
ಚಿಕ್ಕಬಳ್ಳಾಪುರ, ಜನವರಿ 20: ಚಿಕ್ಕಬಳ್ಳಾಪುರ (Chikkaballapur) ನಗರದ ಹೊರವಲಯದ ಅಗಲಗುರ್ಕಿ ಬೈಪಾಸ್ ಸೇತುವೆ ಬಳಿ ಸೋಮವಾರ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಲೀಪರ್ ಕೋಚ್ ಬಸ್ ಒಂದು ಹೆದ್ದಾರಿಯ ಮಧ್ಯೆ ನಿಂತಿದ್ದ ಬೃಹತ್ ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಯುವಕ ಮೃತಪಟ್ಟಿದ್ದಾನೆ. 12 ಮಂದಿ ಗಾಯಗೊಂಡಿದ್ದಾರೆ. ಮೈಸೂರಿನಿಂದ ಬೆಂಗಳೂರಿನ ಮೂಲಕ ಮಂತ್ರಾಲಯಕ್ಕೆ ತೆರಳುತ್ತಿದ್ದ ಸುಗಮ ಟ್ರಾವೆಲ್ಸ್‌ಗೆ ಸೇರಿದ ಸ್ಲೀಪರ್ ಕೋಚ್ ಬಸ್ ತಡರಾತ್ರಿ ಸುಮಾರು 1 ಗಂಟೆ ವೇಳೆಗೆ ಅಪಘಾತಕ್ಕೀಡಾಯಿತು.
ಅಪಘಾತದ ವೇಳೆ ಬಸ್‌ನಲ್ಲಿದ್ದ ಪ್ರಯಾಣಿಕ ಶಿವಪ್ಪ ಎಂಬವರ ಕಾಲು ಬಸ್ ಹಾಗೂ ಕಂಟೈನರ್ ನಡುವೆ ಸಿಲುಕಿಕೊಂಡಿತ್ತು. ಮಾಹಿತಿ ಪಡೆದ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹರಸಾಹಸ ಪಟ್ಟು ಅವರನ್ನು ರಕ್ಷಿಸಿದರು. ಅಪಘಾತದಲ್ಲಿ ಬಸ್‌ನಲ್ಲಿದ್ದ 9 ಮಂದಿ ಪ್ರಯಾಣಿಕರು ಹಾಗೂ ಕಂಟೈನರ್ ಲಾರಿಯಲ್ಲಿದ್ದ ಮೂವರು ಸೇರಿ ಒಟ್ಟು 12 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು 108 ಆಂಬುಲೆನ್ಸ್ ಮೂಲಕ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಮೂವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇದರ ನಡುವೆ ಕಂಟೈನರ್ ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಬಿಹಾರ ಮೂಲದ 20 ವರ್ಷದ ಯುವಕ ಸುಹಾಸ್ ಎಂಬಾತ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕಂಟೈನರ್ ಚಾಲಕ ಲಾರಿಯ ಚಕ್ರದ ಕೆಳಗೆ ಕಲ್ಲು ಸಿಲುಕಿದೆಯೇ ಎಂಬುದನ್ನು ಪರಿಶೀಲಿಸುವಂತೆ ಸುಹಾಸ್‌ಗೆ ಸೂಚಿಸಿದ್ದ. ಆ ವೇಳೆ ಸುಹಾಸ್ ಲಾರಿಯ ಕೆಳಗೆ ಇಳಿದಿದ್ದಾಗ, ಅತಿವೇಗವಾಗಿ ಬಂದ ಬಸ್ ರಸ್ತೆ ಬದಿ ನಿಂತಿದ್ದ ಕಂಟೈನರ್ ಲಾರಿಯನ್ನು ಗಮನಿಸದೇ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸುಹಾಸ್ ಗಂಭೀರವಾಗಿ ಗಾಯಗೊಂಡು ಕೊನೆಗೆ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಬಸ್ಗಳಲ್ಲೂ ವಿಮಾನದ ಗಗನಸಖಿಯರ ರೀತಿ ಸಂದೇಶ! ಸಾರಿಗೆ ಇಲಾಖೆಯಿಂದ ಖಾಸಗಿ ಬಸ್ಗಳಿಗೆ ಹೊಸ ನಿಯಮ
ಅಪಘಾತದ ನಂತರ ಬಸ್‌ನಲ್ಲಿದ್ದ ಪ್ರಯಾಣಿಕರು ಪವಾಡಸದೃಶರಾಗಿ ಪ್ರಾಣಾಪಾಯದಿಂದ ಪಾರಾಗಿದ್ದು, ‘ಗುರು ರಾಯರ ಕೃಪೆಯಿಂದ ಜೀವ ಉಳಿಯಿತು’ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Published On - 1:32 pm, Tue, 20 January 26