ಕಾಲೇಜು ವಿದ್ಯಾರ್ಥಿಗಳ ಜೊತೆ ಸಂವಾದ, ಸಚಿವ ಸುಧಾಕರ್ಗೆ ಮುಜುಗರ ತಂದ ಕೆಲವು ಪ್ರಶ್ನೆಗಳು
ಚಿಕ್ಕಬಳ್ಳಾಪುರ ನಗರದ ಎಸ್ಜೆಸಿಐಟಿ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಸಂವಾದ ನಡೆಸಿದರು. ಚಿಕ್ಕಬಳ್ಳಾಪುರ ಉತ್ಸವ ಪ್ರಯುಕ್ತ ಈ ಸಂವಾದ ನಡೆಸಿದರು.
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಉತ್ಸವ (Chikkaballapura Festival) ಪ್ರಯುಕ್ತ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ (Dr.K.Sudhakar) ಅವರು ಕಾಲೇಜು ವಿದ್ಯಾರ್ಥಿಗಳ ಜೊತೆ ಚಿಕ್ಕಬಳ್ಳಾಪುರ ನಗರದ ಎಸ್ಜೆಸಿಐಟಿ ಕಾಲೇಜಿನಲ್ಲಿ (SJCIT College) ಸಂವಾದ ನಡೆಸಿದ್ದು ವಿಶೇಷವಾಗಿತ್ತು. ಸಚಿವರಿಗೆ ಕೆಲವು ಪ್ರಶ್ನೆಗಳು ಮುಜುಗರ ತಂದರೆ ಇನ್ನೂ ಕೆಲವು ಪ್ರಶ್ನೆಗಳಿಗೆ ಸಚಿವರು ಉತ್ತರಿಸಲು ಗಾಢ ಚಿಂತೆ ಮಾಡಬೇಕಾಯಿತು. ವಿದ್ಯಾರ್ಥಿಗಳು ಹಾಗೂ ಸಚಿವರ ಮಧ್ಯೆ ನಡೆದ ಸಂವಾದ ಇಲ್ಲಿದೆ.
ಚಿಕ್ಕಬಳ್ಳಾಪುರದಿಂದ ಈವರೆಗೆ ಯಾರೂ ಮುಖ್ಯಮಂತ್ರಿಯಾಗಿಲ್ಲ, ಭವಿಷ್ಯದಲ್ಲಿ ನೀವು ಮುಖ್ಯಮಂತ್ರಿಯಾದರೆ ಏನು ಸಿದ್ಧತೆ ಮಾಡಿಕೊಂಡಿದ್ದೀರಿ? ಎಂದು ವಿದ್ಯಾರ್ಥಿನಿಯೊಬ್ಬರು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಡಾ.ಕೆ.ಸುಧಾಕರ್, ಮುಖ್ಯಮಂತ್ರಿ ಹುದ್ದೆ ನಿಭಾಯಿಸಲು ಸಿದ್ಧತೆ ಅಗತ್ಯವಿಲ್ಲ, ನಿಮ್ಮ ಆಶೀರ್ವಾದದಿಂದ ಶಾಸಕನಾಗಿ, ಈಗ ರಾಜ್ಯದ ಆರೋಗ್ಯ ಸಚಿವನಾಗಿದ್ದೇನೆ. ಯಾವುದೇ ಹುದ್ದೆ ನಿಭಾಯಿಸುವ ಸಾಮರ್ಥ್ಯ ಇದೆ ಎಂದು ತಿಳಿದಿರುವುದಾಗಿ ಹೇಳಿದರು.
