ಚಿಕ್ಕಬಳ್ಳಾಪುರ: ಇಶಾ ಫೌಂಡೇಶನ್ ಆದಿಯೋಗಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಜನವರಿ 15 ಭಾನುವಾರದಂದು ಉಪರಾಷ್ಟ್ರಪತಿಯವರ ಸಮ್ಮುಖದಲ್ಲಿ ಇಶಾ ಫೌಂಡೇಶನ್ ವತಿಯಿಂದ ಆದಿಯೋಗಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ಬೆಂಗಳೂರು/ ಚಿಕ್ಕಬಳ್ಳಾಪುರ: ಇಶಾ ಫೌಂಡೇಶನ್ ಸಾರಥಿ ಸದ್ಗುರು ಜಗ್ಗಿ ವಾಸುದೇವ್ ( sadhuguru jaggi vasudev) ಅನುಯಾಯಿಗಳಿಗೆ ಕರ್ನಾಟಕ ಹೈಕೋರ್ಟ್ ಸದ್ಯಕ್ಕೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಜನವರಿ 15 ಭಾನುವಾರದಂದು ಇಶಾ ಫೌಂಡೇಶನ್ ವತಿಯಿಂದ ನಡೆಯಲಿರುವ ಆದಿಯೋಗಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಆದ್ರೆ, ಉಳಿದಂತೆ ಕಾಮಗಾರಿ ನಡೆಸದೇ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶಿಸಿದೆ.
ಕರ್ನಾಟಕ ಹೈಕೋರ್ಟ್‌ನ (Karnataka High Court) ವಿಭಾಗೀಯ ಪೀಠವು ಇಶಾ ಫೌಂಡೇಶನ್ (Chikkaballapur Isha Foundation) ತನ್ನ ನಿಗದಿತ ಕಾರ್ಯವನ್ನು 15 ಜನವರಿ 2023 ರಂದು ಪೂರ್ವಯೋಜಿತ ರೀತಿಯಲ್ಲಿ ಮುಂದುವರಿಸಬಹುದು ಎಂದು ಸ್ಪಷ್ಟಪಡಿಸಿದೆ.
ಅರ್ಜಿದಾರರು ಮತ್ತು ಪ್ರತಿವಾದದ ಎರಡೂ ವಾದಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಳೆ ನೇತೃತ್ವದ ಪೀಠವು, ಕಾರ್ಯ ಮತ್ತು ಚಟುವಟಿಕೆಗಳನ್ನು ಯೋಜಿಸಿದ ರೀತಿಯಲ್ಲಿಯೇ ನಡೆಸಬಹುದು ಎಂದು ಸ್ಪಷ್ಟಪಡಿಸಿದೆ ಎಂದು livelaw.in ವೆಬ್ಸೈಟ್ ವರದಿ ಮಾಡಿದೆ.
ಜನವರಿ 15 ರಂದು ಆದಿಯೋಗಿ ಮೂರ್ತಿ ಉದ್ಘಾಟನೆ ಅಬಾಧಿತ:
ಇಶಾ ಫೌಂಡೇಷನ್ ಸಂಸ್ಥಾಪಕ ಜಗ್ಗಿ ವಾಸುದೇವ್ ಈ ಹಿಂದೆ ಹೇಳಿದ್ದಂತೆ ಆಶ್ರಮದ ನಿರ್ಮಾಣ ಕಾಮಗಾರಿ ಮುಂದುವರೆದಿದ್ದು ಆಶ್ರಮದಲ್ಲಿ 112 ಅಡಿಗಳ ಆದಿಯೋಗಿ ಮೂರ್ತಿ ಉದ್ಘಾಟನೆಗೆ ಸನ್ನದ್ದಾಗಿದೆ. ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ|| ಕೆ. ಸುಧಾಕರ್ ಸೇರಿದಂತೆ ಗಣ್ಯಾತಿಗಣ್ಯರು ಆಶ್ರಮಕ್ಕೆ ಆಗಮಿಸಿ ಜನವರಿ 15ರಂದು ಸಂಜೆ ಆದಿಯೋಗಿ ಮೂರ್ತಿ ಉದ್ಘಾಟನೆ ಮಾಡಲಿದ್ದಾರೆ.
ಇಶಾ ಫೌಂಡೇಶನ್ ವತಿಯಿಂದ ಚಿಕ್ಕಬಳ್ಳಾಪುರ ಬಳಿ ಆದಿಯೋಗಿ ಪ್ರತಿಮೆ ಸ್ಥಾಪನೆಗೆ ತಡೆ ನೀಡಿದ್ದ ಹೈಕೋರ್ಟ್, ಏನು ಹೇಳಿತ್ತು?
ಮೊನ್ನೆ ಬುಧವಾರ ನಡೆದ ಬೆಳವಣಿಗೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಇಶಾ ಫೌಂಡೇಶನ್ ವತಿಯಿಂದ ಆದಿಯೋಗಿ ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ಇಶಾ ಯೋಗ ಕೇಂದ್ರಕ್ಕೆ ಹಿನ್ನಡೆಯುಂಟಾಗಿತ್ತು. ಆದಿಯೋಗಿ ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿತ್ತು. ಸರ್ಕಾರ ಮತ್ತು ಇಶಾ ಯೋಗ ಕೇಂದ್ರ ಸೇರಿ 16 ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ. ಆದಿಯೋಗಿ ಪ್ರತಿಮೆ ಸ್ಥಾಪನೆ ಸ್ಥಳವು ಪರಿಸರ ಸೂಕ್ಷ್ಮ ವಲಯವಾಗಿದ್ದು, ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವುದು ಸರಿಯಲ್ಲ ಎಂದು ಅರ್ಜಿದಾರರ ಪರ ವಕೀಲ ಎಂ. ಶಿವಪ್ರಕಾಶ್ ಕೋರ್ಟ್ ಮೊರೆಹೋಗಿದ್ದರು.
ಆದಿಯೋಗಿ ಪ್ರತಿಮೆ ಸ್ಥಾಪನೆಗಾಗಿ ಸರ್ಕಾರ ಕಾನೂನುಬಾಹಿರವಾಗಿ ಜಮೀನು ಮಂಜೂರು ಮಾಡಿದೆ. ನಂದಿ ಬೆಟ್ಟಕ್ಕೆ ಐತಿಹಾಸಿಕ ಮಹತ್ವವಿದೆ ಎಂದು ವಾದ ಮಂಡಿಸಲಾಗಿದೆ. ಪರಿಸರದ ಮೇಲೆ ಪರಿಣಾಮ ಬೀರಬಹುದೆಂಬುದನ್ನು ಒಪ್ಪಬಹುದು ಎಂದು ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಲು ಅವಕಾಶ ನೀಡಿದ ಹೈಕೋರ್ಟ್, ಯಥಾಸ್ಥಿತಿಗೆ ಆದೇಶಿಸಿತ್ತು.
Published On - 1:42 pm, Fri, 13 January 23