ಚಿಕ್ಕಬಳ್ಳಾಪುರ: ಮೊನ್ನೆ ಮಂಗಳವಾರ ಸಂಜೆ ಚಿಕ್ಕಬಳ್ಳಾಪುರ ನಗರ ಠಾಣೆಗೆ (Chikkaballapur Police) ಬಂದ ಕಿರಣ್ ಹಾಗೂ ಆತನ ಪತ್ನಿ, ತಮ್ಮ ಒಡನಾಡಿ ಯುವಕ ಕೌಶಿಕ್ ಎಂಬಾತ ಚಿಕ್ಕಬಳ್ಳಾಪುರ ನಗರದ ವಾಪಸಂದ್ರದಿಂದ ಕಾಣೆಯಾಗಿದ್ದಾನೆ. ಈಗ ಯಾರೊ ಅಪರಿಚಿತರು ಪೋನ್ ಮಾಡಿ ಆತನನ್ನ ಕಿಡ್ನಾಪ್ (Kidnap) ಮಾಡಿರುವುದಾಗಿಯೂ, 5 ಲಕ್ಷ ಹಣ ತಂದು ಕೊಟ್ಟರೆ ಬಿಡುಗಡೆ ಮಾಡ್ತೀವಿ, ಇಲ್ಲ ಅಂದ್ರೆ ಅಷ್ಟೇಯಾ ಅಂತಾ ಒದರಿದ್ದಾರೆ. ದಮ್ಮಯ್ಯ ಸಹಾಯ ಮಾಡಿ ಅಂತ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಕಿಡ್ನಾಪ್ ಕೇಸು! ಅದೂ ಚಿಕ್ಕಬಳ್ಳಾಪುರ ನಗರದಲ್ಲಿ ಕಿಡ್ನಾಪ್ ನಡೆಯೋಕ್ಕೆ ಸಾಧ್ಯವಾ? ನೋ ವೇ, ಛಾನ್ಸೇ ಇಲ್ಲಾ! ಅಂತಾ ಪೊಲೀಸರೂ ಕೆಲಕಾಲ ದೂರನ್ನು ನಂಬಿರಲಿಲ್ಲ. ಅಷ್ಟರಲ್ಲೇ ಬಂತಲ್ಲಾ… ದೂರುದಾರರ ಪೋನ್ ಗೆ ಅಪರಿಚಿತ ವ್ಯಕ್ತಿಗಳಿಂದ ಮೊಬೈಲ್ ಕರೆ! ಕರೆ ಮಾಡಿದವರೇ… ಎಲ್ಲಿ ಇದ್ದೀರಿ? 5 ಲಕ್ಷ ಹಣ ತೆಗೆದುಕೊಂಡು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಗೆ ಬನ್ನಿ ಅಂತಾ ಗತ್ತುಗಮ್ಮತ್ತಿನಿಂದಲೇ ಫರ್ಮಾನು ಹೊರಡಿಸಿದ್ದರು. ಇದನ್ನ ಕೇಳಿಸಿಕೊಂಡ ಅಲ್ಲಿದ್ದ ಪೊಲೀಸರು ಕಿಡ್ನಾಪರ್ ಗಳೇ ಪೋನ್ ಮಾಡಿದಾರೆ ಅಂತಾ ಎಣಿಸಿದರು. ತಕ್ಷಣ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್. ನಾಗೇಶ ಹಾಗೂ ಚಿಕ್ಕಬಳ್ಳಾಪುರ ಪೊಲೀಸ್ ಉಪಾಧೀಕ್ಷಕ ವಿ.ಕೆ. ವಾಸುದೇವ್ ಗಮನಕ್ಕೆ ಕಿಡ್ನಾಪ್ ವಿಚಾರ ಮುಟ್ಟಿಸಿದ್ರು. ತಕ್ಷಣ ಜಿಲ್ಲೆಯ ಪೊಲೀಸರು ಅಲರ್ಟ್ ಆಗಿಬಿಟ್ಟರು.
ಮುಂದೆ ನಡೆದದ್ದೇ ರಣರೋಚಕ ಕಾರ್ಯಾಚರಣೆ!
ಇತ್ತ ಕೌಶಿಕ್ ನನ್ನು ಕಿಡ್ನಾಪ್ ಮಾಡಿದ್ದಾಗಿ ಹಾಗೂ ಹಣಕ್ಕಾಗಿ ಪೋನ್ ನಲ್ಲಿ ಆರೋಪಿಗಳು ಬೇಡಿಕೆ ಇಟ್ಟಿದ್ರು. ತಕ್ಷಣ ತಡಮಾಡದ ಡಿ.ವೈ.ಎಸ್ಪಿ ವಾಸುದೇವ್… ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪಿ.ಎಸ್.ಐ ಸಂದೀಪ್ ಪೂಜಾರಿ, ವೃತ್ತ ನಿರೀಕ್ಷಕ ಬಿ ರಾಜು ಅವರಿಗೆ ಬುಲಾವ್ ನೀಡಿದರು. ತಡ ಮಾಡದೆ ತಕ್ಷಣ ಪ್ರತ್ಯೇಕ ತಂಡ ಕಟ್ಟಿಕೊಂಡು ಫೀಲ್ಡಿಗಿಳಿಯುವಂತೆ ಫರ್ಮಾನು ಹೊರಡಿಸಿದ್ರು.
