ಚಿಕ್ಕಬಳ್ಳಾಪುರ: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಿಲ್ಲಿ ಒಂದಾದ ಪದ್ಮಶ್ರೀ (Padma shri)ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ರಾಜ್ಯದ ಬಡ ದಲಿತ ಖ್ಯಾತ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರಿಗೆ ನೀಡಿ ಗೌರವಿಸಿದೆ.
ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಪಿಂಡಿಪಾಪನಹಳ್ಳಿ ಗ್ರಾಮದ ನಿವಾಸಿ ದಲಿತ ಮುನಿವೆಂಕಟಪ್ಪ (Munivenkatappa). 77 ವರ್ಷದ ಮುನಿವೆಂಕಟಪ್ಪನವರ ತಂದೆಯ ಹೆಸರು ಲೇಟ್ ಪಾಪಣ್ಣ, ತಾಯಿ ಲೇಟ್ ಮುನಿಗಂಗಮ್ಮ. ಮುನಿವೆಂಕಟಪ್ಪ ಅವರಿಗೆ 17 ವರ್ಷವಿದ್ದಾಗ ತಂದೆ ಪಾಪಣ್ಣ ಅಪಘಾತದಲ್ಲಿ ಮೃತಪಟ್ಟರು. 7 ವರ್ಷಗಳ ಹಿಂದೆ ತಾಯಿ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಮುನಿವೆಂಕಟಪ್ಪ 4ನೇ ತರಗತಿವರೆಗೆ ಮಾತ್ರ ವಿದ್ಯಾರ್ಹತೆ ಮಾಡಿದ್ದು ಕನ್ನಡ ಓದಲು ಬರೆಯಲು ಬರುತ್ತೆ.
ಮುನಿವೆಂಕಟಪ್ಪ ಅವರಿಗೆ 17 ವರ್ಷವಿದ್ದಾಗ ತಂದೆ ಪಾಪಣ್ಣ ಅಪಘಾತದಲ್ಲಿ ಮೃತಪಡುತ್ತಾರೆ. ಆಗ ಗ್ರಾಮದಲ್ಲಿ ತಮಟೆ ಬಾರಿಸುವವರು ಯಾರು ಇರಲ್ಲ. ಇದರಿಂದ ಗ್ರಾಮಸ್ಥರ ಮನವಿ ಮೇರಗೆ ಮುನಿವೆಂಕಟಪ್ಪ ತಮಟೆ ಬಾರಿಸಲು ಆರಂಭ ಮಾಡಿದರು. ನಂತರ ಅದನ್ನೇ ವೃತ್ತಿಯನ್ನಾಗಿಸಿಕೊಂಡು ಅಚ್ಚುಕಟ್ಟಾಗಿ ತಾಳಕ್ಕೆ ತಕ್ಕಂತೆ ತಮಟೆ ಬಾರಿಸುವುದನ್ನು ಕಲಿಯುತ್ತಾರೆ. ನಂತರ 13 ಜನರ ತಂಡ ಕಟ್ಟಿಕೊಂಡು ಜಾತ್ರೆ, ಉತ್ಸವ, ಸಭೆ, ಸಮಾರಂಭದಲ್ಲಿ ತಮಟೆ ಬಾರಿಸುತ್ತಾರೆ. ಇದನ್ನು ಗಮನಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿವಿಧ ಉತ್ಸವಗಳಲ್ಲಿ ಮುನಿವೆಂಕಟಪ್ಪಗೆ ಅವಕಾಶ ನೀಡುತ್ತದೆ.
ಮುನಿವೆಂಕಟಪ್ಪನವರ ತಮಟೆ ವಾದ್ಯ ಕೋಲಾರ, ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಪೇಮಸ್ ಆಯಿತು. ರಾಜ್ಯ ಸರ್ಕಾರ ಆಯೋಜನೆ ಮಾಡುವ ಉತ್ಸವಗಳಾದ ಮೈಸೂರು ದಸರಾ, ಇಲಾಖೆಯಿಂದ ನಡೆಸುವ ರಾಷ್ಟ್ರೀಯ ಕ್ರೀಡಾಕೂಟ, ಜಿಲ್ಲಾ ಉತ್ಸವಗಳಲ್ಲಿ ಮತ್ತು ತಮಿಳುನಾಡು ಆಂಧ್ರ ಪ್ರದೇಶಗಳಲ್ಲಿ ತಮಟೆ ಪ್ರದರ್ಶನ ಮಾಡಲಾಗಿದೆ.
