ಚಿಕ್ಕಬಳ್ಳಾಪುರ: ನಂದಿ ಗಿರಿಧಾಮದಲ್ಲಿ 93 ಕೋಟಿ ರೂ. ವೆಚ್ಚದಲ್ಲಿ ರೋಪ್ ವೇ ನಿರ್ಮಾಣಕ್ಕೆ ಟೆಂಡರ್ ಆಗಿದ್ದು, ಮುಂದಿನ 10 ದಿನದಲ್ಲಿ ಇದಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು. ಮುಂದಿನ ಆರು ತಿಂಗಳಿನಲ್ಲಿ ರೋಪ್ ವೇ ಸಿದ್ಧವಾಗಲಿದೆ. ಈಗಾಗಲೇ ಇಶಾ ಫೌಂಡೇಷನ್ಗೆ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ರೋಪ್ ವೇ ಆದ ನಂತರ ನಂದಿ ಭಾಗ ಪ್ರವಾಸೋಧ್ಯಮಕ್ಕೆ ಪ್ರಸಿದ್ಧಿ ಪಡೆಯಲಿದೆ ಎಂದು ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ನಂದಿಯ ಶ್ರೀ ಭೋಗ ನಂದೀಶ್ವರ ದೇವಾಲಯಕ್ಕೆ ವಿಶೇಷ ಅನುದಾನ
ನಂದಿಗಿರಿಧಾಮದ ತಪ್ಪಲಿನಲ್ಲಿರುವ ಪುರಾಣ ಪ್ರಸಿದ್ಧ ನಂದಿ ಗ್ರಾಮದ ಶ್ರೀ ಭೋಗ ನಂದೀಶ್ವರ ದೇವಾಲಯಕ್ಕೆ ವಿಶೇಷ ಅನುದಾನ ಮಂಜೂರು ಮಾಡಲಾಗಿದೆ. ಈ ಅನುದಾನದಲ್ಲಿ ದೇವಾಲಯದ ಸುತ್ತಲಿನ ಕೋಟೆ ಅಭಿವೃದ್ಧಿ, ದೇವಾಲಯದಲ್ಲಿ ಅತ್ಯಾಧುನಿಕ ಬೆಳಕಿನ ವ್ಯವಸ್ಥೆಯ ಜೊತೆಗೆ ತ್ರೀಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಮಾಡುವುದರ ಮೂಲಕ ಪ್ರವಾಸೋದ್ಯಮಕ್ಕೆ ಪುಷ್ಠಿ ನೀಡಿದಂತಾಗಲಿದೆ ಎಂದರು. ಈ ಎಲ್ಲ ಅಭಿವೃದ್ಧಿಗಳಿಂದಾಗಿ ಚಿಕ್ಕಬಳ್ಳಾಪುರ ನವ ಬೆಂಗಳೂರು ಮಾದರಿಯಲ್ಲಿ ಅಭಿವೃದ್ಧಿ ಹೊಂದಲಿದೆ. ಇಂಟಿಗ್ರೇಟೆಡ್ ಟೌನ್ ಶಿಪ್ ಮಾಡಲು ಘೋಷಣೆ ಮಾಡಲಾಗಿದ್ದು, ಹೊಸ ಉಪಗ್ರಹ ನಗರವಾಗಿ, ಬೆಂಗಳೂರಿಗೆ ಸಮಾನವಾಗಿ ಚಿಕ್ಕಬಳ್ಳಾಪುರವನ್ನು ಅಭಿವೃದ್ಧಿಪಡಿಸಲು ತಯಾರಿ ನಡೆಸಲಾಗಿದೆ ಎಂದು ತಿಳಿಸಿದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