ಆ ಕಡೆಗೆ ಒಂದು ತಂಡ, ಇನ್ನೊಂದು ಕಡೆಗೆ ಇನ್ನೊಂದು ತಂಡ ಅಂತಾ ಕಾರ್ಯಾಚರಣೆ ಆರಂಭವಾಯಿತು. ಮತ್ತೊಂದೆಡೆ ಕಿರಣ್ ಹಾಗೂ ಆತನ ಪತ್ನಿಯ ನಂಬರ್ ಗೆ ಕಿಡ್ನಾಪರುಗಳು ಕರೆ ಮಾಡಿ, ಹಣಕ್ಕಾಗಿ ಬೆದರಿಕೆ ಹಾಕುವ ಪ್ರೋಗ್ರಾಂ ಜಾರಿಯಲ್ಲಿಟ್ಟಿದ್ದರು. ಇದ್ರಿಂದ ಪೊಲೀಸರು ದೂರುದಾರರನ್ನು ಕರೆದುಕೊಂಡು ಬಾಗೇಪಲ್ಲಿಯತ್ತ ರೊಯ್ಯನೆ ತಮ್ಮ ತಮ್ಮ ವಾಹನಗಳಲ್ಲಿ ಹೊರಟುಬಿಟ್ಟರು. ಆದರೆ ಕೆಲವೊತ್ತಿನಲ್ಲಿಯೇ ಮತ್ತೆ ಕರೆ ಮಾಡಿದ ಅಪಹರಣಕಾರರು ಬಾಗೇಪಲ್ಲಿ ಕಡೆಗೆ ಬೇಡ, ವಿರುದ್ಧ ದಿಕ್ಕಿಗೆ ನಂದಿ ಹಿಲ್ಸ್ ಹತ್ತಿರ ಬನ್ನಿ ಅಂತ ಅವಾಜ್ ಹಾಕಿದ್ದಾರೆ. ಇದ್ರಿಂದ ಪೊಲೀಸರ ಒಂದು ತಂಡ ಬಾಗೇಪಲ್ಲಿಯತ್ತಲೂ, ಮತ್ತೊಂದು ತಂಡ ನಂದಿ ಹಿಲ್ಸ್ ಕಡೆಗೂ ಕಾರ್ಯಾಚರಣೆ ವಿಸ್ತರಿಸಿತು.
ಫೋನ್ ಕರೆಯ ಜಾಡು ಹಿಡಿದು ತನಿಖೆ:
ಚಿಕ್ಕಬಳ್ಳಾಪುರ ನಗರ ಗ್ರಾಮಾಂತರ ಠಾಣೆಗಳ ಪೊಲೀಸರು ಹಾಗೂ ವೃತ್ತ ನಿರೀಕ್ಷಕ ರಾಜು ರವರ ಕಚೇರಿಯ ಕ್ರೈಮ್ ಸಿಬ್ಬಂದಿಗಳು, ಫುಲ್ ಅಲರ್ಟ್ ಆಗಿ ತನಿಖೆ ಆರಂಭಿಸಿದ್ದರು… ಮೊದಲು ಫೋನ್ ನಂಬರ್ ಲೋಕೇಷನ್ ಬಾಗೇಪಲ್ಲಿ ತೋರಿಸಿತ್ತು. ಆದರೆ ನಂತರ ನಂದಿ ಹಿಲ್ಸ್ ತೋರಿಸಿದೆ! ಆದ್ರೆ ಎರಡೂ ಕಡೆ ಆರೋಪಿಗಳು ಮಾತ್ರ ಪತ್ತೆಯಾಗಲಿಲ್ಲ. ಇತ್ತ ಚಿಕ್ಕಬಳ್ಳಾಪುರ ಜಿಲ್ಲಾ ಎಸ್ಪಿ ಕಚೇರಿಯ ಸೈಬರ್ ಸಿಬ್ಬಂದಿ ಫೊನ್ ನಂಬರ್ ಚಲನೆಯನ್ನು ದಾಖಲಿಸುತ್ತಾ ಹೋಗಿದ್ದಾರೆ. ಅಷ್ಟೊತ್ತಿಗೆ ಕಿಡ್ನಾಪರ್ಸ್ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಪಟ್ಟಣದತ್ತ ಮುಖ ಮಾಡಿಯಾಗಿತ್ತು. ಮತ್ತೊಂದೆಡೆ, ಮತ್ತೆ ಕಿರಣ್ ಗೆ ಕರೆ ಮಾಡಿದ ಕಿಡ್ನಾಪರ್ಸ್ ಮಂಚೇನಹಳ್ಳಿಗೆ ಹಣ ತೆಗೆದುಕೊಂಡು ಬರುವಂತೆ ಸೂಚಿಸಿದ್ರು.
ಎರಡು ಪೊಲೀಸ್ ತನಿಖಾ ತಂಡಗಳು ಮಂಚೇನಹಳ್ಳಿಗೆ ದೌಡು:
ಕಿಡ್ನಾಪರ್ಸ್ ಮೊಬೈಲ್ ನಂಬರ್ ಲೊಕೇಷನ್ ಮಂಚೇನಹಳ್ಳಿಯಲ್ಲಿ ಕಾಣಿಸುತ್ತಿದ್ದಂತೆ… ಪೊಲೀಸರ ಎರಡು ತಂಡಗಳು ಮಂಚೇನಹಳ್ಳಿಯಲ್ಲಿ ಬೀಡು ಬಿಟ್ಟಿದ್ರು. ಕಿಡ್ನಾಪರ್ಸ್ ಹೇಳಿದ ಕಾರು ಹಾಗೂ ಅದರ ನಂಬರ್ ಅನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಆದ್ರೆ ಅಲ್ಲಿಗೆ ಬಂದ ಮತ್ತೊಂದು ಕಾರಿಗೆ ಕಿಡ್ನಾಪ್ ಆಗಿದ್ದ ಕೌಶಿಕ್ ನನ್ನು ಹತ್ತಿಸಿಕೊಂಡು ಎರಡು ಕಾರುಗಳು ಹೊರಡಬೇಕಿತ್ತು. ಅಷ್ಟರಲ್ಲಿಯೇ ಮಫ್ತಿಯಲ್ಲಿದ್ದ ಚಿಕ್ಕಬಳ್ಳಾಪುರ ಪೊಲೀಸರು ಕಾರುಗಳನ್ನು ಸುತ್ತುವರೆದು ಕಾರಿನಲ್ಲಿದ್ದ ಯುವಕರನ್ನು ಹೊರಗೆ ಎಳೆದಿದ್ದರು. ಅಷ್ಟೊತ್ತಿಗೆ ಭಯ, ಗಾಬರಿಗೊಂಡ ಆ ಅಪರಿಚಿತ ನಾಲ್ಕು ಜನ ಕಿಡ್ನಾಪರುಗಳು… ಥರಗುಟ್ಟುತ್ತಲೇ… ತಾವು ಹಾವೇರಿ ಜಿಲ್ಲಾ ಪೊಲೀಸರು ಅಂತ (Haveri Police) ಬಾಯಿಬಿಟ್ಟಿದ್ದರು!
ಹಾವೇರಿ ಪೊಲೀಸರೇ ಆಗಿದ್ದರೂ ಯಾಕೆ ಕೌಶಿಕ್ ನನ್ನು ಕಿಡ್ನಾಪ್ ಮಾಡಿದ್ದು? ಅನ್ನೋ ಅನುಮಾನ, ಗೊಂದಲ ಚಿಕ್ಕಬಳ್ಳಾಪುರ ಪೊಲೀಸರನ್ನು ಕಾಡಿದೆ. ಅಸಲಿ ಪೊಲೀಸರು ಅವರವರ ಬಳಿ ಇದ್ದ ಐ.ಡಿ. ಕಾರ್ಡಗಳನ್ನು ಸಹ ತೋರಿಸಿದ್ದಾರೆ. ಅವು ಅಸಲಿ ಕಾರ್ಡಗಳೇ ಆಗಿದ್ದವು. ಆದ್ರೂ ನಂಬದ ಪೊಲೀಸರು… ಅಪರಿಚಿತ ಯುವಕರನ್ನು ಗೌರಿಬಿದನೂರು ನಗರ ಪೊಲೀಸ್ ಠಾಣೆಗೆ ಕರೆ ತಂದು ಹೆಚ್ಚಿನ ಮಾಹಿತಿ ಪಡೆದಿದ್ದಾರೆ. ಕೊನೆಗೆ ಅಪರಿಚಿತ ಯುವಕರು (ಕಿಡ್ನಾಪರ್ಸ್) ಹಾವೇರಿ ಜಿಲ್ಲಾ ಸೈಬರ್ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯ ಸಿಬ್ಬಂದಿಗಳು ಅಂತ ಗೊತ್ತಾಗುತ್ತಿದ್ದಂತೆ ಹಾವೇರಿ ಸೈಬರ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸಂತೋಷ ಎಂ. ಪಾಟೀಲರನ್ನ ಸಂಪರ್ಕಿಸಿ ಗುರುತು ಧೃಡಪಡಿಸಿಕೊಂಡಿದ್ರು.
