ಚಿಕ್ಕಬಳ್ಳಾಪುರ ಉತ್ಸವದಲ್ಲಿ ತನುಜಾ ಚಿತ್ರದ ಟ್ರೈಲರ್ ಪ್ರಸಾರ; ಸಿನಿಮಾದಲ್ಲಿ ಸಚಿವ ಸುಧಾಕರ್, ಮಾಜಿ ಸಿಎಂ ಬಿಎಸ್​ವೈ ಅಭಿನಯ

| Updated By: Rakesh Nayak Manchi

Updated on: Jan 13, 2023 | 9:29 PM

ಆರೋಗ್ಯ ಸಚಿವ ಸುಧಾಕರ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಭಿನಯಿಸಿದ ತನುಜಾ ಚಿತ್ರದ ಟ್ರೈಲರ್ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಈ ಟ್ರೈಲರ್ ಅನ್ನು ಇಂದು ಚಿಕ್ಕಬಳ್ಳಾಪುರ ಉತ್ಸವದಲ್ಲಿ ಪ್ರಸಾರ ಮಾಡಲಾಯಿತು.

ಚಿಕ್ಕಬಳ್ಳಾಪುರ ಉತ್ಸವದಲ್ಲಿ ತನುಜಾ ಚಿತ್ರದ ಟ್ರೈಲರ್ ಪ್ರಸಾರ; ಸಿನಿಮಾದಲ್ಲಿ ಸಚಿವ ಸುಧಾಕರ್, ಮಾಜಿ ಸಿಎಂ ಬಿಎಸ್​ವೈ ಅಭಿನಯ
ತನುಜಾ ಸಿನಿಮಾ
Follow us on

ಚಿಕ್ಕಬಳ್ಳಾಪುರ: ನೈಜ ಘಟನೆಯಾಧಾರಿತವಾಗಿ ನಿರ್ಮಾಣಗೊಂಡಿರುವ ತನುಜಾ ಸಿನಿಮಾ (Tanuja Film) ಸ್ಯಾಂಡಲ್​ವುಡ್​ನಲ್ಲಿ ಸದ್ದು ಮಾಡುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾಗಿದ್ದ ಇದರ ಟ್ರೈಲರ್ (Tanuja Film Trailer) ಅನ್ನು ಇಂದು ಚಿಕ್ಕಬಳ್ಳಾಪುರ ಉತ್ಸವದಲ್ಲಿ ಪ್ರಸಾರ ಮಾಡಲಾಯಿತು. ಈ ಸಿನಿಮಾದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Dr.K.Sudhakar) ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S.Yediyurappa) ಅವರು ಅಭಿನಯಿಸಿದ್ದಾರೆ. ಕೊವಿಡ್​ ಸಂದರ್ಭದಲ್ಲಿ ನೀಟ್​ ಪರೀಕ್ಷೆ (NEET Exam) ಬರೆಯಲು ಸುಮಾರು 350ಕಿಮೀ ದೂರ ಪ್ರಯಾಣ ಮಾಡಿ ಗಮನ ಸೆಳೆದಿದ್ದ ಹುಡುಗಿಯ ನೈಜ ಕಥೆ ಸಿನಿಮಾದಲ್ಲಿ ಮೂಡಿ ಬರುತ್ತಿದೆ.

ಶಿವಮೊಗ್ಗ ಜಿಲ್ಲೆಯ ತನುಜಾ ಕೊರೊನಾ ಕಾರಣದಿಂದ ನೀಟ್ ಪರೀಕ್ಷೆಗೆ ಹಾಜರಾಗಿರಲಿಲ್ಲ. 2020ರ ಸೆಪ್ಟೆಂಬರ್​ 13ರಂದು ನೀಟ್​ ಪರೀಕ್ಷೆ ನಡೆದಿತ್ತಾದರೂ ಅದಾಗಲೇ ತನುಜಾರ ಮನೆ ಇರುವ ಪ್ರದೇಶವನ್ನ ಕಂಟೈನ್​​ಮೆಂಟ್ ವಲಯವನ್ನಾಗಿ ಗುರುತಿಸಲಾಗಿತ್ತು. ಅಷ್ಟೇ ಅಲ್ಲ, ತನುಜಾರಲ್ಲೂ ಕೊರೊನಾ (corona virus) ಲಕ್ಷಣಗಳು ಕಾಣಿಸಿಕೊಂಡಿದ್ದವು.

