ಬೆಂಗಳೂರು ಗೆಲ್ಲಲು ಹೊಸ ತಂತ್ರ ಹೆಣೆದ ಬಿಜೆಪಿ: ಕಳೆದ ಬಾರಿ ಸೋತ ಕ್ಷೇತ್ರಗಳತ್ತ ವಿಶೇಷ ಲಕ್ಷ್ಯ

ಕಳೆದ ವಿಧಾನಸಭಾ ಚುನಾವಣೆ ಮತ್ತು ನಂತರದ ರಾಜಕೀಯ ಬೆಳವಣಿಗೆಗಳಲ್ಲಿ ಬಿಜೆಪಿಯು ಬೆಂಗಳೂರಿನ 15 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಇದನ್ನು 22ಕ್ಕೆ ಏರಿಸಬೇಕೆಂಬ ರಣತಂತ್ರವನ್ನು ಬಿಜೆಪಿ ಸಿದ್ಧಪಡಿಸಿದೆ.

ಬೆಂಗಳೂರು ಗೆಲ್ಲಲು ಹೊಸ ತಂತ್ರ ಹೆಣೆದ ಬಿಜೆಪಿ: ಕಳೆದ ಬಾರಿ ಸೋತ ಕ್ಷೇತ್ರಗಳತ್ತ ವಿಶೇಷ ಲಕ್ಷ್ಯ
ಬಿಜೆಪಿ ಚಿಹ್ನೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 13, 2023 | 11:02 AM

ಬೆಂಗಳೂರು: ಕರ್ನಾಟಕದಲ್ಲಿ ಅತಿಹೆಚ್ಚು ವಿಧಾನಸಭಾ ಕ್ಷೇತ್ರಗಳಿರುವುದು (Karnataka Assembly Elections 2023) ಬೆಂಗಳೂರು ನಗರ ಜಿಲ್ಲೆಯಲ್ಲಿ. ಬೆಂಗಳೂರು ಮಹಾನಗರದಲ್ಲಿ (Bengaluru City) ಯಾವ ಪಕ್ಷವು ಮುನ್ನಡೆ ದಾಖಲಿಸುತ್ತದೆಯೋ ಅದು ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವುದು ಸುಲಭ. ಹೀಗಾಗಿಯೇ ಬೆಂಗಳೂರು ರಾಜಕಾರಣಕ್ಕೆ ಅಷ್ಟು ಪ್ರಾಮುಖ್ಯತೆ. ಬೆಂಗಳೂರು ನಗರದಲ್ಲಿ ಈ ಬಾರಿ 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕೆನ್ನುವ ಗುರಿಯನ್ನು ಬಿಜೆಪಿ ಇರಿಸಿಕೊಂಡಿದೆ. ಅದಕ್ಕೆ ತಕ್ಕಂತೆ ತಂತ್ರಗಳನ್ನು ಹೆಣೆಯುವ ಪ್ರಕ್ರಿಯೆಗೂ ಚಾಲನೆ ಸಿಕ್ಕಿದೆ.

ಕಳೆದ ವಿಧಾನಸಭಾ ಚುನಾವಣೆ ಮತ್ತು ನಂತರದ ರಾಜಕೀಯ ಬೆಳವಣಿಗೆಗಳಲ್ಲಿ ಬಿಜೆಪಿಯು ಬೆಂಗಳೂರಿನ 15 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಇದನ್ನು 22ಕ್ಕೆ ಏರಿಸಬೇಕೆಂಬ ರಣತಂತ್ರವನ್ನು ಬಿಜೆಪಿ ಸಿದ್ಧಪಡಿಸಿದೆ. ಕೆಳದ ಬಾರಿ ಗೆಲುವು ಕಂಡ ಮತ್ತು ಕಡಿಮೆ ಅಂತರದಲ್ಲಿ ಸೋಲು ಕಂಡ ಕ್ಷೇತ್ರಗಳನ್ನೇ ಮುಖ್ಯ ಗುರಿಯಾಗಿಸಲು ಬಿಜೆಪಿ ಮುಂದಾಗಿದೆ. ಅದರಂತೆ ಜಯನಗರ, ಹೆಬ್ಬಾಳ, ಶಿವಾಜಿನಗರ, ಬ್ಯಾಟರಾಯನಪುರ ಮತ್ತು ದಾಸರಹಳ್ಳಿ ಕ್ಷೇತ್ರಗತ್ತ ಬಿಜೆಪಿ ಹೆಚ್ಚು ಗಮನ ಹರಿಸುತ್ತಿದೆ.