ಚಿಕ್ಕಬಳ್ಳಾಪುರದ ಕೌಶಿಕ್ ನನ್ನು ಕಿಡ್ನಾಪ್ ಮಾಡಿ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದು ಹಾವೇರಿ ಜಿಲ್ಲೆಯ ಅಧಿಕೃತ ಪೊಲೀಸರು ಎನ್ನುವುದು ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರದ ಪೊಲೀಸರು ನಿರಾಳರಾಗಿದ್ದರು. ಕನಿಷ್ಠ ಕಾಮನ್ ಸೇನ್ಸ್ ಇಲ್ವಾ… ಅರೆಸ್ಟ್ ಮಾಡಿದ್ದೀರಾ? ಇಲ್ಲಾ ವಿಚಾರಣೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಅಂತ ಸ್ಥಳೀಯ ಠಾಣೆಗೆ ಒಂದು ಮಾತು ತಿಳಿಸಬಾರದಾ? ಅಂತ ಗದರುವ ದನಿಯಲ್ಲೇ ವಿಚಾರಿಸಿಕೊಂಡಿದ್ದಾರೆ ಚಿಕ್ಕಬಳ್ಳಾಪುರ ಪೊಲೀಸರು!
ಅಸಲಿಗೆ ಚಿಕ್ಕಬಳ್ಳಾಪುರದ ಕೌಶಿಕ್ ಹಾಗೂ ಆತನ ಬಾಸ್ ಕಿರಣ್ ಹಾಗೂ ಕಿರಣ್ ಪತ್ನಿ ಸೇರಿಕೊಂಡು ಹಾವೇರಿಯಲ್ಲಿ ರೈತರಿಗೆ ವಂಚನೆ ಮಾಡಿದ್ದರಂತೆ. ರೈತರು ಬೆಳೆದ ಫಸಲನ್ನು ಖರೀದಿ ಮಾಡಿ ಹಣವನ್ನು ನೀಡದೆ ಸತಾಯಿಸುತ್ತಿದ್ದರಂತೆ. ತಾವು ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್ ಗಳಿಗೆ ತರಕಾರಿ ಹಾಗೂ ವಿವಿಧ ಮಾಲುಗಳನ್ನು ಖರೀದಿ ಮಾಡಿ ಸರಬರಾಜು ಮಾಡ್ತೀವಿ ಅಂತ ಹೇಳಿ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಖರೀದಿ ಮಾಡಿ ನ್ಯಾಯಯುತವಾಗಿ ರೈತರಿಗೆ ನೀಡಬೇಕಾಗಿದ್ದ ಹಣವನ್ನು ನೀಡಿರಲಿಲ್ಲ. ಇದ್ರಿಂದ ಹಾವೇರಿಯ ರೈತರು ಹಾವೇರಿಯ ಸೈಬರ್ ಠಾಣೆಯಲ್ಲಿ ಕೌಶಿಕ್ ಹಾಗೂ ಆತನ ಬಾಸ್ ಕಿರಣ್ ಹಾಗೂ ಕಿರಣ್ ಪತ್ನಿಯ ಮೇಲೆ ದೂರು ದಾಖಲು ಮಾಡಿದ್ದರು. ಇದ್ರಿಂದ ಹಾವೇರಿಯ ಪೊಲೀಸರು ಚಿಕ್ಕಬಳ್ಳಾಪುರದಲ್ಲಿ ಕೈಗೆ ಸಿಕ್ಕ ಕೌಶಿಕ್ ಹಾಗೂ ಆತನ ಕಾರನ್ನು ವಶಕ್ಕೆ ಪಡೆದು ವಂಚನೆಯ 5 ಲಕ್ಷ ಹಣದ ರಿಕವರಿಗೆ ಕಿಡ್ನಾಪ್ ಡ್ರಾಮಾ ಮಾಡಿದ್ದಾರೆ. ಕೊನೆಗೆ ಚಿಕ್ಕಬಳ್ಳಾಪುರ ಪೊಲೀಸರ ಸಹಕಾರದಿಂದ ಆರೋಪಿ ಕೌಶಿಕ್ ಹಾಗೂ ಕಿರಣ್ ನನ್ನು ಹಾವೇರಿಗೆ ಕರೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದ್ರೆ ಹಣ ರಿಕವರಿಗೆ ಕಿಡ್ನಾಪ್ ಡ್ರಾಮಾ ಮಾಡಿದ ಹಾವೇರಿ ಪೊಲೀಸರು ಪೇಚಿಗೆ ಸಿಲುಕಿದ್ದು ವಿಪರ್ಯಾಸ.
ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ
Published On - 5:46 pm, Thu, 29 December 22