ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲಿ ಮಳೆಯಿಂದ ಸೋರುತ್ತಿವೆ ಆಸ್ಪತ್ರೆಗಳ ಮಾಳಿಗೆಗಳು! ಪ್ಲಾಸ್ಟಿಂಗ್ ಕುಸಿದು ಆಶಾಕಾರ್ಯಕರ್ತೆಗೆ ಗಾಯ, ಮುಂದೇನು?

Chikkaballapur rains: ಲಸಿಕೆ ಅಭಿಯಾನದ ಪ್ರಯುಕ್ತ ಉಪ ಆರೋಗ್ಯ ಕೇಂದ್ರವೊಂದರಲ್ಲಿ ಆಶಾ ಕಾರ್ಯಕರ್ತೆ ಎಎನ್‌ಎಂ ನರ್ಸ್ ಹಾಗೂ ಲಸಿಕೆ ಸಿಬ್ಬಂದಿ ಕರ್ತವ್ಯನಿರತವಾಗಿದ್ದರು. ಆವಾಗಲೇ ಮೇಲಿಂದ ದುಪ್ಪನೆ ಕಾಂಕ್ರೇಟ್‌ ಪ್ಲಾಸ್ಟಿಂಗ್ ಬಿದ್ದು, ಆಶಾಕಾರ್ಯಕರ್ತೆ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲಿ ಮಳೆಯಿಂದ ಸೋರುತ್ತಿವೆ ಆಸ್ಪತ್ರೆಗಳ ಮಾಳಿಗೆಗಳು! ಪ್ಲಾಸ್ಟಿಂಗ್ ಕುಸಿದು ಆಶಾಕಾರ್ಯಕರ್ತೆಗೆ ಗಾಯ, ಮುಂದೇನು?
ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲಿ ಮಳೆಯಿಂದ ಸೋರುತ್ತಿವೆ ಆಸ್ಪತ್ರೆಗಳ ಮಾಳಿಗೆಗಳು! ಪ್ಲಾಸ್ಟಿಂಗ್ ಕುಸಿದು ಆಶಾಕಾರ್ಯಕರ್ತೆಗೆ ಗಾಯ, ಮುಂದೇನು?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Sep 17, 2022 | 4:50 PM

ಕಳೆದ ವರ್ಷ ಸುರಿದ ಮಹಾಮಳೆ ಹಾಗೂ ಕಳೆದ 15 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಆರೋಗ್ಯ ಸಚಿವರ ತವರು ಜಿಲ್ಲೆ ಚಿಕ್ಕಬಳ್ಳಾಪುರದ (Chikkaballapur rains) ಕೆಲವು ಸರ್ಕಾರಿ ಆಸ್ಪತ್ರೆಗಳ ಮಾಳಿಗೆಗಳು ಸೋರುತ್ತಿದ್ದರೆ, ಇನ್ನು ಕೆಲವು ಆಸ್ಪತ್ರೆಗಳಲ್ಲಿ ಪ್ಲಾಸ್ಟಿಂಗ್ ಕಿತ್ತು ಬರುತ್ತಿದೆ. ಮತ್ತೊಂದಡೆ ಉಪ ಆರೋಗ್ಯಕೇಂದ್ರವೊಂದರಲ್ಲಿ ಕಂದಮ್ಮಗಳಿಗೆ ಲಸಿಕೆ ಹಾಕುತ್ತಿದ್ದಾಗಲೇ ಪ್ಲಾಸ್ಟಿಂಗ್ ಕುಸಿದು ಆಶಾಕಾರ್ಯಕರ್ತೆಯೊಬ್ಬರಿಗೆ (Accredited Social Health Activist -ASHA Worker) ಗಾಯಗಳಾದ ದುರ್ಘಟನೆ ನಡೆದಿದೆ.

ಲಸಿಕೆ ಅಭಿಯಾನದ ಪ್ರಯುಕ್ತ ಉಪ ಆರೋಗ್ಯ ಕೇಂದ್ರವೊಂದರಲ್ಲಿ ಆಶಾ ಕಾರ್ಯಕರ್ತೆ ಎಎನ್‌ಎಂ ನರ್ಸ್ ಹಾಗೂ ಲಸಿಕೆ ಸಿಬ್ಬಂದಿ ಕರ್ತವ್ಯನಿರತವಾಗಿದ್ದರು. ಆವಾಗಲೇ ಮೇಲಿಂದ ದುಪ್ಪನೆ ಕಾಂಕ್ರೇಟ್‌ ಪ್ಲಾಸ್ಟಿಂಗ್ ಬಿದ್ದು, ಆಶಾಕಾರ್ಯಕರ್ತೆ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇನ್ನುಳಿದ ಸಿಬ್ಬಂದಿ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.

