ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದನೆ ಕೇಸ್​: ರಾಜೀವ್​​ ಗೌಡಗೆ ಶಾಕ್​​ ಮೇಲೆ ಶಾಕ್​​

ನಗರಸಭೆ ಪೌರಾಯುಕ್ತೆಗೆ ನಿಂದನೆ ಆರೋಪದ ಬೆನ್ನಲ್ಲೇ ಮಹಿಳಾ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸಿರುವ ಸಾಲು ಸಾಲು ದೂರುಗಳು ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಕೇಳಿಬಂದಿವೆ. ತಹಶೀಲ್ದಾರ್​​, ಪಿಡಿಒ ಕೂಡ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಪ್ರಕರಣದ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ, ಪಕ್ಷಕ್ಕೆ ಮುಜುಗರವಾದ ಕಾರಣ ಕೆಪಿಸಿಸಿ ರಾಜೀವ್ ಗೌಡಗೆ ನೋಟಿಸ್ ಜಾರಿ ಮಾಡಿದೆ. ವಾರದೊಳಗೆ ಉತ್ತರಿಸದಿದ್ದರೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದೆ.

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದನೆ ಕೇಸ್​: ರಾಜೀವ್​​ ಗೌಡಗೆ ಶಾಕ್​​ ಮೇಲೆ ಶಾಕ್​​
ರಾಜೀವ್​​ ಗೌಡ
Edited By:

Updated on: Jan 15, 2026 | 6:45 PM

ಚಿಕ್ಕಬಳ್ಳಾಪುರ, ಜನವರಿ 15: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದನೆ ವಿಚಾರ ಪ್ರಕರಣದ ಆರೋಪಿ, ಕಾಂಗ್ರೆಸ್​​ ಮುಖಂಡ ರಾಜೀವ್​​ ಗೌಡಗೆ ಶಾಕ್​​ ಮೇಲೆ ಶಾಕ್​​ ಸಿಗ್ತಿದೆ. ತಲೆ ಮರೆಸಿಕೊಂಡಿರುವ ಆರೋಪಿ ವಿರುದ್ಧ ಒಂದೊಂದಾಗಿ ಆರೋಪಗಳು ಕೇಳಿಬರುತ್ತಿದ್ದು, ಶಿಡ್ಲಘಟ್ಟ ತಹಶೀಲ್ದಾರ್ ಗಗನಸಿಂಧು ಅವರಿಗೂ ಏಕವಚನದಲ್ಲಿ ಈತ ನಿಂದಿಸಿದ್ದ ಬಗ್ಗೆ ವರದಿಯಾಗಿತ್ತು. ಆ ಬೆನ್ನಲ್ಲೇ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ಮಾಡ್ತಿರುವ ಮಹಿಳಾ ಪಿಡಿಒ ಒಬ್ಬರು ಕೂಡ ‘ಕೈ’ ಮುಖಂಡನ ವಿರುದ್ಧ ಸ್ಫೋಟಕ ಆರೋಪ ಮಾಡಿದ್ದಾರೆ. ಮಹಿಳಾ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡೋದು ರಾಜೀವ್ ಗೌಡಗೆ ಪ್ರವೃತ್ತಿ ಎಂದು ಟಿವಿ9ಗೆ ಕರೆ ಮಾಡಿ ತಮ್ಮ ಅಳಲುತೋಡಿಕೊಂಡಿದ್ದಾರೆ.

ಪಿಡಿಒ ಆರೋಪವೇನು?

