವ ಜನರು ನಿರಂತರವಾಗಿ ಲಘು ಭೂಕಂಪನ ಮತ್ತು ಭೂಮಿಯಿಂದ ಬರುತ್ತಿರುವ ಸದ್ದಿನಿಂದ ಗ್ರಾಮಗಳ ಜನರು ಕಂಗಾಲಾಗಿದ್ದಾರೆ. ಅನೇಕರು ಮನೆಯ ಹೊರಗಡೆ ಮಲಗುತ್ತಿದ್ದರೆ, ಇನ್ನು ಕೆಲವರು ಗ್ರಾಮವನ್ನೇ ಬಿಟ್ಟು ಸಂಬಂಧಿಕರ ಮನೆಗಳಿಗೆ ಹೋಗುತ್ತಿದ್ದಾರೆ. ಇಂದು ಹೊಸಳ್ಳಿ ಎಚ್ ಗ್ರಾಮದಲ್ಲಿ ಅನೇಕರು ಮನೆಗಳನ್ನು ಬಿಟ್ಟು ಸಂಬಂಧಿಕರ ಮನೆಗೆ ಹೋಗಿದ್ದಾರೆ. ಮನೆಯಲ್ಲಿ ಬಾಣಂತಿಯರಿದ್ದಾರೆ. ವೃದ್ದರು ಇದ್ದಾರೆ. ಅವರಿಗೆ ಹೆಚ್ಚಿನ ಆರೈಕೆ ಬೇಕಾಗುತ್ತದೆ. ಆದರೆ ಮನೆಯಲ್ಲಿ ಇರಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕೆಲ ದಿನಗಳ ಕಾಲ ತಮ್ಮೂರು ಬಿಟ್ಟು ಸಂಬಂಧಿಕರ ಮನೆಗೆ ಹೋಗುತ್ತಿದ್ದೇವೆ ಎಂದು ಹೊಸಳ್ಳಿ ಗ್ರಾಮದ ಜನರು ಹೇಳಿದ್ದಾರೆ.
ಇದನ್ನೂ ಓದಿ:
ಕಲಬುರಗಿ ಜಿಲ್ಲೆಯ ಹಲವೆಡೆ ಮತ್ತೆ ಕಂಪಿಸಿದ ಭೂಮಿ; 4.1 ರಷ್ಟು ತೀವ್ರತೆ ದಾಖಲು
ವಿಜಯಪುರ ಸಿಂದಗಿಯಲ್ಲಿ ಮತ್ತೆ ಭೂಕಂಪದ ಅನುಭವ! ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆತಂಕ