Mahashivratri 2023: ಚಿಕ್ಕಬಳ್ಳಾಪುರ ಈಶಾ ಫೌಂಡೇಷನ್ – ಮೊದಲ ಬಾರಿ ಅದ್ದೂರಿ ಶಿವರಾತ್ರಿ ಆಚರಣೆ! ಪೂಜೆ, ಪ್ರವಚನ ಕಾರ್ಯಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ
Isha Foundation: ಬೃಹತ್ ಶಿವನ ಮುಂದೆ ಕುಳಿತು ಜಾಗರಣೆ ಮಾಡಬೇಕು, ಶಿವನಿಗೆ ವಿಶೇಷ ಪೂಜೆ ಪುನಸ್ಕಾರ ಅಭಿಷೇಕ ಮಾಡಿ ಶಿವನನ್ನು ಒಲೈಸಿಕೊಳ್ಳಬೇಕು ಎನ್ನುವವರಿಗೆ ಸ್ವತಃ ಈಶಾ ಫೌಂಡೇಷನ್ ನ ಸದ್ಗುರು ಸನ್ನಿಧಿ ಚಿಕ್ಕಬಳ್ಳಾಪುರದ ಅವಲಗುರ್ಕಿ ಬಳಿ ಉಚಿತ ಪೂಜೆಯ ಆಫರ್ ನೀಡಿದೆ.
ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಅವಲಗುರ್ಕಿ ಗ್ರಾಮದ ಬಳಿ ಸುಂದರ ಪ್ರಕೃತಿ ಸೊಬಗಿನಲ್ಲಿ 112 ಅಡಿಗಳ ಆದಿಯೋಗಿ ಪ್ರತಿಮೆ ಅನಾವರಣ ( Isha Foundation) ಮಾಡಿದ್ದೆ ತಡ, ರಾಜಧಾನಿ ಬೆಂಗಳೂರು ಜನರ ಚಿತ್ತ ಚಿಕ್ಕಬಳ್ಳಾಪುರದತ್ತ ಮೂಡಿದೆ. ಇನ್ನೇನು ಶಿವರಾತ್ರಿ ಹಬ್ಬಕ್ಕೆ (Mahashivratri 2023) ಕ್ಷಣಗಣನೆ ಆರಂಭವಾಗಿದೆ. ಇದ್ರಿಂದ 112 ಅಡಿಗಳ ಬೃಹತ್ ಶಿವನ ಮುಂದೆ ಕುಳಿತು ದ್ಯಾನ ಮಾಡಬೇಕು, ಭಕ್ತಿಯಿಂದ ದೇವರಲ್ಲಿ ಪ್ರಾರ್ಥನೆ ಮಾಡಬೇಕು, ಬೃಹತ್ ಶಿವನ ಮುಂದೆ ಕುಳಿತು ಜಾಗರಣೆ ಮಾಡಬೇಕು, ಶಿವನಿಗೆ ವಿಶೇಷ ಪೂಜೆ ಪುನಸ್ಕಾರ ಅಭಿಷೇಕ ಮಾಡಿ ಶಿವನನ್ನು ಒಲೈಸಿಕೊಳ್ಳಬೇಕು ಎನ್ನುವವರಿಗೆ ಸ್ವತಃ ಈಶಾ ಫೌಂಡೇಷನ್ ನ ಸದ್ಗುರು ಸನ್ನಿಧಿ ಚಿಕ್ಕಬಳ್ಳಾಪುರದ ಅವಲಗುರ್ಕಿ ಬಳಿ ಉಚಿತ ಪೂಜೆಯ ಆಫರ್ ನೀಡಿದೆ.