ರಾಜೀವ್ ಗೌಡ ತನಗೂ ಕೂಡ ಧಮ್ಕಿ ಹಾಕಿ ಕಿರುಕುಳ ನೀಡುತ್ತಿದ್ದರು. ಶಿಡ್ಲಘಟ್ಟದಲ್ಲಿ ಶಾಸಕರ ಬದಲು ತಮ್ಮ ಮಾತು ನಡೆಯಬೇಕು ಎನ್ನುತ್ತಿದ್ದರು. ರಾಜೀವ್ ಗೌಡ ಹೇಳಿದಂತೆ ಕೇಳದಿದ್ದರೆ ವರ್ಗಾವಣೆ ಮಾಡಿಸುತ್ತಾರೆ. ಸರಿ ಅಥವಾ ತಪ್ಪು ಎಂದು ನೋಡಲ್ಲ, ಅವರು ಹೇಳಿದಂತೆ ಮಾಡಬೇಕು. ಹಾಲಿನ ಡೇರಿಗೆ ನಾಮನಿರ್ದೇಶನ, ಚೆಕ್ ಹಾಕುವ ವಿಚಾರದಲ್ಲಿ ಕಿರುಕುಳ ನೀಡಲಾಗಿದ್ದು, ಕೆಪಿಸಿಸಿ ಕೋ-ಆರ್ಡಿನೇಟರ್ ಅನ್ನೋ ಲೆಟರ್​ಹೆಡ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಶಾಸಕರಿಗಿಂತ ಕೆಪಿಸಿಸಿ ಕೋ-ಆರ್ಡಿನೇಟರ್ ಹುದ್ದೆ ದೊಡ್ಡದು ಎಂದು ಹೇಳಿ ಶಿಡ್ಲಘಟ್ಟ ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ರಾಜೀವ್​​ ಗೌಡ ವಿರುದ್ಧ ಮತ್ತೊಂದು ಆರೋಪ; ತಹಶೀಲ್ದಾರ್​​ಗೂ ನಿಂದಿಸಿದ್ದನಾ ‘ಕೈ’ ಮುಖಂಡ?

ಅಧಿಕಾರಿಗಳು ಸ್ಥಳೀಯ ಜೆಡಿಎಸ್ ಶಾಸಕರ ಮಾತು ಕೇಳ್ತಾರೆಂಬ ಭ್ರಮೆಯಲ್ಲಿ ಶಿಡ್ಲಘಟ್ಟ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಇದ್ದಾರೆ. ಪೌರಾಯುಕ್ತೆ ಅಮೃತಾಗೌಡಗೆ ಬೈಯ್ದಂತೆ ನನಗೂ ಬೈಯ್ಯಲು ಯತ್ನಿಸಿದ್ದರು. ಆದರೆ ನಾನು ತಿರುಗಿಸಿ ಬೈಯ್ದಿದ್ದರಿಂದ ರಾಜೀವ್ ಗೌಡ ಸುಮ್ಮನಾಗಿದ್ದರು. ಹೇಳಿದಂತೆಲ್ಲ ಮಾಡಲಾಗಲ್ಲ, ಅದೇನ್ ಮಾಡ್ಕೋತಿರೋ ಮಾಡ್ಕೊಳ್ಳಿ ಎಂದಿದ್ದೆ. ಅವರು ಹೇಳಿದಂತೆ ಕೇಳಲಿಲ್ಲವೆಂಬ ಕಾರಣಕ್ಕೆ ವರ್ಗಾವಣೆ ಮಾಡಿಸಿದರು. ಶಿಡ್ಲಘಟ್ಟ ಕ್ಷೇತ್ರದ ಬಹುತೇಕ ಮಹಿಳಾ ಅಧಿಕಾರಿಗಳು ಅವರಿಂದ ಕಿರುಕುಳ ಅನುಭವಿಸಿದ್ದಾರೆ ಎಂದು ಪಿಡಿಒ ಹೇಳಿದ್ದಾರೆ.

ರಾಜೀವ್​​ ಗೌಡಗೆ ಕೆಪಿಸಿಸಿ ನೋಟಿಸ್​​

ಪಕ್ಷದ ಮುಖಂಡ ರಾಜೀವ್​​ ಗೌಡ ಮಹಿಳಾ ಅಧಿಕಾರಿಗಳಿಗೆ ಕಿರುಕುಳ ನೀಡಿರುವ ವಿಚಾರ ದೊಡ್ಡದಾಗುತ್ತಿದ್ದಂತೆ ಕಾಂಗ್ರೆಸ್​​ ಡ್ಯಾಮೇಜ್​​ ಕಂಟ್ರೋಲ್​​ಗೆ ಮುಂದಾಗಿದೆ. ಪೌರಾಯುಕ್ತರೊಂದಿಗೆ ತಾವು ಆಡಿದ ಮಾತುಗಳಿಂದ ಪಕ್ಷಕ್ಕೆ ಮುಜುಗರ ಆಗಿದೆ. ಹಾಗಾಗಿ ಒಂದು ವಾರದೊಳಗೆ ಸೂಕ್ತ ಸಮಾಜಾಯಿಷಿ ನೀಡಿ. ಇಲ್ಲವಾದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ನೋಟಿಸ್​​ ಜಾರಿ ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.