ಚಿಕ್ಕಬಳ್ಳಾಪುರ: ಅದು ರಾಷ್ಟ್ರೀಯ ಹೆದ್ದಾರಿ-44ಕ್ಕೆ ಹೊಂದಿಕೊಂಡಿರುವ ಹೋಟೆಲ್. ಆ ಹೋಟೆಲ್‌ನಲ್ಲಿ ತಿಂಡಿ, ಕಾಫಿ, ಚೆನ್ನಾಗಿರುತ್ತೆ ಅಂತ ವಾಹನ ಸವಾರರು ಬೆಳ್ಳಂಬೆಳಿಗ್ಗೆ ಅಲ್ಲಿ ಕಾರು ನಿಲ್ಲಿಸಿ, ಕಾಫಿ ಕುಡಿಯುತ್ತಿದ್ದರು ಅಷ್ಟೇ. ಹೋಟೆಲ್ ಬಳಿ ಇದ್ದ ಗ್ರಾಹಕರನ್ನೇ ಹುಡುಕಿಕೊಂಡು ಬಂದ ಜವರಾಯ ಕ್ಷಣಾರ್ಧದಲ್ಲಿ ಇಬ್ಬರ ಪ್ರಾಣ ಪಡೆದು, ಇನ್ನು ಕೆಲವರು ಆಸ್ಪತ್ರೆ ಸೇರುವಂತೆ ಮಾಡಿದ್ದಾನೆ. ರಾಷ್ಟ್ರೀಯ ಹೆದ್ದಾರಿ-44, ಹೈದರಾಬಾದ್-ಬೆಂಗಳೂರಿಗೆ ಸಂಪರ್ಕ ಕಲ್ಪಿಸುತ್ತೆ. ಹೆದ್ದಾರಿಯ ಚಿಕ್ಕಬಳ್ಳಾಪುರ ತಾಲ್ಲೂಕು, ರಾಮದೇವರಗುಡಿ ಗೇಟ್ ಬಳಿ ಪ್ರಣವ್ ಎನ್ನುವ ಹೋಟೆಲ್‌ವೊಂದಿದೆ. ಆ ಹೋಟೆಲ್‌ನಲ್ಲಿ ಟೀ, ಕಾಫಿ, ತಿಂಡಿ ರುಚಿಕರವಾಗಿರುತ್ತೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುವವರು ಕೆಲವೊತ್ತು ಹೋಟೆಲ್ ಬಳಿ ಕಾರುಗಳನ್ನು ನಿಲ್ಲಿಸಿ ಟೀ, ಕಾಫಿ ಕುಡಿಯುವುದು ವಾಡಿಕೆ. ಹೀಗೆ ಇಂದು ಬೆಳ್ಳಂಬೆಳಿಗ್ಗೆ 7-40ರ ಸಮಯ ಹೋಟೆಲ್‌ನ ಪಾರ್ಕಿಂಗ್‌ನಲ್ಲಿ ಕಾರುಗಳನ್ನು ನಿಲ್ಲಿಸಿ ಕೆಲವರು ಟೀ, ಕಾಫಿ ಕುಡಿಯುತ್ತಿದ್ದರು.
ಇನ್ನೂ ಕೆಲವರು ಪಾರ್ಕಿಂಗ್‌ನಲ್ಲಿ ಮಕ್ಕಳ ಜೊತೆ ಆಟವಾಡಿಕೊಂಡಿದ್ದರು. ಕಂಟೈನರ್ ರೂಪದಲ್ಲಿ ಅಲ್ಲಿಗೆ ಬಂದ ಜವರಾಯ ಹೋಟೆಲ್‌ನ ಭದ್ರತಾ ಸಿಬ್ಬಂದಿ ನಾರಾಯಣಸ್ವಾಮಿ ಹಾಗೂ ಹೋಟೆಲ್ ಬಳಿ ಸರ್ವೀಸ್ ರಸ್ತೆಯಲ್ಲಿ ಬೈಕ್‌ನಲ್ಲಿ ಬರುತ್ತಿದ್ದ ಬೈಕ್ ಸವಾರ ಜರ್ನಾಧನ ಮೇಲೆ ಕಂಟೈನರ್ ಹರಿದು ಹೋಟೆಲ್‌ನತ್ತ ನುಗ್ಗಿದೆ. ಸರ್ವೀಸ್ ರಸ್ತೆಯಲ್ಲಿ ಜನಾರ್ಧನ್ ಹೋಟೆಲ್ ಬಳಿ ನಾರಾಯಣಸ್ವಾಮಿಯನ್ನು ಬಲಿ ಪಡೆದ ಕಂಟೈನರ್, ಹೋಟೆಲ್‌ನ ಪಾರ್ಕಿಂಗ್ ಸ್ಥಳಕ್ಕೆ ನುಗ್ಗಿದ್ದೇ ತಡ ಒಂದಲ್ಲ, ಎರಡಲ್ಲ ಐದು ಕಾರುಗಳು ಜಖಂಗೊಂಡಿವೆ. ಅಲ್ಲೇ ಪಾರ್ಕಿಂಗ್‌ನಲ್ಲಿದ್ದ ಬೆಂಗಳೂರಿನ ಆಡುಗೋಡಿ ನಿವಾಸಿ 4 ತಿಂಗಳ ಗರ್ಭಿಣಿ ಮಾನಸ, ಪತಿ ಹರ್ಷ ದೇಶಪಾಂಡೆ ಹಾಗೂ ಮಾನಸ ತಂದೆ ನರಸಿಂಹ ಸೇರಿದಂತೆ ದಂಪತಿಯ 5 ವರ್ಷದ ಮಗೂ ಸಹಾ ಇತ್ತು.
ಕಂಟೈನರ್ ಲಾರಿ ಹೋಟೆಲ್‌ಗೆ ನುಗ್ಗುವುದನ್ನು ಗಮನಿಸಿದ ದಂಪತಿ ಮಗುವನ್ನು ಎತ್ತಿಕೊಂಡು ಓಡುವಷ್ಟರಲ್ಲಿ ಲಾರಿ ಗರ್ಭಿಣಿಯ ಕಾಲು ಮೇಲೆ ಹರಿದು, ಚಿಂತಾಜನಕಳಾಗಿದ್ದು ಬೆಂಗಳೂರಿನ ಹಾಸ್ಮೇಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನಿಂದ ಹೈದರಾಬಾದ್‌ನತ್ತ ಹೊರಟಿದ್ದ ಕಂಟೈನರ್ ಲಾರಿ ಓವರ್ ಸ್ಪೀಡ್‌ನಲ್ಲಿತ್ತು. ಲಾರಿಯ ಮುಂದಿದ್ದ ಎಕೋಸ್ಪೋರ್ಟ್ಸ್ ಕಾರೊಂದು ಸಡನ್ನಾಗಿ ಎಡದಿಂದ ಬಲಕ್ಕೆ ಹೋಟೆಲ್‌ನತ್ತ ತಿರುಗಿದೆ. ಇದರಿಂದ ಗಾಬರಿಗೊಂಡ ಲಾರಿ ಚಾಲಕ ನಿಯಂತ್ರಣ ತಪ್ಪಿ ಹೋಟೆಲ್‌ಗೆ ನುಗ್ಗಿದ್ದಾನೆ. ಇದರಿಂದ ಅವಘಡ ನಡೆದಿದ್ದು, ತಮಿಳುನಾಡು ಮೂಲದ ಲಾರಿ ಚಾಲಕ ಅಜಿತ್‌ನನ್ನು ಬಂಧಿಸಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ವರದಿ: ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ
Published On - 7:36 pm, Sat, 17 September 22