ಚಿಕ್ಕಬಳ್ಳಾಪುರ, ಅಕ್ಟೋಬರ್ 25: ಒಂದು ಮದುವೆ ಮಾಡಿಕೊಂಡು ಸುಂದರ ಸಂಸಾರ ಮಾಡುವುದೇ ಈಗಿನ ಕಾಲದಲ್ಲಿ ಕಷ್ಟ ಎನ್ನುತ್ತಾರೆ. ಇಂಥಹದ್ದರಲ್ಲಿ ಇಲ್ಲೊಬ್ಬ ಭೂಪ ಒಂದಲ್ಲ, ಎರಡಲ್ಲ ಮೂರು ಸಾಕಾಗಲ್ಲವೆಂದು ನಾಲ್ಕು ಮದುವೆ (marriage) ಯಾಗಿ ಆಕೆಯ ಜೊತೆಗೂ ಸಂಸಾರ ಮಾಡದೇ ಬಿಟ್ಟ ಪ್ರಸಂಗ ನಡೆದಿದೆ. ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ಕಲ್ಯಾಣದುರ್ಗದ ವಾಸಿ ಸುಬ್ರಮಣಿ ಎನ್ನುವ ಆಸಾಮಿ 4 ಮದುವೆಯಾಗಿದ್ದನಂತೆ. 3 ಮದುವೆ ಮಾಡಿಕೊಂಡ ನಂತರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಪರಗೋಡು ಗ್ರಾಮಪಂಚಾಯ್ತಿ ವ್ಯಾಪ್ತಿಯ ಕಾಶಾಪುರ ಗ್ರಾಮದ 21 ವರ್ಷದ ಶೋಭ ಎನ್ನುವಾಕೆಯನ್ನು ಮದುವೆ ಮಾಡಿಕೊಂಡಿದ್ದಾನೆ.
ಜನವರಿ-2021 ರಲ್ಲಿ ಶೋಭಾಳನ್ನು ಮದುವೆ ಮಾಡಿಕೊಂಡಿದ್ದ ಆಂದ್ರ ಮೂಲದ ಸುಬ್ರಮಣಿ 3 ತಿಂಗಳು ಕಾಲ ಪತ್ನಿ ಶೋಭಾಳ ತವರು ಮನೆಯಲ್ಲೇ ಸಂಸಾರ ಹೂಡಿದ್ದ. ನಂತರ 5 ಲಕ್ಷ ರೂಪಾಯಿ ವರದಕ್ಷಿಣೆ ನೀಡುವಂತೆ ಪತ್ನಿ ಸೇರಿದಂತೆ ಅತ್ತೆ, ಮಾವನಿಗೆ ಕಿರುಕುಳ ನೀಡಿದ್ದಾನಂತೆ. ಇದರಿಂದ ಬೇಸತ್ತ ಶೋಭಾಳ ತಂದೆ-ತಾಯಿ ಒಂದೂವರೆ ಲಕ್ಷ ರೂಪಾಯಿ ವರದಕ್ಷಿಣಿ ನೀಡಿ, ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: Viral video: ಕಾಂಗ್ರೆಸ್ ಮುಖಂಡ ಶ್ರೀನಿವಾಸಪುರದ ಶ್ರೀನಿವಾಸ ಕೊಲೆ ಪ್ರಕರಣ: ರಾಜಿ ಪಂಚಾಯ್ತಿ ವಿಡಿಯೋ ವೈರಲ್
ಗಂಡನ ಮನೆಗೆ ಹೋಗಿದ್ದ ಶೋಭಾಳಿಗೆ ಆಕೆಯ ಗಂಡ ಸುಬ್ರಮಣಿ, ಅತ್ತೆ ಜಯಮ್ಮ, ಮಾವ ವೆಂಕಟರಾಯುಡು ಪ್ರತಿದಿನ ಬೆಳಗಾದರೆ ಸಾಕು ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದರಂತೆ. ಪ್ರತಿದಿನ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರಂತೆ ಕೊನೆಗೆ ಮನೆಗೆ ಬಂದ ಅತ್ತೆ-ಮಾವನ ಜೊತೆ ಮಗಳನ್ನು ಆಕೆಯ ತವರುಮನೆಗೆ ಕಳುಹಿಸಿ ವರದಕ್ಷಿಣೆಗಾಗಿ ಪೀಡಿಸಿದ್ದರಂತೆ.
ಗಂಡ, ಅತ್ತೆ, ಮಾವನ ವರ್ತನೆಯಿಂದ ನೊಂದ ಶೋಭಾ ಚಿಕ್ಕಬಳ್ಳಾಪುರ ಮಹಿಳಾಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ತನ್ನ ಗಂಡ ಈಗಾಗಲೇ ಲಕ್ಷ್ಮೀ ಎನ್ನುವಾಕೆ ಸೇರಿದಂತೆ ಇನ್ನಿತರೆ ಇಬ್ಬರನ್ನು ಮದುವೆಯಾಗಿದ್ದು, 3 ಮದುವೆ ವಿಚಾರ ಮುಚ್ಚಿಟ್ಟು 4ನೇ ಮದುವೆ ನನ್ನನ್ನು ಮಾಡಿಕೊಂಡಿದ್ದಾನೆ. ನನಗೆ ನ್ಯಾಯ ಕೊಡಿಸಿಕೊಡುವಂತೆ ದೂರು ನೀಡಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 1860, 498ಎ, 504, 420, 34 ಸೇರಿದಂತೆ ವರದಕ್ಷಿಣೆ ನಿಷೇದ ಕಾಯ್ದೆ-1961ರಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.