ಅಲ್ಲದೆ ಯಾವುದೇ ಕೆಲಸ ಮಾಡುವಾಗ ಪ್ರೀತಿಯಿಂದ, ಬದ್ಧತೆ ಮತ್ತು ಜವಾಬ್ದಾರಿಯಿಂದ ಮಾಡುತ್ತೇನೆ, ನಿಮ್ಮ ಆಶೀರ್ವಾದ ಮತ್ತು ಭಗವಂತನ ಕೃಪೆ ಇದ್ದರೆ, ಮುಂದೆ ದೊಡ್ಡ ಅವಕಾಶ ಸಿಕ್ಕಿದರೆ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ. ಆದರೆ ನಾನು ಸ್ಪರ್ಧೆಯಲ್ಲಿಲ್ಲ, ಅವಕಾಶ ಸಿಕ್ಕಾಗ ಅದಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಜ.15 ಕ್ಕೆ ಚಿಕ್ಕಬಳ್ಳಾಪುರದಲ್ಲಿ ಯೋಗಥಾನ್! ಗಿನ್ನಿಸ್ ವಿಶ್ವ ದಾಖಲೆ ಸೃಷ್ಟಿಸಲು ವೇದಿಕೆ ಸಜ್ಜು- ಜಿಲ್ಲಾಧಿಕಾರಿ
ನೀವು ಶಾಸಕರು, ಸಚಿವರಾಗಿ ಪರಿಚಯ ಇದೆ, ನಿಮ್ಮ ವ್ಯಕ್ತಿತ್ವ ಏನು? ಎಂದು ವಿದ್ಯಾರ್ಥಿಯೊಬ್ಬರು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಸಚಿವರು, ನಾನು ಸಾರ್ವಜನಿಕ ಜೀವನಕ್ಕೆ ಬಂದು 10 ವರ್ಷ ಆಯಿತು. ನಿಮಗೆ ಗೊತ್ತಿದೆ. ಸಾರ್ವಜನಿಕ ಜೀವನಕ್ಕೆ ಬರುವ ಮೊದಲು ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಈಗ ಜನರ ಮಧ್ಯೆಯೇ ಇರುವ ಅನುಭವ ಇಷ್ಟ. ಜನರೊಂದಿಗೆ ಮಾತನಾಡುವಾಗ ಅವರ ಕಷ್ಟಗಳನ್ನು ಕೇಳಿ ಪರಿಹರಿಸುವ ಯತ್ನ ಮಾಡುತ್ತಿದ್ದೇನೆ. ಇದರಿಂದ ವಿಶೇಷತೆ ಕಾಣುತ್ತೇನೆ, ಹೊಸ ಅನುಭವ ನನಗೂ ಆಗುತ್ತಿದೆ ಎಂದರು.
ವೈದ್ಯರಾಗಿದ್ದ ನೀವು ಅದೇ ಕ್ಷೇತ್ರದಲ್ಲಿ ಮುಂದುವರಿಯದೆ ರಾಜಕಾರಣಕ್ಕೆ ಬರಲು ಕಾರಣವೇನು? ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ವೈದ್ಯನಾಗಿಯೇ ಕೆಲಸ ಮಾಡಿಕೊಂಡಿದಿದ್ದರೆ ಕ್ಲಿನಿಕ್ನಲ್ಲಿ ದಿನಕ್ಕೆ 70 ರಿಂದ 100 ಜನರನ್ನು ನೋಡುತ್ತಿದ್ದೆ. ಆದರೆ ಆರೋಗ್ಯ ಸಚಿವನಾಗಿರುವುದರಿಂದ ರಾಜ್ಯಕ್ಕೆ 5 ಹೊಸ ವೈದ್ಯಕೀಯ ಕಾಲೇಜು ತಂದಿದ್ದೇನೆ, 3 ಸಾವಿರ ಇದ್ದ ಆಮ್ಲಜನಕ ಸಹಿತದ ಹಾಸಿಗೆಗಳನ್ನು 30 ಸಾವಿರ ಹಾಸಿಗೆಗೆ ಹೆಚ್ಚಿಸಿದ್ದೇನೆ. 438 ನಮ್ಮ ಕ್ಲಿನಿಕ್ ತೆರೆದಿದ್ದೇನೆ, ಮಹಿಳೆಯರಿಗಾಗಿಯೇ ವಿಶೇಷವಾಗಿ 250 ಆಯುಷ್ಮತಿ ಕ್ಲಿನಿಕ್ ತೆರೆಯಲಾಗಿದೆ. ಇವೆಲ್ಲವೂ ನಿಮ್ಮ ಆಶೀರ್ವಾದದಿಂದ ಎಂದು ಹೇಳಿದರು.
