ಚಿಕ್ಕಬಳ್ಳಾಪುರ, ನ.23: ರುಚಿ ಹಾಗೂ ಗುಣಮಟ್ಟಕ್ಕೆ ಯಾಲಕ್ಕಿ ಬಾಳೆಹಣ್ಣು ಖ್ಯಾತಿ ಪಡೆದಿದೆ. ಇನ್ನು ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಸುತ್ತಮುತ್ತ ಬೆಳೆಯುವ ಯಾಲಕ್ಕಿ ಬಾಳೆಹಣ್ಣು(Banana)ಗಳಿಗೆ ಹೆಚ್ಚಿನ ಡಿಮ್ಯಾಂಡ್ ಇದೆ. ರೈತರ ಬಾಳೆತೋಟಗಳಲ್ಲೇ ಕೆಜಿ ಬಾಳೆ ಗೊನೆಗೆ 60 ರೂಪಾಯಿಯಿಂದ 80 ರೂಪಾಯಿ ಬೆಲೆ ಇದೆ. ಇನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ ಯಾಲಕ್ಕಿ ಬಾಳೆ ಹಣ್ಣಿಗೆ 90 ರೂಪಾಯಿಯಿಂದ ರಿಂದ 120 ರೂಪಾಯಿ ಬೆಲೆ ಇದೆ. ಇದರಿಂದ ಕಳ್ಳರು ರೈತರು ಬೆಳೆದ ಬಾಳೆತೋಟಕ್ಕೆ ನುಗ್ಗಿ ರಾತ್ರೋರಾತ್ರಿ ಬಾಳೆಗೊನೆಗಳನ್ನು ಕಳ್ಳತನ ಮಾಡುತ್ತಿದ್ದಾರೆ.
ಇನ್ನು ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಜಿ.ಬೊಮ್ಮಸಂದ್ರ ಗ್ರಾಮದ ರೈತ ಪದ್ಮನಾಭಯ್ಯನವರಿಗೆ ಸೇರಿದ ಬಾಳೆತೋಟ ಕಳ್ಳರ ಪಾಲಾಗಿದೆ. ರೈತ ಪದ್ಮನಾಭಯ್ಯ ಅವರು ಒಂದೂವರೆ ಎಕರೆಯಲ್ಲಿ ಒಂದೂವರೆ ಲಕ್ಷ ರೂಪಾಯಿ ಬಂಡವಾಳ ಹಾಕಿ ಬಾಳೆಹಣ್ಣು ಬೆಳೆದಿದ್ದಾರೆ. ಇನ್ನೇನು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಬೇಕೆನ್ನುವಷ್ಟರಲ್ಲಿ ತಲಾ 15 ಕೆಜಿ ತೂಕದ 150ಕ್ಕೂ ಹೆಚ್ಚು ಬಾಳೆಗೊನೆ ಸುಮಾರು ಒಂದೂವರೆ ಟನ್‍ನಷ್ಟು ಬಾಳೆಗೊನೆಗಳನ್ನು ಕಳ್ಳರು ಕಟಾವು ಮಾಡಿಕೊಂಡು ಪರಾರಿಯಾಗಿದ್ದಾರೆ.
ರೈತನಿಗೆ ವರ್ಷ, ದೊಣ್ಣೆಗೆ ನಿಮಿಷ ಎನ್ನುವ ಹಾಗೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಹಗಲು-ರಾತ್ರಿ ಕಷ್ಟಪಟ್ಟು ರೈತ ಯಾಲಕ್ಕಿ ಬಾಳೆ ಬೆಳೆದಿದ್ದಾನೆ. ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬಂತು ಎನ್ನುವಷ್ಟರಲ್ಲಿ ಕಿಡಿಗೇಡಿ ಕಳ್ಳರು ಹುಲುಸಾದ ಬಾಳೆ ಕದ್ದಿದ್ದಾರೆ. ಇದರಿಂದ ನೊಂದಿರುವ ರೈತ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