112 ಆದಿಯೋಗಿಯ ಬಳಿ ಈ ಸಲ ವಿಶೇತೆ ಏನು:
ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಬಳಿ 112 ಅಡಿಗಳ ಆದಿಯೋಗಿ ಪ್ರತಿಮೆ ಅನಾವರಣ ಮಾಡಿದ ನಂತರ ಇದೆ ಪ್ರಥಮ ಭಾರಿಗೆ ಶಿವಾರಾತ್ರಿ ಸಂಬ್ರಮಾಚರಣೆ ಬಂದಿದೆ. ಇದ್ರಿಂದ ಮೊದಲ ಶಿವರಾತ್ರಿಯಲ್ಲಿ ಆದಿಯೋಗಿಗೆ ಮಣ್ಣಿನ ದೀಪದ ಆರತಿ ಅರ್ಪಿಸಬಹುದು, ಯೋಗೇಶ್ವರ ಲಿಂಗಕ್ಕೆ ಅಭಿಷೇಕ ಮಾಡಬಹುದು, ನಾಗಪೂಜೆ ಯಲ್ಲಿ ಬಾಗಿಯಾಗಬಹುದು.
ಪೂಜೆಯಲ್ಲಿ ಭಾಗಿಯಾಗುವ ಸಮಯ ಹಾಗೂ ದಿನಾಂಕ:
ಮೊದಲ ಬಾರಿಗೆ ಅವಲಗುರ್ಕಿ ಗ್ರಾಮದ ಬಳಿ ಇರುವ ಸದ್ಗುರು ಸನ್ನಿಧಿಯಲ್ಲಿ ಯೋಗೇಶ್ವರ ಲಿಂಗಕ್ಕೆ ಮಣ್ಣಿನ ದೀಪಗಳ ಅರ್ಪಣೆ ಮಾಡಬಹುದು. ಫೆಬ್ರವರಿ 18 ರಂದು ಬೆಳಿಗ್ಗೆ 6 ರಿಂದ ಫೆಬ್ರವರಿ 19 ರ ರಾತ್ರಿ 8 ರವರೆಗೆ ಯೋಗೇಶ್ವರ ಲಿಂಗದ ಹೊರ ಗರ್ಭಗುಡಿಯಲ್ಲಿ ದೀಪವನ್ನು ಅರ್ಪಿಸಬಹುದು. ಫೆಬ್ರುವರಿ 18 ರಂದು ಬೆಳಿಗ್ಗೆ 8 ಗಂಟೆಯಿಂದ ಮರುದಿನ ರಾತ್ರಿ 8 ಗಂಟೆಯವರೆಗೆ ಸದ್ಗುರು ಸನ್ನಿಧಿಯಲ್ಲಿ ನಾಗಪೂಜೆ ಮತ್ತು ಯೋಗೇಶ್ವರ ಲಿಂಗ ಅಭಿಷೇಕವನ್ನು ಸಹ ಸಲ್ಲಿಸಬಹುದು ಎಂದು ಈಶಾ ಫೌಂಡೇಷನ್ ನ ಮಾಧ್ಯಮ ವಕ್ತಾರರು ತಿಳಿಸಿದ್ದಾರೆ.
ಮಹಾ ಶಿವರಾತ್ರಿ ಮಹಾ ಪೂಜೆಯಲ್ಲಿ ಭಾಗಿಯಾಗುವುದು ಹೇಗೆ:
ಚಿಕ್ಕಬಳ್ಳಾಪುರದ ಬಳಿ ಇರುವ ಈಶಾ ಫೌಂಡೇಷನ್ ನ 112 ಆದಿಯೋಗಿ ಶಿವರಾತ್ರಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗಲು ಎಲ್ಲಾ ವರ್ಗದ ಎಲ್ಲಾ ಜನರಿಗೆ ಉಚಿತ ಪ್ರವೇಶ ಇದೆ. ಎಲ್ಲರೂ ಎಲ್ಲಾ ಆಚರಣೆಗಳಲ್ಲಿ ಭಾಗವಹಿಸಬಹುದು. ಇದ್ರಿಂದ ಬೆಂಗಳೂರಿನ ಜನ ನೇರವಾಗಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಿ ಲಿಂಗಶೆಟ್ಟಿಪುರದ ರಸ್ತೆ, ಮುಷ್ಟೂರು ರಸ್ತೆ, ಜಾಲಾರಿ ನರಸಿಂಹಸ್ವಾಮಿ ದೇವಾಲಯ ರಸ್ತೆಗಳ ಮೂಲಕ ಈಶಾ ಫೌಂಡೇಷನ್ ನ 112 ಆದಿಯೋಗಿ ಬಳಿ ತೆರಳಿ ಶಿವನ ಕೃಪೆಗೆ ಪಾತ್ರರಾಗಬಹುದು.
