ಹೆಚ್​ಡಿ ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದರು, ಅದು ಪುಟಗೋಸಿ ಹುದ್ದೆನಾ? ಕುಮಾರಸ್ವಾಮಿಗೆ ಸಿದ್ದರಾಮಯ್ಯ ಪ್ರಶ್ನೆ

ರಾಜಕೀಯವಾಗಿ ನನ್ನ ಕಂಡರೆ ಕುಮಾರಸ್ವಾಮಿಗೆ ಭಯ. ಯಾರ ಮೇಲೆ ಭಯ ಇರುತ್ತೋ ಅವರನ್ನೇ ಟಾರ್ಗೆಟ್ ಮಾಡುತ್ತಾರೆ. ಕುಮಾರಸ್ವಾಮಿಗೆ ಸತ್ಯ ಹೇಳಿಯೇ ಗೊತ್ತಿಲ್ಲ. ಜನರ ಅನುಕಂಪ ಗಿಟ್ಟಿಸಲು ಆ ರೀತಿ ಹೇಳಿಕೆ ನೀಡ್ತಾರೆ.

ಹೆಚ್​ಡಿ ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದರು, ಅದು ಪುಟಗೋಸಿ ಹುದ್ದೆನಾ? ಕುಮಾರಸ್ವಾಮಿಗೆ ಸಿದ್ದರಾಮಯ್ಯ ಪ್ರಶ್ನೆ
ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ
Follow us
TV9 Web
| Updated By: sandhya thejappa

Updated on:Oct 13, 2021 | 10:56 AM

ಕಲಬುರಗಿ: ‘ಪುಟಗೋಸಿ’ ವಿಪಕ್ಷ ಸ್ಥಾನಕ್ಕಾಗಿ ಮೈತ್ರಿ ಸರ್ಕಾರ ತೆಗೆದಿದ್ದರು ಅಂತ ಸಿದ್ದರಾಮಯ್ಯ (Siddaramaiah) ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹೆಚ್​ಡಿ ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದರು. ಹಾಗಾದರೆ ಅದು ಕೂಡ ಪುಟಗೋಸಿ ಹುದ್ದೆನಾ? ಅಂತ ಪ್ರಶ್ನಿಸಿದ್ದಾರೆ. ಸಿಎಂ ಆಗಿದ್ದವರು ಜವಾಬ್ದಾರಿಯಿಂದ ಮಾತನಾಡಬೇಕು. ಸಾಂವಿಧಾನಿಕ ಹುದ್ದೆ ಬಗ್ಗೆ ಲಘುವಾಗಿ ಮಾತನಾಡಬಾರದು. ಹೆಚ್.ಡಿ.ಕುಮಾರಸ್ವಾಮಿ ವೈಯಕ್ತಿಕವಾಗಿ ಮಾತಾಡಬಾರದು ಅಂತ ಕಲಬುರಗಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜಕೀಯವಾಗಿ ನನ್ನ ಕಂಡರೆ ಕುಮಾರಸ್ವಾಮಿಗೆ ಭಯ. ಯಾರ ಮೇಲೆ ಭಯ ಇರುತ್ತೋ ಅವರನ್ನೇ ಟಾರ್ಗೆಟ್ ಮಾಡುತ್ತಾರೆ. ಕುಮಾರಸ್ವಾಮಿಗೆ ಸತ್ಯ ಹೇಳಿಯೇ ಗೊತ್ತಿಲ್ಲ. ಜನರ ಅನುಕಂಪ ಗಿಟ್ಟಿಸಲು ಆ ರೀತಿ ಹೇಳಿಕೆ ನೀಡ್ತಾರೆ. ಕುಮಾರಸ್ವಾಮಿ ಕಾಲು ಕರೆದು ಜಗಳ ಮಾಡ್ತಾರೆ. ನಾನು ಅವರ ಬಗ್ಗೆ ಮಾತನಾಡಬಾರದು ಅಂತ ಅಂದುಕೊಂಡಿದ್ದೇನೆ. ಹೆದರಿಸೋರನ್ನ, ಬೆದರಿಸೋರನ್ನ ನಾನು ಬಾಳ ನೋಡಿದ್ದೇನೆ. ನಾನು ಐವತ್ತು ವರ್ಷದಿಂದ ರಾಜಕೀಯದಲ್ಲಿದ್ದೇನೆ. ಕುಮಾರಸ್ವಾಮಿ ಇತ್ತೀಚೆಗೆ ಬಂದಿದ್ದಾರೆ. ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದರು. ಹಾಗಾದರೆ ಅದು ಪುಟಗೋಸಿ ಹುದ್ದೇನಾ ಅಂತ ಸಿದ್ದರಾಮಯ್ಯ ಕೇಳಿದ್ದಾರೆ.