ವಲಸೆ ಬಂದ ಮತದಾರರ ಕಡೆಗೆ ಹೆಚ್ಚು ಗಮನ ನೀಡಲು ಬಿಜೆಪಿ ಮುಂದಾಗಿದೆ. ಅದರಂತೆ ಅಪಾರ್ಟ್‌ಮೆಂಟ್ ನಿವಾಸಿಗಳು, ಸಂಘ-ಸಂಸ್ಥೆಗಳು, ನಾಗರಿಕ ಸಮಿತಿಗಳನ್ನು ಸಂಪರ್ಕಿಸುತ್ತಿದೆ. ಈ ಬಾರಿ ಉತ್ತರ ಭಾರತದ ನಿವಾಸಿಗಳತ್ತ ಹೆಚ್ಚು ಗಮನ ನೀಡುತ್ತಿರುವುದು ರಾಜಕೀಯ ವಿಶ್ಲೇಷಕರ ಗಮನ ಸೆಳೆದಿದೆ. ಮರಾಠಿ ಸಂಘ, ಬಂಗಾಳಿ ಅಸೋಸಿಯೇಷನ್ ಸೇರಿದಂತೆ ಇತರ ರಾಜ್ಯಗಳಿಂದ ಬಂದವರು ಹಾಗೂ ಕನ್ನಡೇತರರು ಇರುವ ಸಂಘ-ಸಂಸ್ಥೆಗಳನ್ನು ಬಿಜೆಪಿ ಮುಖಂಡರು ಗಮನ ಸೆಳೆದಿದ್ದಾರೆ. ಇಂಥವರಲ್ಲಿ ಹಲವರಿಗೆ ಮತದಾರರ ಗುರುತಿನ ಪತ್ರ ಇಲ್ಲದಿರುವುದನ್ನು ಗಮನಿಸಿರುವ ಬಿಜೆಪಿ ನಾಯಕರು ಈ ನಿಟ್ಟಿನಲ್ಲಿ ಗಮನ ಹರಿಸಲು ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.

ಗರಿಗೆದರಿದ ರಾಜಕೀಯ ಚಟುವಟಿಕೆ

ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣೆಗೆ ಸಿದ್ಧತೆ ಚುರುಕುಗೊಳಿಸಿವೆ. ಬಿಜೆಪಿಯಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಶಾ ಇಲ್ಲಿ ತಂತ್ರಗಾರಿಕೆಯನ್ನು ಹೆಣೆಯುತ್ತಿದ್ದಾರೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆಯ ನಂತರ ಕಾಂಗ್ರೆಸ್​ನಲ್ಲಿ ಹುಮ್ಮಸ್ಸು ಹೆಚ್ಚಾಗಿದ್ದು, ಹಲವು ಜಿಲ್ಲೆಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಮತ್ತು ಸಂಘಟನಾ ಪ್ರಕ್ರಿಯೆಗೆ ಹೊಸ ವೇಗ ಸಿಕ್ಕಿದೆ. ಪಂಚರತ್ನ ಯಾತ್ರೆಯ ಮೂಲಕ ರಾಜ್ಯದ ಉದ್ದಗಲಕ್ಕೂ ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಸಂಚರಿಸುತ್ತಿದ್ದಾರೆ. ಕರ್ನಾಟಕದ ವಿದ್ಯಮಾನಗಳು ದಿನದಿಂದ ಇಡೀ ದೇಶದ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: Karnataka Elections 2023 Live: ಕೆಂಪೇಗೌಡ, ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ

ರಾಜಕೀಯಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