ಆದಿಯೋಗಿ ಬಳಿ ಊಟ ತಿಂಡಿ ನೀರು ಮೂಲಭೂತ ಸೌಕರ್ಯಗಳು:
ಮಹಾಶಿವರಾತ್ರಿ ಪ್ರಯುಕ್ತ 112 ಅಡಿಯ ಆದಿಯೋಗಿ ಬಳಿ ಬರುವ ಶಿವನ ಭಕ್ತರಿಗೆ ಅನುಕೂಲ ಆಗುವ ದೃಷ್ಟಿಯಿಂದ ಕೆಲವು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಶೌಚಾಲಯ ಇದೆ. ಊಟದ ವ್ಯವಸ್ಥೆ ಇದ್ದು ಉಚಿತ ಕೊಡುವ ಬಗ್ಗೆ ಮಾಹಿತಿ ಇಲ್ಲ. ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಇದೆ. ಜನಸಾಗರದ ಮಧ್ಯೆ ಅಲ್ಲಿರುವ ನೀರು ಸಾಕಾಗಲ್ಲ. ಹಾಗಾಗಿ ಹೋಗುವಾಗ ನೀರಿನ ಬಾಟಲ್ ತೆಗೆದುಕೊಂಡು ಹೋಗಿ. ಹೋಟಲ್ ರೂಮ್, ಹೋಮ್ ಸ್ಟೇ, ಅಕ್ಕ ಪಕ್ಕ ರೇಸಾರ್ಟ್ ಲಾಡ್ಜಿಂಗ್ ಇಲ್ಲ.
ಸಂಚಾರ ದಟ್ಟಣೆ ಇರುತ್ತೆ:
ಬೆಂಗಳೂರು- ಚಿಕ್ಕಬಳ್ಳಾಪುರದ ಮೂಲಕ ಲಿಂಗಶೆಟ್ಟಿಪುರ ರಸ್ತೆ, ಮುಷ್ಟೂರು ರಸ್ತೆಯಲ್ಲಿ ಪ್ರಯಾಣ ಬೆಳೆಸಿದ್ರೆ ವಡ್ರೇಪಾಳ್ಯಾ ಗೇಟ್ ಬಳಿ ಕೂಡು ರಸ್ತೆಯಲ್ಲಿ ಸಾಗಬೇಕು, ಅಲ್ಲಿಂದ ಒಂದೆ ರಸ್ತೆಯಲ್ಲಿ ಈಶಾ ಆಶ್ರಮಕ್ಕೆ ತೆರಳಬೇಕು. ಒಂದೆ ಸಮಯದಲ್ಲಿ ಸಾವಿರಾರು ಕಾರುಗಳು ಬೈಕ್ ಗಳು ಮಿನಿ ಬಸ್ ಗಳು ಸಂಚರಿಸುತ್ತೇವೆ. ಇದ್ರಿಂದ ಎರಡು ಮೂರು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗುತ್ತೆ, ನಿಂತಲ್ಲೇ ದೇವರ ಧ್ಯಾನ ಮಾಡಬಹುದು! ಯಾವುದಕ್ಕೂ ಜಾಗರಣೆಗೆ ಹೊರಡುವಾಗ ಸಕಲ ಸಿದ್ದರಾಗಿ ಹೋಗಿ ಬನ್ನಿ, ಎಲ್ಲರಿಗೂ ಶಿವನ ಕೃಪೆ ದೊರೆಯಲಿ.
ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