ನಿಮಗೆ ಯಾವ ರಾಜಕಾರಣಿ ಇಷ್ಟ ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಬ್ಬರನ್ನು ಹೆಸರಿಸಲು ಕಷ್ಟ, ಮಹಾತ್ಮಾ ಗಾಂಧೀಜಿ, ಡಾ. ಅಂಬೇಡ್ಕರ್, ತಮ್ಮ ರಾಜಕೀಯ ಗುರುಗಳಾದ ಎಸ್.ಎಂ. ಕೃಷ್ಣ, ಪ್ರಧಾನಿ ನರೇಂದ್ರ ಮೋದಿ, ಅಟಲ್ ಬಿಹಾರಿ ವಾಜಪೇಯಿ, ಸರ್ದಾರ್ ವಲ್ಲಭಬಾಯಿ ಪಟೇಲ್ ತಮಗೆ ಸ್ಪೂರ್ತಿಯಾಗಿರುವುದಾಗಿ ಹೇಳಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಇಶಾ ಫೌಂಡೇಶನ್ ಆದಿಯೋಗಿ ಪ್ರತಿಮೆ ಅನಾವರಣ ಮಾಡಬಹುದು -ತಡೆ ವಾಪಸ್ ಪಡೆದ ಹೈಕೋರ್ಟ್
ಭವಿಷ್ಯದ ಚಿಕ್ಕಬಳ್ಳಾಪುರ ಯಾವ ರೀತಿ ಕಾಣಲು ಇಷ್ಟ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಸುಧಾಕರ್, ಭವಿಷ್ಯದ ಚಿಕ್ಕಬಳ್ಳಾಪುರ ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯಬೇಕು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಚಿಕ್ಕಬಳ್ಳಾಪುರದಲ್ಲಿ ವಿದ್ಯಾವಂತ ಯುವಕರಿದ್ದಾರೆ, ಪ್ರಗತಿಪರ ರೈತರಿದ್ದಾರೆ, ನೈಸರ್ಗಿಕ ಸಂಪನ್ಮೂಲಗಳಿವೆ. ಈಗ ನೀರಿನ ಅಭಾವ ತೀರಿದೆ, ಭೂಮಿಗೆ ಅಭಾವ ಇಲ್ಲ, ಉದ್ದಿಮೆ ಸ್ಥಾಪನೆಯಾಗಲು ಅವಕಾಶಗಳಿವೆ. ಮುಂದಿನ ದಿನಗಳಲ್ಲಿ ಬೆಂಗಳೂರು ದಟ್ಟಣೆ ಕಡಿಮೆ ಮಾಡಬೇಕಿದೆ. ಹಾಗಾಗಿ ಸುತ್ತಲಿನ ನಗರಗಳ ಅಭಿವೃದ್ಧಿ ಮಾಡಲು ತಯಾರಿ ನಡೆದಿದ್ದು, ಇದರಲ್ಲಿ ಚಿಕ್ಕಬಳ್ಳಾಪುರ ಸೂಕ್ತವಾಗಿದೆ. ಮುಂದಿನ ದಿನಗಳಲ್ಲಿ ದೊಡ್ಡ ನಗರವಾಗಿ ಬೆಳೆಯಲಿದೆ ಎಂದು ಹೇಳಿದರು.
ಭವಿಷ್ಯದ ರಾಜಕಾರಣಿಗಳಿಗೆ ಏನು ಹೇಳಲು ಇಷ್ಟ ಪಡುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವರು, ಈವರೆಗೆ ವೃತ್ತಿ ಬದುಕು ಎಂಬುದು ಕೇವಲ ವೈದ್ಯ, ಇಂಜಿನಿಯರ್ ಮಾತ್ರ ಎಂಬ ಪರಿಸ್ಥಿತಿ ಇತ್ತು. ಈಗ ಬದಲಾಗಿದೆ. ಆದರೆ ಹೆಚ್ಚು ಜನರು ರಾಜಕಾರಣಕ್ಕೆ ಆಸಕ್ತಿ ತೋರುತ್ತಿಲ್ಲ. ಕೆಡುತ್ತಿರುವ ವ್ಯವಸ್ಥೆಯನ್ನು ಸರಿ ಮಾಡುವವರು ಯಾರು, ಅರ್ಹ ವಿದ್ಯಾರ್ಥಿಗಳು ರಾಜಕಾರಣಕ್ಕೆ ಬರುವ ಆಸಕ್ತಿ ಬರಬೇಕು. ಉನ್ನತ ಶಿಕ್ಷಣ ಮಾಡಿದವರು, ದೇಶದ ಮೇಲೆ ವಿಶೇಷ ಅಭಿಮಾನ ಹೊಂದಿರುವವರು ರಾಜಕಾರಣಕ್ಕೆ ಬಂದರೆ ಸುಧಾರಣೆ ತರಲು ಸಾಧ್ಯ. ಮುಂದಿನ ದಿನಗಳಲ್ಲಿ ನೀವೂ ಚಿಕ್ಕಬಳ್ಳಾಪುರದ ಶಾಸಕ, ಸಂಸದರಾಗುವ ಕನಸು ಹೊಂದಬೇಕು, ನಿಮ್ಮಲ್ಲಿಯೂ ನಾಯಕರಾಗುವ ಗುಣ ಹುಟ್ಟಬೇಕು ಎಂದರು.
ವರದಿ: ಭೀಮಪ್ಪ ಪಾಟೀಲ, ಟಿವಿ9 ಚಿಕ್ಕಬಳ್ಳಾಪುರ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