ಜೆಡಿಎಸ್ ಪಕ್ಷದ ಮೂರು ಶಾಸಕರು ಹೋಗಿದ್ದಾರೆ ಅವರನ್ನು ನಾನು ಕಳುಹಿಸಿದ್ದೇನಾ? ವಿರೋಧ ಪಕ್ಷದ ನಾಯಕ ಸ್ಥಾನ ಅವರ ಪ್ರಕಾರ ಪುಟಗೋಸಿ. ಅದು ಸಂವಿಧಾನ ಹುದ್ದೆ. ಸಿಎಂ ಆದವರು ಆ ರೀತಿ ಹೇಳಬಾರದು. ಎರಡು ಬಾರಿ ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ವಿರೋಧ ಪಕ್ಷದ ಸ್ಥಾನದ ಬಗ್ಗೆ ಕುಮಾರಸ್ವಾಮಿ ಯಾವ ಅಭಿಪ್ರಾಯ ಇದೆ ಅಂತ ಗೊತ್ತಾಯ್ತಲ್ಲಾ. ಅವರ ಸರ್ಕಾರ ಬೀಳಿಸೋದಾದರೆ ಮುಖ್ಯಮಂತ್ರಿ ಮಾಡಲು ಒಪ್ಪುತ್ತಿರಲಿಲ್ಲ. ಸಮ್ಮಿಶ್ರ ಸರ್ಕಾರ ಬಿದ್ದು ಹೋಗಿದ್ರೆ ಅದಕ್ಕೆ ಕಾರಣ ಕುಮಾರಸ್ವಾಮಿ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

23 ಶಾಸಕರು ನಮ್ಮ ಪಕ್ಷದಿಂದ ಬಿಜೆಪಿಗೆ ಹೋಗಿಲ್ಲ. ನಮ್ಮ ಪಕ್ಷದ 14 ಶಾಸಕರು ಬಿಜೆಪಿಗೆ ಹೋಗಿದ್ದಾರೆ. ಮೂವರು ಜೆಡಿಎಸ್ ಶಾಸಕರು ಬಿಜೆಪಿಗೆ ಹೋಗಿದ್ದರು. ಜೆಡಿಎಸ್ ಶಾಸಕರನ್ನು ಕೂಡ ನಾನೇ ಕಳಿಸಿದ್ನಾ? ಅಂತ ಕುಮಾರಸ್ವಾಮಿಗೆ ಪ್ರಶ್ನಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿಯವರೇ ನಿಮಗೆ ಎಷ್ಟು ನಾಲಗೆ ಇದೆ. ಮಾತು ಒಂದಿರಬೇಕು ಎಂದು ವಾಗ್ದಾಳಿ ನಡೆಸಿದರು.