2014ರಲ್ಲಿ ಅಮೇರಿಕಾದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ತಮ್ಮ ತಮಟೆ ಸದ್ದು ಪ್ರದರ್ಶನ ಮಾಡಿದರು. 2015ರಲ್ಲಿ ಅಮೇರಿಕಾದಲ್ಲಿ ನಡೆದ ನಾವಿಕ ಸಮ್ಮೇಳನದಲ್ಲಿಯೂ ತಮಟೆ ಸದ್ದು ಮಾಡಿದ್ದು. ನಂತರ ಜಪಾನ್ ಸೇರಿದಂತೆ ವಿವಿಧ ದೇಶಗಳಲ್ಲಿ ಮುನಿವೆಂಕಟಪ್ಪ ತಮ್ಮ ತಮಟೆ ವಾದ್ಯ ಪ್ರದರ್ಶನ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಕರ್ನಾಟಕ ಸರಕಾರ 1992ರಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರಿವಿಸಿದೆ. ಇತ್ತ ಹಂಪಿ ವಿಶ್ವವಿದ್ಯಾಲಯ ಮುನಿವೆಂಕಟಪ್ಪನವರಿಗೆ ನಾಡೋಜ ಪ್ರಶಸ್ತಿ ನೀಡಿ ಗೌರಿವಿಸಿದೆ. ರಾಜ್ಯದ ವಿವಿಧ ಸಂಘ ಸಂಸ್ಥೆಗಳು ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರಿವಿಸಿವೆ.
ತಮ್ಮ ತಮಟೆ ಕಲೆಯನ್ನು ತಮ್ಮ ಬದುಕನ್ನಾಗಿ ಮಾಡಿಕೊಂಡಿದ್ದ ಮುನಿವೆಂಕಟಪ್ಪನವರು, ಕಳೆದ 60 ವರ್ಷಗಳಿಂದ ತಮಟೆ ಕಲೆಯನ್ನು ಪ್ರದರ್ಶನ ಮಾಡುತ್ತಾ ಬಂದಿದ್ದಾರೆ. ಈಗಾಗಲೆ ರಾಜ್ಯಮಟ್ಟದ ವಿವಿಧ ಪ್ರಶಸ್ತಿಗಳು ಬಂದಿವೆ. ಮುನಿವೆಂಕಟಪ್ಪನವರಿಗೆ ಪದ್ಮಶ್ರೀ ಪ್ರಶಸ್ತಿಯ ಬಗ್ಗೆ ಅಷ್ಟೇನು ಮಾಹಿತಿ ಇಲ್ಲ. ರಾಜ್ಯ ಸರ್ಕಾರವೆ ಕೇಂದ್ರ ಸರ್ಕಾರಕ್ಕೆ ಮುನಿವೆಂಕಟಪ್ಪನವರ ಹೆಸರನ್ನು ಶಿಪಾರಸ್ಸು ಮಾಡಿತ್ತಂತೆ. ಇಂದು ತಮಗೆ ಪ್ರಶಸ್ತಿ ಬಂದಿರನ್ನು ಕೇಳಿ ಮುನಿವೆಂಕಟಪ್ಪನವರು ಹರ್ಷ ವ್ಯಕ್ತಪಡಿಸಿದ್ದಾರೆ.
77 ವರ್ಷದ ಮುನಿವೆಂಕಟಪ್ಪನವರು ತಮ್ಮ ಜೊತೆ ತಮ್ಮ ಕಲೆ ಸಾಯಬಾರದು, ಅದನ್ನು ಯುವ ಪೀಳಿಗೆ ಮುಂದುವರೆಸಿಕೊಂಡು ಹೋಗಬೇಕು. ಅದಕ್ಕೆ ಆಸಕ್ತಿ ಇರುವ ಯುವಕರಿಗೆ ತರಬೇತಿ ನೀಡುವ ಆಸೆ ವ್ಯಕ್ತಪಡಿಸಿದ್ದಾರೆ. ತಮ್ಮ ಗ್ರಾಮದಲ್ಲಿ ತರಬೇತಿ ನಡೆಸುವ ಆಸೆ ವ್ಯಕ್ತಪಡಿಸಿದ್ದು ಸರ್ಕಾರ ಸಹಕಾರ ನೀಡಬೇಕಿದೆ.
ವರದಿ-ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಫುರ
Published On - 6:59 am, Thu, 26 January 23