ಇಂತಹ ಘಟನೆ ನಡೆದಿರುವುದು ರಾಜ್ಯ ಸರ್ಕಾರದ ಪ್ರಭಾವಿ ಮಂತ್ರಿ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ|| ಕೆ. ಸುಧಾಕರ್‌ರವರ ತವರು ಜಿಲ್ಲೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ಉಲ್ಲೋಡು ಆರೋಗ್ಯ ಉಪಕೇಂದ್ರದಲ್ಲಿ. ಕಳೆದ ಡಿಸೆಂಬರ್‌ನಲ್ಲಿ ಸುರಿದ ಮಹಾಮಳೆ ಹಾಗೂ ಇತ್ತೀಚಿಗೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಆರೋಗ್ಯ ಕೇಂದ್ರದ ಮೇಲ್ಚಾವಣಿ ಹಾನಿಯಾಗಿದ್ದು, ಸಿಬ್ಬಂದಿಗಳು ಕರ್ತವ್ಯನಿರತರಾಗಿದ್ದಾಗಲೇ ಮೇಲ್ಚಾವಣಿ ಬಿದ್ದು ಆವಂತರವಾಗಿದೆ ಎಂದು ಡಾ|| ನರಸಿಂಹಮೂರ್ತಿ, ತಾಲ್ಲೂಕು ವೈದ್ಯಾಧಿಕಾರಿ, ಗುಡಿಬಂಡೆ ಅವರು ಟಿವಿ9 ಗೆ ತಿಳಿಸಿದ್ದಾರೆ.

ಇದು ಉಲ್ಲೋಡು ಆರೋಗ್ಯ ಉಪಕೇಂದ್ರದ ದುಸ್ಥಿತಿಯಾದರೆ, ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 49 ಉಪ ಆರೋಗ್ಯ ಕೇಂದ್ರಗಳಿಗೆ ಮಳೆಯಿಂದ ಹಾನಿಯಾಗಿದೆ. ಇನ್ನು ಶಿಡ್ಲಘಟ್ಟ ತಾಲ್ಲೂಕು ಆಸ್ಪತ್ರೆಯ ಮೇಲ್ಚಾವಣಿ ಮಳೆ ನೀರಿನಿಂದ ಸೋರಿಕೆಯಾಗಿ ದುರವಸ್ಥೆಯಲ್ಲಿದೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಿಂದ ಕೂಗಳತೆ ದೂರದಲ್ಲಿರುವ ನಾಯನಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಳೆ ಹೆಸರು ಕೇಳಿದರೆ ವೈದ್ಯರು, ಸಿಬ್ಬಂದಿ, ನರ್ಸ್ಗಳು ಬೆಚ್ಚುಬೀಳುವಂತಾಗಿದೆ.

ಮಳೆಯ ನೀರು ಆಸ್ಪತ್ರೆಯ ಮೇಲ್ಛಾವಣಿಯಿಂದ ಸೋರುತ್ತಿದೆ. ಆಸ್ಪತ್ರೆಯ ಔಷಧಿ ಸಂಗ್ರಹಗಾರ, ವೈದ್ಯರ ಕೊಠಡಿಗಳು ಸಹಾ ಸೋರುತ್ತಿವೆ. ಗೋಡೆಗಳಲ್ಲಿ ಮಳೆ ನೀರು ತೊಟ್ಟಿಕ್ಕುತ್ತಿದೆ. ಮತ್ತೊಂದಡೆ ಆಸ್ಪತ್ರೆಯ ಕಂಪ್ಯೂಟರ್, ಟಿವಿ, ಯುಪಿಎಸ್, ಲ್ಯಾಬ್‌ನ ವೈದ್ಯಕೀಯ ಸಲಕರಣೆಗಳು ಹಾಳಾಗಿವೆ. ಗೋಡೆಗಳು ನೀರಿನಿಂದ ಒದ್ದೆಯಾಗಿರುವ ಕಾರಣ ಆಸ್ಪತ್ರೆಯ ಗೋಡೆಗಳು ವಿದ್ಯುತ್ ಗ್ರೌಂಡಿಂಗ್ ಆಗಿ ಆವಾಂತರವೇ ಆಗಿದೆ. ಎನ್ನುತ್ತಾರೆ ಡಾ|| ಕೃಷ್ಣ, ವೈದ್ಯಾಧಿಕಾರಿ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ನಾಯನಹಳ್ಳಿ.

ಕಳೆದ ಡಿಸೆಂಬರ್‌ನಲ್ಲಿ ಸುರಿದ ಮಹಾಮಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಇಲಾಖೆಗಳ ನೂರಾರು ಸರ್ಕಾರಿ ಕಟ್ಟಡಗಳು ಹಾನಿಯಾಗಿದ್ದವು. ಆದರೆ ಇದುವರೆವಿಗೂ ಆ ಕಟ್ಟಡಗಳನ್ನು ದುರಸ್ಥಿ ಮಾಡದ ಹಿನ್ನೆಲೆ ಇತ್ತೀಚಿಗೆ ಸುರಿದ ಮಳೆಯಿಂದ ಮತ್ತೆ ಮಳೆಯ ನೀರು ಕಟ್ಟಡಗಳಿಗೆ ಹಾನಿಯನ್ನುಂಟು ಮಾಡುತ್ತಿದೆ. ತಡವಾಗಿಯಾದರೂ ಎಚ್ಚರಗೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 2 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಟ್ಟಡಗಳ ದುರಸ್ಥಿಗೆ ಮುಂದಾಗಿದ್ದು, ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಹಣ ಬಿಡುಗಡೆ ಮಾಡಿದೆ – ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