ರೈತರ ಸಮಸ್ಯೆಗೆ ಸ್ಪಂದಿಸುವ ಸರ್ಕಾರವಲ್ಲ 2019ರ ಪ್ರವಾಹದ ಪರಿಹಾರ ಹಣವನ್ನೇ ಇನ್ನೂ ಕೊಟ್ಟಿಲ್ಲ. ಈಗಿರುವ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸುವ ಸರ್ಕಾರವಲ್ಲ. ಕಲಬುರಗಿ ಜಿಲ್ಲೆಯಲ್ಲಿ 45 ಹಳ್ಳಿಗಳಲ್ಲಿ ಭೂಕಂಪ ಆಗಿದೆ. ಈವರೆಗೆ ಒಬ್ಬ ಜನಪ್ರತಿನಿಧಿಯೂ ಗ್ರಾಮಕ್ಕೆ ಹೋಗಿಲ್ಲ. ಶೇ.75ರಷ್ಟು ಜನರು ಗುಳೆ ಹೋಗುತ್ತಿದ್ದಾರೆ. ನಾನು ಹೇಳಿದ ಬಳಿಕ ಕ್ರಮ ಕೈಗೊಳ್ಳುವುದಾಗಿ ಹೇಳ್ತಿದ್ದಾರೆ. ಇವರು ದುಡ್ಡು ಹೊಡೆಯುವುದರಲ್ಲಿ ಬ್ಯುಸಿಯಾಗಿದ್ದಾರೆ. ಸಚಿವರಾದ ನಿರಾಣಿ, ಆರ್.ಅಶೋಕ್ ಎಲ್ಲಿ ಹೋಗಿದ್ದಾರೆ? ಅಧಿಕಾರಿಗಳು ಗ್ರಾಮಗಳಿಗೆ ಹೋಗದೆ ನಿರ್ಲಕ್ಷ್ಯವಹಿಸಿದ್ದಾರೆ. ನಾನು ಗ್ರಾಮಕ್ಕೆ ಹೋಗಿಬಂದ ಬಳಿಕ ಡಿಸಿ ಹೋಗಿದ್ದಾರೆ ಅಂತ  ಕಲಬುರಗಿಯಲ್ಲಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಆರೋಪ ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಹಾರ ಹಣವನ್ನೇ ಕೊಟ್ಟಿಲ್ಲ. ಕಳೆದ ವರ್ಷವೂ ಕೊಟ್ಟಿಲ್ಲ, ಈ ವರ್ಷವೂ ಕೊಟ್ಟಿಲ್ಲ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಬೇಕಿದ್ದರೆ ಸಾಲ ಪಡೆದುಕೊಳ್ಳಿ ಎಂದು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ ನಮ್ಮ ಪಾಲು ಹಣವನ್ನು ಕೊಡಬೇಕು. ನಮ್ಮ ಜಿಎಸ್‌ಟಿ ಪಾಲು ಹಣ ಕೂಡ ಕಡಿಮೆ ಮಾಡಿದ್ದಾರೆ. ಸುಮಾರು 20 ಸಾವಿರ ಕೋಟಿ ಹಣ ಕಡಿಮೆಯಾಗಿದೆ. ಮೋದಿ ಪ್ರಧಾನಿಯಾದ ಬಳಿಕ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ. ರಾಜ್ಯದ ಪಾಲು ಕಡಿಮೆಯಾಗಲು  ಪ್ರಧಾನಿ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಸಿಎಂ ಬಿಎಸ್‌ವೈ, ಸಿಎಂ ಬೊಮ್ಮಾಯಿ ಕಾರಣ ಎಂದು ಹೇಳಿದರು.

ಸನ್ಯಾಸ ಸ್ವೀಕರಿಸುತ್ತೇನೆ; ಸಿದ್ದರಾಮಯ್ಯ ಸವಾಲ್​ ಯಡಿಯೂರಪ್ಪ ಹುಟ್ಟುಹಬ್ಬದ ದಿನ ನಾನು ಭೇಟಿಯಾಗಿದ್ದೆ. ಆ ನಂತರ ಯಡಿಯೂರಪ್ಪರನ್ನು ನಾನು ಭೇಟಿ ಮಾಡಿಲ್ಲ. ನಾನು, ಬಿಎಸ್​ವೈ ಭೇಟಿಯಾಗಿದ್ದು ಸಾಬೀತುಪಡಿಸಿದರೆ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ. ಬಿಎಸ್‌ವೈ ಭೇಟಿ ಮಾಡುವ ಗಿರಾಕಿ ಕುಮಾರಸ್ವಾಮಿ. ನಾನು ವಿಪಕ್ಷ ನಾಯಕನಾಗಿ ಸಿಎಂರನ್ನು ಭೇಟಿ ಮಾಡಿಲ್ಲ. ಸಭೆ, ಸದನದಲ್ಲಿ ಮಾತ್ರ ಬಿಎಸ್‌ವೈರನ್ನು ಭೇಟಿಯಾಗಿದ್ದೇನೆ. ವೈಯಕ್ತಿಕವಾಗಿ ನಾನು ಯಡಿಯೂರಪ್ಪರನ್ನು ಭೇಟಿಯಾಗಿಲ್ಲ ಅಂತ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ

ಹೆಚ್​ಡಿ ಕುಮಾರಸ್ವಾಮಿ ‘ಪುಟಗೋಸಿ’ ಹೇಳಿಕೆಗೆ ಸಿದ್ದರಾಮಯ್ಯ ಪುತ್ರ ಯತೀಂದ್ರ ತಿರುಗೇಟು

2023ಕ್ಕೆ ಸಂಪೂರ್ಣ ವಿದ್ಯುತ್ ಚಾಲಿತ ರೈಲು ಸಂಚಾರ; ನೈಋತ್ಯ ರೈಲ್ವೆಯಿಂದ ಅಧುನಿಕರಣದತ್ತ ಚಿಂತನೆ

Published On - 10:01 am, Wed, 13 October 21