ಲೋಕಸಭೆ ಚುನಾವಣೆ: ಏಪ್ರಿಲ್ 25, 26ರಂದು ನಂದಿ ಗಿರಿಧಾಮಕ್ಕೆ ಪ್ರವೇಶ ನಿರ್ಬಂಧ

| Updated By: Ganapathi Sharma

Updated on: Apr 19, 2024 | 9:05 AM

ಲೋಕಸಭೆ ಚುನಾವಣೆ ರಜೆ ಮತ್ತು ವಾರಾಂತ್ಯ ಒಟ್ಟಿಗೆ ಬರುವುದರಿದ ಮತದಾನ ಪ್ರಮಾಣ ಕಡಿಮೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಚುನಾವಣಾ ಆಯೋಗ ಮತ್ತು ಆಯಾ ಜಿಲ್ಲಾಡಳಿತಗಳ ಮೇಲಿದೆ. ಇದೇ ಕಾರಣಕ್ಕೆ ಏಪ್ರಿಲ್ 25, 26ರಂದು ಹೋಂ ಸ್ಟೇ, ರೇಸಾರ್ಟ್ ಬುಕಿಂಗ್​ಗೆ ಅವಕಾಶ ನೀಡದಂತೆ ಚಿಕ್ಕಮಗಳೂರು ಜಿಲ್ಲಾಡಳಿತ ಇತ್ತೀಚೆಗೆ ಸೂಚನೆ ನೀಡಿತ್ತು. ಇದೀಗ ಏಪ್ರಿಲ್ 25, 26ರಂದು ನಂದಿ ಗಿರಿಧಾಮಕ್ಕೆ ಪ್ರವೇಶ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಲೋಕಸಭೆ ಚುನಾವಣೆ: ಏಪ್ರಿಲ್ 25, 26ರಂದು ನಂದಿ ಗಿರಿಧಾಮಕ್ಕೆ ಪ್ರವೇಶ ನಿರ್ಬಂಧ
ನಂದಿ ಗಿರಿಧಾಮ
Follow us on

ಚಿಕ್ಕಬಳ್ಳಾಪುರ, ಏಪ್ರಿಲ್ 19: ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಏಪ್ರಿಲ್ 25 ಮತ್ತು 26ರಂದು ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿಧಾಮ (Nandi Hills) ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. 25ರ ಸಂಜೆ 6ರಿಂದ 26ರ ರಾತ್ರಿ 8ರ ವರೆಗೂ ನಿರ್ಬಂಧ ಇರಲಿದೆ. ಈ ದಿನಗಳಲ್ಲಿ ನಂದಿ ಗಿರಿಧಾಮದಲ್ಲಿರುವ ಅತಿಥಿ ಗೃಹಗಳಿಗೂ ಬೀಗ ಹಾಕಲಾಗುವುದು ಎಂದು ಚಿಕ್ಕಬಳ್ಳಾಪುರ ಡಿಸಿ (Chikkaballapur DC) ಆದೇಶ ತಿಳಿಸಿದೆ.

ಲೋಕಸಭೆ ಚುನಾವಣೆಯ 2ನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣದ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ರಾಜ್ಯದಲ್ಲಿ 14 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದೆ.

ಏಪ್ರಿಲ್ 26 ಶುಕ್ರವಾರ ಬರುತ್ತದೆ. ಲೋಕಸಭೆ ಚುನಾವಣೆ ಪ್ರಯುಕ್ತ ಅಂದು ಸರ್ಕಾರಿ ರಜೆ ಘೋಷಿಸಲಾಗಿದೆ. ಖಾಸಗಿ ಕಂಪನಿಗಳೂ ಸಹ ರಜೆ ನೀಡುವುದು ಕಡ್ಡಾಯ ಎಂದು ಚುನಾವಣಾ ಆಯೋಗ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೆ, ಮತದಾನದ ದಿನ ಶುಕ್ರವಾರ ಬರುತ್ತದೆ. ಮರುದಿನ ಶನಿವಾರ ಹಾಗೂ ಅದರ ಮರುದಿನ ಭಾನುವಾರ ಆದ್ದರಿಂದ ಸತತ ಮೂರು ದಿನ ರಜೆ ಎಂದು ಜನ ಪ್ರವಾಸಕ್ಕೆ ಯೋಜನೆ ಮಾಡಿದರೆ ಮತದಾನದ ಪ್ರಮಾಣ ಕಡಿಮೆಯಾಗಲಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಚಿಕ್ಕಬಳ್ಳಾಪುರ ಡಿಸಿ ನಂದಿ ಗಿರಿಧಾಮಕ್ಕೆ ಪ್ರವೇಶ ನಿರ್ಬಂಧಿಸಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಏಪ್ರಿಲ್ 25 ಮತ್ತು 26 ರಂದು ಹೋಂ ಸ್ಟೇ, ರೇಸಾರ್ಟ್ ಬುಕಿಂಗ್​​ಗೆ ಅವಕಾಶ ನೀಡದಂತೆ ಚಿಕ್ಕಮಗಳೂರು ಜಿಲ್ಲೆಯ ಹೋಂ ಸ್ಟೇ, ರೇಸಾರ್ಟ್ ಮಾಲೀಕರಿಗೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಜನರು ಪ್ರವಾಸ ಬರುವುದನ್ನು ತಪ್ಪಿಸಲು ಮತ್ತು ಮತದಾನದ ಪ್ರಮಾಣ ಹೆಚ್ಚಿಸುವ ಸಲುವಾಗಿಯೇ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ: ಏಪ್ರಿಲ್ 25, 26 ರಂದು ಚಿಕ್ಕಮಗಳೂರಿನ ಹೋಂ ಸ್ಟೇ, ರೇಸಾರ್ಟ್​ಗಳಲ್ಲಿ ಸಿಗಲ್ಲ ಬುಕಿಂಗ್

ಇಂದು ಮೊದಲ ಹಂತದ ಮತದಾನ

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು ಆರಂಭಗೊಂಡಿದ್ದು, 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಕೇಂದ್ರದ 8 ಮಂದಿ ಸಚಿವರ ಭವಿಷ್ಯವೂ ಇಂದು ಇವಿಎಂ ಸೇರಲಿದೆ. ಜೂನ್ 1 ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಜೂನ್ 4ಕ್ಕೆ ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟಗೊಳ್ಳಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:01 am, Fri, 19 April 24