ಮೊದಲ ಸಲ ಪರೀಕ್ಷೆ ಕೈ ತಪ್ಪಿದ್ದಕ್ಕೆ ಬೇಸರಗೊಂಡಿದ್ದ ತನುಜಾಗೆ, ಎನ್​ಟಿಎ ಎರಡನೇ ಬಾರಿಗೆ ನೀಟ್​ ಪರೀಕ್ಷೆ ನಡೆಸಲು ಒಪ್ಪಿದಾಗ ತುಂಬ ಖುಷಿಯಾಗಿತ್ತು. ಆದರೆ ಹೀಗೆ ಎರಡನೇ ಬಾರಿ ಪರೀಕ್ಷೆ ಬರೆಯಬೇಕು ಎಂದರೆ ಕೊವಿಡ್​-19 ಸಂಬಂಧಿತ ವರದಿ, ದಾಖಲೆಯನ್ನು ಮೇಲ್​ ಮಾಡಲು ಎನ್​ಟಿಎ ತಿಳಿಸಿತ್ತು. ಆದರೆ ಅಲ್ಲೂ ಸಹ ತನುಜಾರಿಗೆ ಹಿನ್ನಡೆಯಾಗಿತ್ತು. ನೆಟ್​ವರ್ಕ್​ ಸಮಸ್ಯೆಯಿಂದಾಗಿ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ: Kamal Haasan: ‘ನಿಮ್ಮ ಮುಂದಿನ ಚಿತ್ರದಿಂದ ಕಾಂತಾರ ಸಿನಿಮಾ ದಾಖಲೆ ಮುರಿಯಿರಿ’; ರಿಷಬ್​ ಶೆಟ್ಟಿಗೆ ಕಮಲ್​ ಹಾಸನ್​ ಸಲಹೆ

ಈ ವಿಷಯವನ್ನು ತನುಜಾ ನೋವಿನಿಂದ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದು ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಸಚಿವ ಸುಧಾಕರ್​ ಅವರ ಗಮನಕ್ಕೂ ಬಂದು, ಇವರಿಬ್ಬರೂ ಸೇರಿ ಎನ್​ಟಿಎ ತಾಂತ್ರಿಕ ನಿರ್ದೇಶಕರ ಜತೆ ಮಾತುಕತೆ ನಡೆಸಿದ್ದರು. ಈ ಮೂಲಕ ತನುಜಾ ನೀಟ್ ಪರೀಕ್ಷೆ ಬರೆದು ಯಶಸ್ವಿಯಾಗಿ ಎಂಬಿಬಿಎಸ್​ ಸೀಟು ಗಿಟ್ಟಿಸಿಕೊಂಡಿದ್ದರು. ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ಪ್ರದೀಪ್ ಈಶ್ವರ್ ಅವರ ಸಹಕಾರವೂ ಇದರಲ್ಲಿದೆ.

ಫ್ಯಾಶನ್ ಶೋ ನೋಡಿ ಮೆಚ್ಚಿದ ಡಾರ್ಲಿಂಗ್ ಜೋಡಿ

ನಟ ಡಾರ್ಲಿಂಗ್ ಕೃಷ್ಣ ಮತ್ತು ಇವರ ಪತ್ನಿಯೂ ಆಗಿರುವ ನಟಿ ಮಿಲನ ನಾಗರಾಜ್ ಅವರು ಚಿಕ್ಕಬಳ್ಳಾಪುರ ಉತ್ಸವದಲ್ಲಿ ಭಾಗಿಯಾದರು. ಉತ್ಸವದಲ್ಲಿ ಇಂದು ನಡೆದ ಫ್ಯಾಷನ್ ಶೋ ನೋಡಿದ ಡಾರ್ಲಿಂಗ್ ಜೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಇಲ್ಲಿ ಭೇಟಿ ನೀಡಿರುವುದು ತುಂಬಾ ಖುಷಿಯಾಯ್ತು. ಒಳ್ಳೆ ಅನುಭವ ಎಂದು ಕೃಷ್ಣ ಮತ್ತು ಮಿಲನ ನಾಗರಾಜ್ ಹೇಳಿದರು.

ಚಿಕ್ಕಬಳ್ಳಾಪುರ ಉತ್ಸವದಲ್ಲಿ ಕಾಂತಾರ ಸಿನಿ ವೈಭವ ಕಾರ್ಯಕ್ರಮ ಆರಂಭಗೊಂಡಿದ್ದು, ಮುಖ್ಯ ಅತಿಥಿಗಳಾಗಿ ನಟ ರಿಷಬ್ ಶೆಟ್ಟಿ ಹಾಗೂ ಸಪ್ತಮಿಗೌಡ ಆಗಮಿಸಿದ್ದಾರೆ. ಕಾಂತಾರ ಸಿನಿಮಾ ಹಾಸ್ಯ ಕಲಾವಿದರಿಂದ ಕಾಮಿಡಿ ಶೋ ಕೂಡ ನಡೆಯಲಿದೆ. ಇಂದಿನ ಕಾರ್ಯಕ್ರಮದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕೂಡ ಆಗಮಿಸಿದ್ದಾರೆ. ಚಿಕ್ಕಬಳ್ಳಾಪುರ ನಗರದ ಸರ್.ಎಂ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಇದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:24 pm, Fri, 13 January 23